ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ವ್ಯಾಪಾರವೇ ಜೀವನಾಧಾರ

ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ
Last Updated 22 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಲಾಕ್‌ಡೌನ್ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕುಸಿತ ಹೆಚ್ಚಾಗುತ್ತಿದ್ದು, ಹಲವರಿಗೆ ಮೀನು ವ್ಯಾಪಾರವೇ ಜೀವನಕ್ಕೆ ಆಧಾರವಾಗುತ್ತಿದೆ. ಆದರೆ, ಇತ್ತ ಕಾರ್ಮಿಕರ ಕೊರತೆ, ಆರಂಭಗೊಳ್ಳದ ರಫ್ತು, ಡೀಸೆಲ್ ಹಾಗೂ ನಿರ್ವಹಣಾ ವೆಚ್ಚ ಏರಿಕೆ, ಹವಾಮಾನ ವೈಪರೀತ್ಯದ ಕಾರಣ ಮೀನುಗಾರಿಕಾ ಉದ್ಯಮವೂ ಅಡಕತ್ತರಿಯಲ್ಲಿ ಸಿಲುಕಿದೆ.

‘ನಾನು 20 ವರ್ಷಗಳಿಂದ ಗೂಡ್ಸ್ ಹಾಗೂ ಪ್ರಯಾಣಿಕ ಆಟೊ ಓಡಿಸುತ್ತಿದ್ದೆ. ಆದರೆ, ಲಾಕ್‌ಡೌನ್ ಬಳಿಕ ಬಾಡಿಗೆ–ಕೆಲಸ ಇಲ್ಲದೇ ಮೀನು ವ್ಯಾಪಾರ ಆರಂಭಿಸಿದ್ದೇನೆ. ನನ್ನ ಮಗ ಬಸ್‌ ಚಾಲಕನಾಗಿದ್ದ. ಆತ ನಗರದ ಗರೋಡಿಯಲ್ಲಿ ವ್ಯಾಪಾರ ಆರಂಭಿಸಿದ್ದಾನೆ. ಉದ್ಯಮ ನಡೆಸುತ್ತಿದ್ದ ಇನ್ನೊಬ್ಬ ಮಗ ಪಡೀಲ್ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದಾನೆ’ ಎಂದು ಲಾಕ್‌ಡೌನ್ ಬಳಿಕ ಬಿಕರ್ನಕಟ್ಟೆ ಬಳಿ ಮೀನು ವ್ಯಾಪಾರ ಮಾಡುತ್ತಿರುವ ದೇವಪ್ಪ ತಿಳಿಸಿದರು.

ಅಲ್ಲೇ ಸಮೀಪದ ಕ್ರಾಸ್‌ನಲ್ಲಿ ಮೀನು ಮಾರಾಟ ಮಾಡುತ್ತಿರುವ ಸುಲೈಮಾನ್, ‘ನಮ್ಮದು ಉಳ್ಳಾಲದಲ್ಲಿ ದಿನಸಿ ವ್ಯಾಪಾರವಿತ್ತು. ಆದರೆ, ಲಾಕ್‌ಡೌನ್‌ ಬಳಿಕ ಸಹೋದರರಿಗೆ ಕೆಲಸದ ಸಮಸ್ಯೆಯಾಯಿತು. ಅದಕ್ಕಾಗಿ ನಾನು ಮೀನು ಮಾರುತ್ತಿದ್ದೇನೆ’ ಎಂದು ಪರಿಸ್ಥಿತಿ ತೋಡಿಕೊಂಡರು.

ಲಂಡನ್‌ನಲ್ಲಿ ಪದವಿ ಮುಗಿಸಿಕೊಂಡು ವಾಪಸ್ ಬಂದಿರುವ ವರುಣ್ ಶೇಣವ, ನಂತೂರು ವೃತ್ತದ ಬಳಿಯಲ್ಲಿ ‘ಕಡಲ್’ ಮೀನು ಮಾರಾಟ ಕೇಂದ್ರ ಆರಂಭಿಸಿದ್ದಾರೆ. ಅವರ ಜೊತೆ ಹಲವು ಹುಡುಗರು ಸೇರಿಕೊಂಡಿದ್ದಾರೆ.

‘ನಮ್ಮ ಸಹೋದರ ಸಂಬಂಧಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ನಮ್ಮದು ತರಕಾರಿ ವ್ಯಾಪಾರ’ ಎನ್ನುತ್ತಾರೆ ಇಲ್ಲಿನ ಮಾರ್ಟಿನ್.

ಹೀಗೆ, ಸಾರಿಗೆ, ಹೋಟೆಲ್, ಪ್ರವಾಸಿ, ನಿರ್ಮಾಣ ಸೇರಿದಂತೆ ಹಲವಾರು ಉದ್ಯಮದಲ್ಲಿ ತೊಡಗಿಸಿಕೊಂಡವರುಉದ್ಯೋಗವಿಲ್ಲದೇ, ‘ಮೀನು ಮಾರಾಟ’ವನ್ನೇ ಆಯ್ದು ಕೊಳ್ಳುತ್ತಿದ್ದಾರೆ. ಕೆಲವರು ತರಕಾರಿ ಇತ್ಯಾದಿ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

‘ನಂತೂರಿನಿಂದ ಡೇರಿ ನಡುವೆ ಮೂರರಿಂದ ನಾಲ್ಕು ಮೀನು ಮಾರಾಟಗಾರರು ಇದ್ದರು. ಈಗ 50 ಮೀಟರ್‌ಗೆ ಒಬ್ಬರಂತೆ ಇದ್ದಾರೆ. ಇದನ್ನು ನೀವು ಕದ್ರಿ, ಕಾವೂರು, ಕೊಟ್ಟಾರ, ಎಕ್ಕೂರು ಸೇರಿದಂತೆ ನಗರದಾದ್ಯಂತ ಕಾಣಬಹುದು’ ಎನ್ನುತ್ತಾರೆ ವ್ಯಾಪಾರಿ ತೀರ್ಥ ಪ್ರಸಾದ್.

ಪಾಲಿಕೆಯು ಬೀದಿ ಬದಿ ಮೀನು ವ್ಯಾಪಾರಸ್ಥರಿಗೆ ಸೂಕ್ತ ಮಾರುಕಟ್ಟೆ ಮಾಡಬೇಕು ಎಂದು ಮೀನುಗಾರಿಕಾ ಮುಖಂಡ ರಾಜರತ್ನ ಸನಿಲ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT