ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದ ಕಾರ್ಮೋಡದ ಮಧ್ಯೆ ಶಾಸಕರ ‘ಪ್ರಮಾಣ’

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವೀರರಂತೆ ಬಂದರೂ ಹೊಸ ಶಾಸಕರ ಮುಖಗಳಲ್ಲಿ ಶನಿವಾರ ಸಂತಸ ಇರಲಿಲ್ಲ. ಆತಂಕ, ದುಗುಡ ಮನೆ ಮಾಡಿತ್ತು. ಭದ್ರತೆಯ ಸರ್ಪಗಾವಲಿನಲ್ಲೇ 221 ಶಾಸಕರು ವಿಧಾನಸಭೆಯ ಸಭಾಂಗಣದೊಳಗೆ ಕಾಲಿಟ್ಟಿದ್ದೂ ಅಲ್ಲದೆ, 15ನೇ ವಿಧಾನಸಭೆಯ ಶಾಸಕರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಆಡಳಿತ ಮತ್ತು ವಿರೋಧಿ ಪಾಳಯದಲ್ಲಿ ದಿವ್ಯ ಮೌನದ ಕಾರ್ಮೋಡ ಆವರಿಸಿತ್ತು. ಆಗೊಮ್ಮೆ, ಈಗೊಮ್ಮೆ ನಗುವಿನ ವಿನಿಮಯ ಬಿಟ್ಟರೆ, ಬಿರುಗಾಳಿ ಏಳುವ ಮೊದಲು ಕಂಡು ಬರುವ ಮೌನದ ಲಕ್ಷಣ ಅಲ್ಲಿ ದಟ್ಟವಾಗಿ ಆವರಿಸಿತ್ತು. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಇಂತಹದ್ದೊಂದು ವಾತಾವರಣ ಕಂಡಿರಲಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನೆನಪಿಸಿಕೊಂಡರು.

ಸುಪ್ರೀಂ ಕೋರ್ಟ್‌ ಆದೇಶದಂತೆ ಬೆಳಿಗ್ಗೆ 11ಕ್ಕೆ ವಿಧಾನಸಭೆ ಕಲಾಪ ನಿಗದಿಯಾಗಿತ್ತು. ವಿಧಾನಸೌಧ ನಾಲ್ಕೂ ಕಡೆ ಭದ್ರತಾ ಪಹರೆ ಇದ್ದ ಏಳು ಸುತ್ತಿನ ಕೋಟೆಯಂತಿತ್ತು. ಎಲ್ಲ ಶಾಸಕರನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ಅವರವರ ಪಕ್ಷಗಳ ಪ್ರಮುಖರು ಬಸ್‌ನಲ್ಲಿ ಕರೆತಂದರು. ಎಲ್ಲರಿಗಿಂತ ಮೊದಲು, ಕಾಂಗ್ರೆಸ್‌ ಸದಸ್ಯರು ತಮಗೆ ನಿಗದಿಯಾಗಿದ್ದ ಆಸನಗಳಲ್ಲಿ ಕುಳಿತಿದ್ದರು. ಬಳಿಕ ಬಿಜೆಪಿ ಸದಸ್ಯರು ಜೊತೆಯಾಗಿ ಬಂದು ಕುಳಿತರು.

ದೈವ, ಮುಹೂರ್ತ ಮತ್ತು ಗಳಿಗೆಯ ಮೇಲೆ ಅತಿಯಾದ ನಂಬಿಕೆ ಇಟ್ಟಿರುವ ಜೆಡಿಎಸ್‌ ಶಾಸಕರು 11 ಗಂಟೆ 5 ನಿಮಿಷಕ್ಕೆ ಸರಿಯಾಗಿ ಸದನ ಪ್ರವೇಶಿಸಿದರು. ಆ ವೇಳೆಗಾಗಲೇ ವಂದೇ ಮಾತರಂ ಮುಗಿದು ಪ್ರತಿಜ್ಞಾ ವಿಧಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ, ಕಲಾಪ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಚಾಚೂ ತಪ್ಪದೆ ನಡೆಸಿದರು. ಆರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಳಿಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಯಡಿಯೂರಪ್ಪ ತಮ್ಮ ಆಸನಕ್ಕೆ ಬಂದು ಕುಳಿತುಕೊಳ್ಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ನಮಸ್ಕರಿಸಿ ಮುಗುಳು ನಗೆ ಬೀರಿದರು. ಸಿದ್ದರಾಮಯ್ಯ ಅದಕ್ಕೆ ಪ್ರತಿಯಾಗಿ ವಂದಿಸಿದರು. ಆಡಳಿತ ಮತ್ತು ವಿರೋಧಿ ಸಾಲಿನಲ್ಲಿ ಕುಳಿತ ಶಾಸಕರ ನಡುವೆ ಸೌಹಾರ್ದದ ವಿನಿಮಯ ಕಾಣಿಸಲಿಲ್ಲ.

* ಬಿಜೆಪಿ ಶಾಸಕ ಪ್ರಭು ಚವಾಣ್ ಅವರು ಲಂಬಾಣಿ ಉಡುಪು ಮತ್ತು ಭರ್ಜರಿ ಪೇಟಾದಲ್ಲಿ ಗಮನ ಸೆಳೆದರು.

* ಸಿ.ಟಿ.ರವಿ, ರಘು ಕೇಸರಿ ಶಾಲು ಹೊದ್ದುಕೊಂಡು ಬಂದಿದ್ದರು.

* ಪ್ರತಿ ಶಾಸಕರೂ ಚುನಾವಣಾ ಆಯೋಗ ನೀಡಿದ್ದ ಪ್ರಮಾಣ ಪತ್ರವನ್ನು ಅತ್ಯಂತ ಜತನದಿಂದ ಇಟ್ಟುಕೊಂಡಿದ್ದರು. ಪ್ರತಿಜ್ಞಾ ವಿಧಿ ಸ್ವೀಕರಿಸುವ ಮುನ್ನ ಅದನ್ನು ಸಚಿವಾಲಯ ಸಿಬ್ಬಂದಿಗೆ ತೋರಿಸುತ್ತಿದ್ದರು. ಪ್ರತಿಜ್ಞಾ ವಿಧಿ ಸ್ವೀಕರಿಸಿ ತಮ್ಮ ಆಸನಕ್ಕೆ ಬಂದು ಕೂತವರಿಗೆ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ವಿಪ್‌ ಜಾರಿ ಮಾಡಿದ ಪ್ರತಿ ಹಂಚಿದರೆ, ಬಿಜೆಪಿ ಶಾಸಕರಿಗೆ ಸುನಿಲ್‌ ಕುಮಾರ್‌ ಪಕ್ಷದ ವಿಪ್‌ ಪ್ರತಿ ವಿತರಿಸಿದರು.

*ಸಚಿವಾಲಯ ಸಿಬ್ಬಂದಿ ಸಂಜೆ 4ಕ್ಕೆ ಸರಿ ಹೊಂದುವಂತೆ ಶಾಸಕರನ್ನು ಕಂತು ಕಂತಿನಲ್ಲಿ ಕರೆದು ನಿಲ್ಲಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕೆಲವೊಮ್ಮೆ 10 ಶಾಸಕರಿಗೆ, ಇನ್ನು ಕೆಲವೊಮ್ಮೆ ಐದು ಜನರಿಗೆ ಹೀಗೆ 4 ಗಂಟೆಗೆ ಸರಿಯಾಗಿ ಪ್ರತಿಜ್ಞಾ ವಿಧಿ ಬೋಧನೆ ಪ್ರಕ್ರಿಯೆ ಪೂರ್ಣಗೊಳಿಸಿದರು.

* ಶಾಸಕರ ತಲೆ ಎಣಿಕೆ ಮಾಡಿ, ಗುಂಪಿನಿಂದ ಯಾವುದೇ ಶಾಸಕರು ತಪ್ಪಿಸಿಕೊಂಡು ಹೋಗದಂತೆ ಡಿ.ಕೆ.ಶಿವಕುಮಾರ್‌ ಸದನದ ಒಳಗೆ ನಿಗಾ ಇಟ್ಟಿದ್ದರೆ, ಹೊರಗೆ ಅವರ ಸಹೋದರ ಡಿ.ಕೆ.ಸುರೇಶ್‌ ಹದ್ದಿನ ಕಣ್ಣಿಟ್ಟಿದ್ದರು. ಯಾವುದೇ ಶಾಸಕರು ವಿಧಾನಸೌಧ ಬಿಟ್ಟು ಹೊರ ಹೋಗದಂತೆ ಪಕ್ಷದ ಮುಖಂಡರ ಬಿಗಿ ಪಹರೆಯೂ ಇತ್ತು.

* ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ತಮ್ಮ ಸರದಿ ಬರುವವರೆಗೆ ಕುಳಿತಲ್ಲಿಯೇ ಪ್ರತಿಜ್ಞಾ ವಿಧಿಯ ಪ್ರತಿಯನ್ನು ಹಿಡಿದುಕೊಂಡು ಪದೇ ಪದೇ ಗಟ್ಟಿಯಾಗಿ ಉರು ಹೊಡೆಯುತ್ತಿದ್ದರು. ವಾಟಾಳ್‌ ನಾಗರಾಜ್‌ ಅವರನ್ನು ಸೋಲಿಸಿದವರು ಇವರೇ ಎಂದು ಪತ್ರಿಕಾ ಗ್ಯಾಲರಿಯಲ್ಲಿ ಕುಳಿತಿದ್ದ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ ಹೇಳಿದರು.

*ಶಾಸಕರು ಕಾಫಿ ಸೇವಿಸಲು ಮಾತ್ರ ಮೊಗಸಾಲೆಗೆ ಹೋಗಬಹುದಿತ್ತು. ಅದರಿಂದ ಆಚೆಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿಯನ್ನು ನಿರ್ಮಿಸಲಾಗಿತ್ತು. ಮುಂದೇನಾಗಬಹುದು ಎಂಬ ಕುತೂಹಲ ಮೊಗಸಾಲೆಯಲ್ಲಿದ್ದ ಬಹಳಷ್ಟು ಶಾಸಕರಲ್ಲಿತ್ತು. ಸದನದ ಒಳಗೆ ಕೊನೆಯವರೆಗೂ ಒಂದು ಬಗೆಯ ಬಿಗುವಿನ ವಾತಾವರಣವಿತ್ತು.

ಬರಿಗಾಲಿನಲ್ಲಿ ಬಂದರು...!

ಜೆಡಿಎಸ್‌ನ ಹಿರಿಯ ಶಾಸಕ ಎಚ್‌.ಡಿ.ರೇವಣ್ಣ ತಮ್ಮ ನಂಬಿಕೆಯಂತೆ ವಿಧಾನಸಭೆಗೆ ಬರಿಗಾಲಿನಲ್ಲಿ ನಡೆದುಕೊಂಡು ಬಂದರು. ಪಕ್ಷದ ಶಾಸಕರ ಜೊತೆಗೆ ಸದನ ಪ್ರವೇಶಿಸದೇ ಅವರು, 15– 20 ನಿಮಿಷಗಳ ಬಳಿಕವೇ ಕಾಲಿಟ್ಟರು.

ಈ ಮಧ್ಯೆ ರೇವಣ್ಣ ಸ್ಪೀಕರ್‌ ಅವರಿಗೊಂದು ಚೀಟಿ ನೀಡಿ, ಅದರಲ್ಲಿ ಇಂತಹ ಸಮಯದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಸ್ಪೀಕರ್‌ ಬೋಪಯ್ಯ ನಗುತ್ತಲೇ ‘ಹಾಗೆಲ್ಲ ಮಾಡಲು ಆಗುವುದಿಲ್ಲ. ನಿಮ್ಮ ಸರದಿ ಬಂದಾಗಲೇ ಕರೆಯುತ್ತೇವೆ’ ಎಂದರು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ರೇವಣ್ಣ ಅಲ್ಲಿಂದ ಹೋದರು.

ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ, ‘ಆ ರೀತಿ ಟೈಮು ಕೇಳಿಲ್ಲ. ನನ್ನದು ಸ್ವಾತಿ ನಕ್ಷತ್ರ. ಯಾವುದೇ ಟೈಮಿನಲ್ಲಿ ಪ್ರಮಾಣ ತೆಗೆದುಕೊಂಡರೂ ಶುಭವೇ ಆಗಿರುತ್ತದೆ’ ಎಂದು ನಕ್ಕು ತಮ್ಮ ಆಸನದತ್ತ ನಡೆದರು.

ಪ್ರತಿಜ್ಞಾ ವಿಧಿ ಸ್ವೀಕರಿಸಿದರು

ಯಡಿಯೂರಪ್ಪ ‘ಭಗವಂತ’ ಮತ್ತು ‘ರೈತ’ರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡರೆ, ಸಿದ್ದರಾಮಯ್ಯ ‘ಸತ್ಯ– ನಿಷ್ಠೆ’ಯ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಮಾನ್ವಿ ಶಾಸಕ ವೆಂಕಟಪ್ಪ ನಾಯಕ ‘ಕುಮಾರಸ್ವಾಮಿ’ ಹೆಸರಿನಲ್ಲಿ, ಕುಣಿಗಲ್‌ನ ಡಾ. ರಂಗನಾಥ್‌ ಅವರು‘ಡಿ.ಕೆ.ಶಿವಕುಮಾರ್‌’ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದು ವಿಶೇಷವಾಗಿತ್ತು. ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ‘ಈಶ್ವರ’, ‘ಅಲ್ಲಾ’ ಮತ್ತು ಹಿರೇಕೆರೂರು ಗ್ರಾಮದೇವತೆ ‘ದುರ್ಗಾ ದೇವಿ’ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಒಂದು ಕಾಲದ ರಾಜಕೀಯ ಎದುರಾಳಿಗಳಾಗಿದ್ದ, ಈಗ ಮೈತ್ರಿ ಕೂಟದ ಸ್ನೇಹಿತರಾಗಿರುವ ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅಕ್ಕಪಕ್ಕದಲ್ಲಿ ನಿಂತು ಪ್ರಮಾಣ ಸ್ವೀಕರಿಸಿದರು. ಕನಕಪುರ ಮತ್ತು ಚನ್ನಪಟ್ಟಣ ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳಾಗಿರುವುದರಿಂದ ಅವರನ್ನು ಒಟ್ಟಿಗೆ ನಿಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT