ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ತಾಯಿ–ಮಗುವಿಗೆ ಆಸರೆ ‘ಲೇಡಿಗೋಶನ್’

ಪರಿಸರಸ್ನೇಹಿ ವಾತಾವರಣ ಕಲ್ಪಿಸಲು ಸಿದ್ಧತೆ; ಇಂಟರ್‌ಲಾಕ್ ಅಳವಡಿಕೆ ಪ್ರಗತಿಯಲ್ಲಿ:
Last Updated 6 ಫೆಬ್ರುವರಿ 2023, 6:08 IST
ಅಕ್ಷರ ಗಾತ್ರ

ಮಂಗಳೂರು: ಸಾವಿರಾರು ಕುಟುಂಬಗಳಲ್ಲಿ ಹರ್ಷದ ಹೊನಲು ಮೂಡಿಸಿರುವ, ಹೆಣ್ಣಿನ ಮನದಲ್ಲಿ ಅಮ್ಮನಾಗುವ ಕೌತುಕದ ಕ್ಷಣ, ತಾಯಿ–ಮಗುವಿನ ಹೃದ್ಯ ಬಂಧಕ್ಕೆ ಸಾಕ್ಷಿ ಯಾಗಿರುವ ನಗರದ ಲೇಡಿಗೋಶನ್ ಸರ್ಕಾರಿ ಆಸ್ಪತ್ರೆ ಇನ್ನಷ್ಟು ಸುಸಜ್ಜಿತ ಸೌಲಭ್ಯಗಳೊಂದಿಗೆ ಜನಸ್ನೇಹಿಯಾಗಿ ರೂಪುಗೊಳ್ಳುತ್ತಿದೆ.

ಆಸ್ಪತ್ರೆಗೆ 174ರ ವಸಂತ. ಮಂಗಳೂರು ಹೆಂಚಿನ ಮಾಡಿನಡಿ ಸಣ್ಣ ಔಷಧಾಲಯವಾಗಿದ್ದ ಲೇಡಿಗೋಶನ್, ಈಗ 272 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಾಗಿ, ಉತ್ತಮ ಸೇವೆ ನೀಡುತ್ತ ಗರ್ಭಿಣಿಯರು, ಅವರ ಪಾಲಕರಲ್ಲಿ ಭರವಸೆಯ ಭಾವ ಮೂಡಿಸಿದೆ.

ಕರ್ನಾಟಕದ ಒಂಬತ್ತು ಜಿಲ್ಲೆಗಳು, ನೆರೆಯ ಕೇರಳ ರಾಜ್ಯದ ಮೂರು ಜಿಲ್ಲೆಗಳಿಂದ ಇಲ್ಲಿಗೆ ಗರ್ಭಿಣಿಯರು ಸುರಕ್ಷೆಯ ಹೆರಿಗೆಗಾಗಿ ಬರುತ್ತಾರೆ. ದಿನಕ್ಕೆ ಇಲ್ಲಿ ಸರಾಸರಿ 25 ಹೆರಿಗೆಗಳಾಗುತ್ತವೆ, ಅವುಗಳಲ್ಲಿ ಶೇ 50ಕ್ಕೂ ಹೆಚ್ಚು ಸಿ–ಸೆಕ್ಷನ್ ಹೆರಿಗೆಗಳು ಆಗುತ್ತವೆ. ಯಾಕೆಂದರೆ, ಸಮಸ್ಯಾತ್ಮಕ ಪ್ರಕರಣಗಳು ಹೆಚ್ಚು ಬರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ, ತಾಯಿ–ಮಗು ಇಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬೇಕಾಗುತ್ತದೆ ಎನ್ನುತ್ತಾರೆ ಆಸ್ಪತ್ರೆ ಪ್ರಮುಖರು.

ಆರ್ಥಿಕ ಮುಗ್ಗಟ್ಟಿನಲ್ಲಿರುವ ಕುಟುಂಬದವರೇ ಹೆಚ್ಚಾಗಿ ಇಲ್ಲಿ ಹೆರಿಗೆಗೆ ಬರುತ್ತಾರೆ. ಈ ಹಿಂದೆ ತಿಂಗಳ ತಪಾಸಣೆಗೆ ಬರುವ ಗರ್ಭಿಣಿಯರು, ಅವರ ಜತೆಗೆ ಬರುವವರಿಗೆ ಕುಳಿತುಕೊಳ್ಳಲು ಜಾಗದ ಕೊರತೆ ಕಾಡುತ್ತಿತ್ತು. ಹೆರಿಗೆಯಾದ ಬಾಣಂತಿಯರಿಗೆ ಮಲಗಲು ಹಾಸಿಗೆ ಲಭ್ಯವಾಗದೆ, ನೆಲದ ಮೇಲೆ ಹಾಸಿಗೆ ಹಾಕಿಕೊಡುವ ಸಂದರ್ಭವೂ ಬರುತ್ತಿತ್ತು.

ಎಂಆರ್‌ಪಿಎಲ್, ಒಎನ್‌ಜಿಸಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ₹20 ಕೋಟಿ ನೆರವು, ಜತೆಗೆ ಸರ್ಕಾರದ ₹10 ಕೋಟಿ ಅನುದಾನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಗೊಂಡ ಮೇಲೆ, ಜಾಗ ಅಭಾವದ ಸಮಸ್ಯೆ ನಿವಾರಣೆಯಾಗಿದೆ.

ಗರ್ಭಿಣಿಯರ ತಪಾಸಣೆ, ಸ್ತ್ರೀರೋಗ ವಿಭಾಗ, ಪ್ರಯೋಗಾಲಯ, ಸ್ಕ್ಯಾನಿಂಗ್, ಕೌನ್ಸೆಲರ್ಸ್ ಕೊಠಡಿ, ಕ್ರಿಟಿಕಲ್ ಸ್ಥಿತಿಯಲ್ಲಿರುವ ಗರ್ಭಿಣಿಯರ ಚಿಕಿತ್ಸೆ, ಹೆರಿಗೆ ವಿಭಾಗ, ನವಜಾತ ಶಿಶು ತೀವ್ರನಿಗಾ ಘಟಕ, ಮಿಲ್ಕ್ ಬ್ಯಾಂಕ್ ಹೀಗೆ ಎಲ್ಲ ವಿಭಾಗಗಳು ಪ್ರತ್ಯೇಕವಾಗಿವೆ. ಸ್ತ್ರೀಯ ಖಾಸಗಿತನ, ಆಕೆಯ ಹಕ್ಕು ರಕ್ಷಣೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್.

13 ವೆಂಟಿಲೇಟರ್‌ಗಳು, 30ರಷ್ಟು ಫೋಟೊಥೆರಪಿ, 40 ರೇಡಿಯೆಂಟ್ ವಾರ್ಮರ್‌ ವ್ಯವಸ್ಥೆಯೊಂದಿಗೆ ನವಜಾತ ಶಿಶು ತೀವ್ರನಿಗಾ ಘಟಕವು ಸುಸಜ್ಜಿತವಾಗಿದೆ. ರಕ್ತದೊತ್ತಡ ಅಧಿಕ ಇರುವ ಗರ್ಭಿಣಿಯರ ಹೆರಿಗೆ ಹಾಗೂ ಹೆರಿಗೆಪೂರ್ವ ನಿಗಾ ಹೆಚ್ಚು ಮಹತ್ವದ್ದಾಗಿದೆ. ಹೀಗಾಗಿ, ಅಸಹಜ ಹೆರಿಗೆಯಾಗುವ ಪ್ರಕರಣಗಳಿಗೆ ತಕ್ಷಣಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಎಂಟು ವೆಂಟಿಲೇಟರ್‌ ಸೌಲಭ್ಯದೊಂದಿಗೆ ಇಲ್ಲಿ ಪ್ರ‌ತ್ಯೇಕ ವ್ಯವಸ್ಥೆ ಇದೆ. ಈ ಮೊದಲು ಐಸಿಯು ಅವಲಂಬಿತ ಕ್ಲಿಷ್ಟಕರ ಪ್ರಕರಣಗಳು ಎದುರಾದರೆ, ವೆನ್ಲಾಕ್ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿತ್ತು. ಈಗ ಲೇಡಿಗೋಶನ್‌ನಲ್ಲೇ ಈ ಸೌಲಭ್ಯ ಅನುಷ್ಠಾನಗೊಂಡ ನಂತರ, ಕಳೆದ ವರ್ಷ ಇಂತಹ ಸುಮಾರು 80 ಪ್ರಕರಣಗಳನ್ನು ಇಲ್ಲಿಯೇ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂಬುದು ವೈದ್ಯರು ನೀಡುವ ವಿವರಣೆ.

ಹೆಚ್ಚುವರಿ ಹೆರಿಗೆ ಆಸ್ಪತ್ರೆ: 60 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆಯ ಕಟ್ಟಡವು ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿದೆ. ಕುಟುಂಬ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ನಿರ್ದಿಷ್ಟ ದಿನದ ಸೇವೆ (ಲೆಪ್ರೊಸ್ಕೋಪಿ ಚಿಕಿತ್ಸೆ) ಸೌಲಭ್ಯ ಒದಗಿಸಲಾಗಿದೆ. ಕಳೆದ ವರ್ಷ 146 ಜನರು ಲೆಪ್ರೊಸ್ಕೋಪಿ ಚಿಕಿತ್ಸೆ ಪಡೆದಿದ್ದಾರೆ. ರೋಟರಿ ಕ್ಲಬ್‌ನವರು ಸುಮಾರು ₹35 ಲಕ್ಷ ವೆಚ್ಚದ ಅತ್ಯಾಧುನಿಕ ಉಪಕರಣಗಳನ್ನು ಆಸ್ಪತ್ರೆ ಒದಗಿಸಿದ್ದಾರೆ.

ಸಖಿ ಕೇಂದ್ರ: ‘ಸಖಿ’ ಕೇಂದ್ರವು ಲೇಡಿಗೋಶನ್ ಆಸ್ಪತ್ರೆಗೆ ಮತ್ತೊಂದು ಗರಿಯಾಗಿದೆ. ನೊಂದವರ ಪಾಲಿಗೆ ಇದು ನೆಮ್ಮದಿಯ ತಾಣವಾಗಿದೆ. ಇಲ್ಲಿ ಆಪ್ತಸಮಾಲೋಚನೆ, ಅವರಿಗೆ ಅಗತ್ಯವಿರುವ ಕಾನೂನು ನೆರವು, ವೈದ್ಯಕೀಯ ಸಹಾಯ ಎಲ್ಲವೂ ದೊರೆಯುತ್ತದೆ. ನೊಂದ ಮಹಿಳೆಗೆ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭ ಎದುರಾದಲ್ಲಿ ಆಕೆಯ ಖಾಸಗಿತನ ಕಾಪಾಡಲು, ವಿಡಿಯೊ ಕಾನ್ಫರೆನ್ಸ್ ಹಾಲ್ ಕೂಡ ಇಲ್ಲಿದೆ. ಆನ್‌ಲೈನ್‌ ಮೂಲಕ ಸೌಲಭ್ಯ ಪಡೆಯಬೇಕಾದ ಅವಶ್ಯಕತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳಬಹುದು.

ಆಸ್ಪತ್ರೆಗೆ ಭೇಟಿ ನೀಡುವ ಪ್ರಮುಖ ವ್ಯಕ್ತಿಗಳಿಗೆ ಅನುಕೂಲವಾಗುವಂತೆ, ವಿಐಪಿ ಲಾಂಜ್‌ ಕೂಡ ಸಿದ್ಧವಾಗುತ್ತಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ₹2 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ನಿತ್ಯ ಸಾವಿರಾರು ಜನರು ಭೇಟಿ ನೀಡುವ ಲೇಡಿಗೋಶನ್ ಆಸ್ಪತ್ರೆಯನ್ನು ಪರಿಸರಸ್ನೇಹಿಯಾಗಿ ರೂಪಿಸಲು ಯೋಜನೆಗಳು ರೂಪುಗೊಂಡಿವೆ. ಕುಂಡದಲ್ಲಿರುವ 100ಕ್ಕೂ ಹೆಚ್ಚು ಗಿಡಗಳು ಕಣ್ಣು ತಂಪಾಗಿಸುತ್ತವೆ. ನೆಲಕ್ಕೆ ಇಂಟರ್‌ಲಾಕ್ ಜೋಡಿಸುವ ಕಾರ್ಯ ನಡೆಯುತ್ತಿದೆ. ‘ಹರ್ಬಲ್ ಗಾರ್ಡನ್’ ಮಾಡಲು ಸಿದ್ಧತೆಗಳು ಪ್ರಾರಂಭವಾಗಿವೆ.

ಹೆರಿಗೆ ಮತ್ತು ಇದಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಗುಣಮಟ್ಟದ ಸೇವೆ ನೀಡಿರುವ ಕಾರಣಕ್ಕೆ ಲೇಡಿಗೋಶನ್ ಆಸ್ಪತ್ರೆಗೆ ರಾಷ್ಟ್ರ ಮಟ್ಟದ ‘ಲಕ್ಷ್ಯ’ ಪ್ರಮಾಣಪತ್ರ ದೊರೆತಿದೆ.

‘ದಾನಿಗಳ ಕೊಡುಗೆ ಅಪಾರ’

‘ಸಕಾಲದಲ್ಲಿ ಸರ್ಕಾರದ ಅನುದಾನದ ಜತೆಗೆ, ಕಾರ್ಪೊರೇಟ್ ಕಂಪನಿಗಳು, ಸಂಘ–ಸಂಸ್ಥೆಗಳು, ದಾನಿಗಳು ಆಸ್ಪತ್ರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇದರಿಂದ ಇನ್ನಷ್ಟು ಹೆಚ್ಚು ಆಧುನಿಕ ಉಪಕರಣಗಳನ್ನು ಹೊಂದಲು ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಒಡಂಬಡಿಕೆ ಮೂಲಕ ಕೆಎಂಸಿ ಆಸ್ಪತ್ರೆಯೂ ಕೈಜೋಡಿಸಿದೆ. ಹೆರಿಗೆ ಆಸ್ಪತ್ರೆಯಲ್ಲಿ ಸ್ತ್ರೀಯರ ಖಾಸಗಿತನ ಕಾಪಾಡಲು ಗರಿಷ್ಠ ಪ್ರಯತ್ನ ಮಾಡುತ್ತೇವೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಸ್ಮರಿಸಿದರು.

ಹಸುಳೆಗೆ ‘ಅಮೃತ’ದ ಆಧಾರ

ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಟರಿ ‘ಅಮೃತ’ ಎದೆಹಾಲಿನ ಘಟಕ ಹಲವಾರು ಹಸುಗಳಿಗೆ ಜೀವದಾನವಾಗಿದೆ. ಅವಧಿಪೂರ್ಣ ಜನಿಸಿದ ಮಗುವಿಗೆ ಅಮೃತವಾಗಿರುವ ಎದೆಹಾಲು ಇಲ್ಲಿ ದೊರೆಯುತ್ತದೆ. ಹಸಿ ಬಾಣಂತಿಯರು ಉದಾತ್ತವಾಗಿ ನೀಡುವ ಎದೆಹಾಲನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅಗತ್ಯವಿರುವ ಮಗುವಿಗೆ ನೀಡಲಾಗುತ್ತದೆ. ಎದೆಹಾಲು ಸಂಗ್ರಹ ಘಟಕ ಆರಂಭವಾದ ಮೇಲೆ ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲು ಸಕಾಲಕ್ಕೆ ಸಿಗುತ್ತಿದೆ. ಇದರಿಂದ ಶಿಶುಗಳ ಚೇತರಿಕೆ ಪ್ರಮಾಣ ಹೆಚ್ಚಿದೆ ಎನ್ನುತ್ತಾರೆ ಘಟಕದ ನೋಡಲ್ ಅಧಿಕಾರಿ ಡಾ. ಬಾಲಕೃಷ್ಣ ರಾವ್. ‌

ಆಗಬೇಕಾಗಿರುವುದು ಏನು?

* ಹೆರಿಗೆಯಾದ ಬಾಣಂತಿಗೆ ಡಯಾಲಿಸಿಸ್ ಅಗತ್ಯ ಬಂದರೆ, ವೆಂಟಿಲೇಟರ್‌ ವ್ಯವಸ್ಥೆಯೊಂದಿಗೆ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಹೀಗಾಗಿ ಇಲ್ಲಿಯೇ ಡಯಾಲಿಸಿಸ್ ಸೌಲಭ್ಯ ದೊರೆತರೆ ಒಳ್ಳೆಯದು.

* ಕ್ಯಾನ್ಸರ್‌ಗೆ ತುತ್ತಾಗಿರುವ ಮಹಿಳೆರಿಗೆ ಇಲ್ಲಿ ಆಂಕೊ ಸರ್ಜರಿ ವಿಭಾಗ ಪ್ರಾರಂಭಿಸಿದರೆ ಅನುಕೂಲ.

* ಆಧುನಿಕ ಜೀವನ ಪದ್ಧತಿಯಿಂದ ಹಲವರು ಮಕ್ಕಳಾಗಲು ವಿಳಂಬ, ಬಂಜೆತನದ ಸಮಸ್ಯೆ ಎದುರಿಸುತ್ತಾರೆ. ಖಾಸಗಿ ಕೇಂದ್ರಗಳಲ್ಲಿ ಚಿಕಿತ್ಸೆ ದುಬಾರಿಯಾಗುವುದರಿಂದ, ಇಲ್ಲಿ ‘ಫರ್ಟಿಲಿಟಿ ಸೆಂಟರ್’ ಪ್ರಾರಂಭವಾದರೆ, ಬಡವರ ಬಾಳಲ್ಲಿ ಆಶಾಕಿರಣ ಮೂಡುತ್ತದೆ.

* ಸಾಮಾನ್ಯ ವಾರ್ಡ್‌ಗಳಲ್ಲಿ ಇನ್ನಷ್ಟು ಹೆಚ್ಚು ಸ್ವಚ್ಛತೆ ಕಾಪಾಡಲು ಬರುವ ರೋಗಿಗಳಲ್ಲಿ ಜಾಗೃತಿ ಮೂಡಿಸುವುದು.

* ತಾಯಿ–ಮಗು ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಬಿಸಿ ನೀರು ಪೂರೈಕೆ ಮಾಡಲಾಗುತ್ತದೆ. ವಿದ್ಯುತ್‌ನಿಂದ ನೀರು ಕಾಯಿಸಿ ನೀಡುವುದರಿಂದ ತಿಂಗಳಿಗೆ ಸರಾಸರಿ ₹8 ಲಕ್ಷ ವಿದ್ಯುತ್ ಬಿಲ್ ಬರುತ್ತದೆ. ಸೋಲಾರ್ ವ್ಯವಸ್ಥೆಗೊಳಿಸಿದರೆ, ಈ ವೆಚ್ಚವನ್ನು ತಗ್ಗಿಸಲು ಸಾಧ್ಯ.

ಸಾಮಾಜಿಕ ಕಾರ್ಯಕರ್ತರೊಬ್ಬರು ಆಸ್ಪತ್ರೆ ಸುಧಾರಣೆ ಕುರಿತು ಈ ಎಲ್ಲ ಸಲಹೆಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT