ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಭೂಕುಸಿತ: 200 ಎಕರೆ ಜಮೀನಿಗೆ ನೀರು

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬಂಟ್ವಾಳ ತಾಲ್ಲೂಕಿನ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತದ್ಮ ಮುರಾಯಿ ಕೇದಗೆಬೈಲ್‌ನಲ್ಲಿ ಭೂಕುಸಿತ ಉಂಟಾಗಿದೆ.

ಸುಮಾರು 200 ಎಕರೆ ಪ್ರದೇಶ ಜಲಾವೃತಗೊಂಡಿದೆ. ತದ್ಮ ಕೇದಗೆಬೈಲ್ ಸಮೀಪದ ಜೈನಕೋಟೆ ಪ್ರದೇಶದ ಗುಡ್ಡವು ಕುಸಿದಿದೆ. ಇದರಿಂದಾಗಿ ನೀರು ಹರಿವಿನ ದಿಕ್ಕು ಬದಲಿಸಿ, ಜಮೀನಿಗೆ ನುಗ್ಗಿದೆ. ಅಡಿಕೆ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ನೀರು ತುಂಬಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೆಲ ಮನೆಗಳೂ ಜಲಾವೃತಗೊಂಡಿವೆ. ಕೋಟೆ ಪ್ರದೇಶದ ಗುಡ್ಡದಲ್ಲಿ ಬಿರುಕು ಇನ್ನೂ ವಿಸ್ತರಿಸುತ್ತಿದ್ದು, ಇಲ್ಲಿರುವ ಮನೆಗಳಿಗೂ ಅಪಾಯ ಎದುರಾಗಿದೆ.

ಚಿಕ್ಕಮಗಳೂರು (ವರದಿ): ಜಿಲ್ಲೆಯಲ್ಲಿ ಮಂಗಳವಾರ ಮಳೆ ಕ್ಷೀಣಿಸಿದೆ, ಮಲೆನಾಡು ಭಾಗದಲ್ಲಿ ಸಾಧಾರಣ ಸುರಿದಿದೆ.

ಕೊಪ್ಪ ತಾಲ್ಲೂಕಿನ ತಲಮಕ್ಕಿ ಗ್ರಾಮದ ಬಳಿ ಮನೆಯೊಂದು ಕುಸಿದಿದೆ. ಮನೆಯೊಳಗಿದ್ದ ಲಕ್ಷ್ಮಿ ಅವರ ತಲೆಗೆ ಪೆಟ್ಟಾಗಿದೆ. ತರೀಕೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ತಗ್ಗಿದ ಮಳೆ ಅಬ್ಬರ: (ಮಡಿಕೇರಿ ವರದಿ): ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಮಂಗಳವಾರ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ತನಕವೂ ಬಿಸಿಲ ವಾತಾವರಣವಿತ್ತು. ಬಳಿಕ, ಸಾಧಾರಣ ಮಳೆ ಸುರಿಯಿತು. 

ಸಾಧಾರಣ ಮಳೆಯಾಗಿದೆ: ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಂಗಳವಾರ ತುಂತುರು ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ.

ತೀರ್ಥಹಳ್ಳಿ, ಆಗುಂಬೆ, ಹೊಸನಗರ, ಮಾಸ್ತಿಕಟ್ಟೆ ಭಾಗಗಳಲ್ಲಿ ಕೆಲಕಾಲ ಸಾಧಾರಣ ಮಳೆಯಾಗಿದ್ದು, ನಂತರ ಬಿಸಿಲಿನ ವಾತಾವರಣ
ಇತ್ತು. ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬದಲ್ಲಿ ತುಂತುರು ಮಳೆಯಾಗಿದೆ.

Post Comments (+)