ಸುಬ್ರಹ್ಮಣ್ಯ: ಶಿರಾಡ್ ಘಾಟ್‌ನ ದೊಡ್ಡತಪ್ಪಲು ಭೂ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥೆಯೇ ಕಾರಣ. ರಸ್ತೆಗೆ ಟೆಂಡರ್ ಆಗಿ ಸುಮಾರು 15 ವರ್ಷ ಕಳೆದರೂ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಖಂಡನೀಯ. ಘಾಟಿ ಪ್ರದೇಶದಲ್ಲಿ ರಸ್ತೆ ರಸ್ತೆ ನಿರ್ಮಿಸುವಾಗ ಸಮರ್ಪಕ ಅಧ್ಯಯನ ನಡೆಸಬೇಕು ಎಂದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಶಿರಾಡಿ ಘಾಟ್‌ನ ದೊಡ್ಡತಪ್ಪಲು ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿರಾಡಿ ಘಾಟಿಯಲ್ಲಿ ನಡೆಯುತ್ತಿರುವ ನಿರಂತರ ಕುಸಿತದಿಂದ ಈ ಭಾಗದಲ್ಲಿ ಸಂಚಾರಕ್ಕೆ ತೊಂದರೆ ಆಗಿದೆ. ಭಾಗದಲ್ಲಿ ಬಸ್, ಖಾಸಗಿ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಕೇವಲ ಲಾರಿ, ಟ್ಯಾಂಕರ್, ಕಂಟೈನರ್‌ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಭಾರಿ ನಷ್ಟ ಸಂಭವಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.
ರಸ್ತೆ ಅವ್ಯವಸ್ಥೆಯಿಂದ ರಾಜ್ಯಕ್ಕೆ ನಷ್ಟ ಉಂಟಾಗುತ್ತಿದೆ. ಶೀಘ್ರವೇ ಈ ಭಾಗದಲ್ಲಿ ಬಸ್ ಸಂಚರಿಸಲು ಯೋಗ್ಯವಾಗುವಂತೆ ವ್ಯವಸ್ಥೆ ಮಾಡಬೇಕು. 15 ದಿನಗಳ ಬಳಿಕ ಈ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ, ಇದಕ್ಕಿಂತ ಮೊದಲೇ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಮುಂದೆ ಮುಂಜಾಗ್ರತಾ ಕ್ರಮವಿಲ್ಲದೆ ಕಾಮಗಾರಿ ನಡೆಸಿದರೆ ಹೋರಾಟ ಮಾಡಲಾಗುವುದು ಎಂದರು.
ಮಣ್ಣು ಕುಸಿದ ಗುಡ್ಡದ ಮೇಲೆ ಕೆರೆ ಇದೆ. ಅದರಲ್ಲಿ ನೀರು ತುಂಬಿದ್ದು, ಆ ನೀರು ಹರಿದು ಬಂದು ಗುಡ್ಡ ಕುಸಿತ ಸಂಭವಿಸಿದೆ. ದೊಡ್ಡತಪ್ಪಲೆಯಿಂದ ಗುಂಡ್ಯದ ವರೆಗಿನ ಘಾಟಿಯ ಎಡ–ಬಲದಲ್ಲಿ ಗುಡ್ಡ ತೆಗೆಯುವ ಪರಿಸ್ಥಿತಿ ಬಂದಾಗ ಅಂಥ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಹೇಳಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಯತೀಶ್ ಗುಂಡ್ಯ, ಜಯಪ್ರಕಾಶ್ ಕೂಜುಗೋಡು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.