ಶುಕ್ರವಾರ, ಫೆಬ್ರವರಿ 26, 2021
22 °C
ಬೈಕಂಪಾಡಿ ಪ್ರದೇಶದಿಂದ ಹೊರ ‌ಜಿಲ್ಲೆಗಳ ಊರಿಗೆ

ಸುರತ್ಕಲ್‌: ತವರಿಗೆ ಮರಳಿದ 941 ವಲಸೆ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಊರಿಗೆ ತೆರಳಲು ಸುರತ್ಕಲ್‌ನಲ್ಲಿ ಕಾದು ಕುಳಿತಿದ್ದ ಕಾರ್ಮಿಕರು

ಸುರತ್ಕಲ್: ‘ಈ ಪ್ರದೇಶದಲ್ಲಿ ಇಲ್ಲಿ ತನಕ 941 ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ವಲಸೆ ಕಾರ್ಮಿಕರು ತವರೂರಿಗೆ ತೆರಳಲು ಬಾಕಿ ಇದ್ದು, ಅವರನ್ನು ಕಳುಹಿಸುವ ವ್ಯವಸ್ಥೆ ಪ್ರಗತಿಯಲ್ಲಿದೆ. ಅವರನ್ನು ಗುರುತಿಸುವ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಸುರತ್ಕಲ್ ಠಾಣಾಧಿಕಾರಿ ಚಂದ್ರಪ್ಪ ಕೆ. ಹೇಳಿದರು.

ಅನ್ಯ ರಾಜ್ಯದ ಕಾರ್ಮಿಕರದ್ದೇ ಸಮಸ್ಯೆ; ಸುರತ್ಕಲ್, ಬೈಕಂಪಾಡಿ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳು ಇರುವುದರಿಂದ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅನ್ಯ ರಾಜ್ಯದ ಕಾರ್ಮಿಕರು ತಮ್ಮ ತವರೂರಿಗೆ ತೆರಳುವ ತವಕ ಇದೆ. ಬಹಳಷ್ಟು ಕೂಲಿಕಾರ್ಮಿಕರು ಪೊಲೀಸ್ ಠಾಣೆಗೆ ಬಂದು ತವರೂರಿಗೆ ತೆರಳಲು ಅನುಮತಿ ಯಾಚಿಸುತ್ತಿದ್ದಾರೆ ಎಂದು ತಿಳಿಸಿದರು.

ಹೊರರಾಜ್ಯದ ಕಾರ್ಮಿಕರು ಅವರ ತವರೂರಿಗೆ ತೆರಳಲು ರಾಜ್ಯ ಸರ್ಕಾರವು ಹಸಿರು ನಿಶಾನೆ ನೀಡಿದ ನಂತರ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅವರಿಗೆ ಅರೋಗ್ಯ ತಪಾಸಣೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಬೇಕು. ಸಮರ್ಪಕ ಸಾರಿಗೆ ವ್ಯವಸ್ಥೆ ಪ್ರಾರಂಭವಾದ ನಂತರವೇ ತವರೂರ ಕನಸು ನನಸಾಗಬಹುದು ಎಂದು ಕಾರ್ಮಿಕ ಮುಖಂಡರೊಬ್ಬರು ತಿಳಿಸಿದರು.

ಕೈಗಾರಿಕಾ ನಿರ್ಮಾಣ ಕೆಲಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಕಂಪನಿಗಳ ಗುತ್ತಿಗೆದಾರರು ಕರೆ ತಂದಿದ್ದು, ಇದೀಗ ದಿಢೀರ್‌ ಲಾಕ್‌ಡೌನ್ ಆಗಿದ್ದರಿಂದ ಕೆಲವೊಂದು ಹೊರರಾಜ್ಯದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರನ್ನು ಕರೆ ತಂದ ಗುತ್ತಿಗೆ ಕಾರ್ಮಿಕರು ಕೂಡ ನಾಪತ್ತೆಯಾಗಿದ್ದಾರೆ. ಇದರಿಂದ ಸಂಕಷ್ಟದಲ್ಲಿದ್ದಾರೆ.

ಮೂಲಸೌಕರ್ಯಕ್ಕೆ ಆದ್ಯತೆ: ‘ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಹೊರರಾಜ್ಯದ ಕಾರ್ಮಿಕರಿದ್ದು, ಅವರನ್ನು ಅವರ ತವರೂರಿಗೆ ಕಳುಹಿಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಅವರಿಗೆ ದೈನಂದಿನ ಊಟೋಪಾಚಾರದ ಬಗ್ಗೆಯೂ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದು, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಅವರನ್ನು ಗುರುತಿಸಿ ಅವರ ಮೂಲಸೌಕರ್ಯಕ್ಕೆ ಧಕ್ಕೆ ಅಗದಂತೆ ಕ್ರಮ ವಹಿಸಲು ಸೂಚಿಸಿದ್ದೇನೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು