ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡಾ ಟು ಮಂಗಳೂರು: ಪಶ್ಚಿಮ ಬಂಗಾಳದಿಂದ ಕಾರ್ಮಿಕರನ್ನು ಕರೆತರಲು ವಿಶೇಷ ಬಸ್

2,550 ಕಿ.ಮೀ. ಅಂತರ | ಕಾರ್ಮಿಕರಿಗೆ ವಿಮಾನ ಸೌಲಭ್ಯ ಕಲ್ಪಿಸಿದ್ದ ಕಾರ್ಡೋಜಾ ಮತ್ತೊಂದು ಹೆಜ್ಜೆ
Last Updated 23 ಜುಲೈ 2020, 8:38 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮೆರಿಯನ್‌ ಪ್ರೊಜೆಕ್ಟ್ಸ್‌ ಸಂಸ್ಥೆಯು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿನ 35 ಕಾರ್ಮಿಕರನ್ನು ಕರೆತರಲು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದು, ಇದೇ 28ರಂದು ನಗರಕ್ಕೆ ಬಂದು ತಲುಪಲಿದೆ.

ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷರೂ ಆಗಿರುವ ನವೀನ್ ಕಾರ್ಡೋಜಾ, ತಮ್ಮ ಮೆರಿಯನ್ ಪ್ರೊಜೆಕ್ಟ್ಸ್‌ ಸಂಸ್ಥೆಯ ನಿರ್ಮಾಣ ಕಾಮಗಾರಿಗಾಗಿ ₹2 ಲಕ್ಷ ವೆಚ್ಚದಲ್ಲಿ ಕಾರ್ಮಿಕರನ್ನು ಕರೆತರುತ್ತಿದ್ದು, ಇದೇ 18ರಂದು ಬಸ್ ಕಳುಹಿಸಿಕೊಡಲಾಗಿದೆ.

ಇಲ್ಲಿನ ನಿರ್ಮಾಣ ಕ್ಷೇತ್ರದಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ರಾಜ್ಯಗಳ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಹುಮಹಡಿಯ ಕಟ್ಟಡಗಳು ಸೇರಿದಂತೆ ಬೃಹತ್ ನಿರ್ಮಾಣ ಕಾಮಗಾರಿಯಲ್ಲಿ ನೈಪುಣ್ಯತೆ ಹೊಂದಿದ್ದು, ಅವರನ್ನು ನೆಚ್ಚಿಕೊಳ್ಳಲಾಗಿದೆ.

ಆದರೆ, ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಈ ಕಾರ್ಮಿಕರೆಲ್ಲ ತಮ್ಮೂರಿಗೆ ಹಿಂತಿರುಗಿದ್ದರು. ಅನ್‌ಲಾಕ್‌ ಬಳಿಕ ನಿರ್ಮಾಣ ಕ್ಷೇತ್ರವು ತೀವ್ರವಾಗಿ ಕಾರ್ಮಿಕರ ಕೊರತೆ ಎದುರಿಸುತ್ತಿದೆ.

ಕಾರ್ಡೋಜಾ ಅವರು ಈಗಾಗಲೇ ಎರಡು ಬಾರಿ ಕೋಲ್ಕೊತ್ತಾದಿಂದ ತಲಾ ಐವರು ಪರಿಣಿತ ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಯಿಸಿಕೊಂಡಿದ್ದಾರೆ.

‘ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಮಾಲ್ಡಾದಿಂದ ಬರಲು ಸುಮಾರು 370 ಕಿ.ಮೀ. ಪ್ರಯಾಣಿಸಬೇಕು. ಅದಕ್ಕಾಗಿ ಈ ಬಾರಿ ವಿಮಾನದ ಬದಲಾಗಿ, ಸೆಮಿ ಸ್ಲೀಪರ್ ಬಸ್‌ ವ್ಯವಸ್ಥೆ ಮಾಡಲಾಗಿದೆ. ಬಸ್ ಈಗಾಗಲೇ ಕೋಲ್ಕತ್ತಾದಿಂದ ಮಾಲ್ಡಾಕ್ಕೆ ಪ್ರಯಾಣ ಬೆಳೆಸಿದೆ’ ಎಂದು ನವೀನ್ ಕಾರ್ಡೋಜಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಾಲ್ಡಾ ಜಿಲ್ಲೆಯ ಪಶ್ಚಿಮ ಬಂಗಾಳದ ಕೋಲ್ಕೊತ್ತಾದ ಉತ್ತರಕ್ಕಿದ್ದು, ಬಾಂಗ್ಲಾ ದೇಶದ ಗಡಿಯಲ್ಲಿದೆ. ಅಲ್ಲಿಗೆ ಮಂಗಳೂರಿನಿಂದ 2,550 ಕಿ.ಮೀ. ಅಂತರವಿದೆ. ಬಸ್ ಒಟ್ಟಾರೆ ಸುಮಾರು 5,100 ಕಿ.ಮೀ.ಗೂ ಅಧಿಕ ದೂರ ಕ್ರಮಿಸಲಿದೆ.

‘ನಾಲ್ಕೈದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಹೂಡಿಕೆ ಮೇಲಿನ ಬಡ್ಡಿ, ಇತರ ಖರ್ಚುಗಳು ಹೆಚ್ಚಾಗುತ್ತಿವೆ. ನಿಗದಿತ ಸಮಯಕ್ಕೆ ಕಟ್ಟಡ ಪೂರ್ಣಗೊಳಿಸದಿದ್ದರೂ ನಷ್ಟವೇ. ಖರೀದಿದಾರರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳಬೇಕಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT