ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ಕೆಡಿಸಬೇಡಿ!

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಬಸವತತ್ವ ಅಲ್ಲಮತತ್ವ’ (ಪ್ರ.ವಾ., ಏ. 12) ಎಂಬ ಪ್ರಸನ್ನ ಅವರ ಬರಹವನ್ನು ಓದಿದ ಬಳಿಕ ಈ ಪ್ರತಿಕ್ರಿಯೆ ನೀಡಲೇಬೇಕೆನಿಸಿತು (ಇಲ್ಲಿ ‘ತತ್ವ’ ಸರಿಯಲ್ಲ; ‘ತತ್ತ್ವ’ ಎಂದಾಗಬೇಕು). ಲೇಖಕರು ನಿರ್ದಿಷ್ಟವಾಗಿ ಏನನ್ನು ಹೇಳಹೊರಟಿದ್ದಾರೆ ಎಂಬುದು ಲೇಖನದಿಂದ ಸ್ಪಷ್ಟವಾಗುವುದಿಲ್ಲ. ಪ್ರಸ್ತುತದಲ್ಲಿ ನಡೆದಿರುವ ವೀರಶೈವ-ಲಿಂಗಾಯತವಾದ- ವಿವಾದ- ಸಂವಾದದಲ್ಲಿ ಬಸವಣ್ಣ ಮತ್ತು ಅಲ್ಲಮರನ್ನು ಅನಪೇಕ್ಷಣೀಯವಾದ ಹೋಲಿಕೆಯೊಂದಿಗೆ ವರ್ಣಿಸಲು ಹೋದಂತೆ ಭಾಸವಾಗುತ್ತದೆ. ಅದೂ ವಸ್ತುನಿಷ್ಠ ಎನಿಸುವುದಿಲ್ಲ. ಅವರು ಒಂದೆಡೆ, ‘ಹನ್ನೆರಡನೆಯ ಶತಮಾನದ ಚಳವಳಿಗೆ ದಿಕ್ಕು ತೋರಿಸಿದವರು ಕಾಯಕ ಜೀವಿಗಳು ಅರ್ಥಾತ್ ಶ್ರಮಜೀವಿಗಳು’ ಎಂದು ಬರೆಯುತ್ತಾರೆ. ಈ ಅಭಿಪ್ರಾಯ ಅಪೂರ್ಣ. ಶರಣರು ಕಾಯಕ ಜೀವಿಗಳು, ಶ್ರಮಜೀವಿಗಳು ಅಷ್ಟೇ ಆಗಿರಲಿಲ್ಲ, ನೀತಿ, ತತ್ತ್ವಗಳನ್ನು ಸಂಸ್ಕಾರವಾಗಿ ಹೊಂದಿದವರಾಗಿದ್ದರು. ಆ ಬಗ್ಗೆ ಲೇಖಕರು ಏನನ್ನೂ ಹೇಳುವುದಿಲ್ಲ.

ಮುಂದೆ ‘... ಒಳಬಂಡಾಯಗಳು ನಡೆದಾಗ, ಅಲ್ಲಮ ಅವತರಿಸಿದ್ದು ಗಲೀಜು ದರಿದ್ರನ ರೂಪದಲ್ಲಿ, ಮಾಂಸಾಹಾರಿ ಹಾಗೂ ಮದ್ಯಪಾನಿ ದರಿದ್ರನ ರೂಪದಲ್ಲಿ. ಈಗಲೂ ದರಿದ್ರನೇ ದಿಕ್ಕು ತೋರಬೇಕು ಲಿಂಗಾಯತ ಚಳವಳಿಗೆ’ ಎನ್ನುತ್ತಾರೆ. ಇನ್ನೊಂದೆಡೆ, ‘ಗಲೀಜು ದಲಿತನ ರೂಪ ಧರಿಸಿ ಮಹಾಮನೆಯ ಬಾಗಿಲಿಗೆ ಬಂದು ಪ್ರತಿಭಟಿಸಲಿಕ್ಕೆ ಅಲ್ಲಮನೇ ಬೇಕು’ ಎಂದಿದ್ದಾರೆ. ಅಲ್ಲಮ ಮಾಂಸಾಹಾರಿಯಾಗಿದ್ದ, ಮದ್ಯಪಾನಿಯಾಗಿದ್ದ ಮತ್ತು ಗಲೀಜು ದಲಿತನ ರೂಪದಲ್ಲಿದ್ದ ಎಂದು ಅವರಿಗೆ ಅನ್ನಿಸಿದ್ದೇಕೆ? ಇದಕ್ಕೆಲ್ಲ ಆಧಾರವೇನಿದೆ? ಮೂಲತಃ ರಂಗಭೂಮಿಯವರಾದ ಇವರು, ನಾಟಕದ ರೀತಿಯ ಅಲ್ಲಮನ ಪಾತ್ರದ ಸಲ್ಲದ ಕಲ್ಪನೆಯನ್ನು ತಲೆಯಲ್ಲಿರಿಸಿಕೊಂಡು ಮಾತಾಡುತ್ತಿದ್ದಾರೆ ಎನಿಸುತ್ತದೆ. ಇಂಥ ಬರಹಗಳು ಪ್ರಸ್ತುತ ಪರಿಸ್ಥಿತಿಯ ಬಿಕ್ಕಟ್ಟನ್ನು ಬಗೆಹರಿಸುವುದಕ್ಕೆ ಸಹಾಯಕವಾಗುವ ಬದಲು ಅದನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಬಹುದಷ್ಟೆ.

ಅಲ್ಲಮನ ಬಗ್ಗೆ ಹೇಳಿದ ಹಾಗೇ ಮಂಟೇಸ್ವಾಮಿಯನ್ನೂ ಇವರು ಎಳೆದು ತರುತ್ತಾರೆ. ಮಂಟೇಸ್ವಾಮಿಯ ಪ್ರಸ್ತಾಪ ಕೂಡಾ ಸರಿಯಲ್ಲ. ಏಕೆಂದರೆ ವ್ಯಕ್ತಿಹಿತ ಮತ್ತು ಸಮಾಜ ಹಿತಕ್ಕಾಗಿ ಬಸವಣ್ಣ, ಅಲ್ಲಮ, ಮಂಟೇಸ್ವಾಮಿ ಇವರೆಲ್ಲ ತೋರಿದ ದಾರಿಗಳು ಬೇರೆ ಬೇರೆ. ಹಾಗಿರುವಾಗ, ಲೇಖಕರು ಮಾಡುವ ಪ್ರಸ್ತಾಪಕ್ಕೆ ಅರ್ಥವೆಲ್ಲಿ? ಮಂಟೇಸ್ವಾಮಿಯೂ ಇವರಿಗೆ ದಡ್ಡನಂತೆ, ದೀನನಂತೆ ಕಾಣುತ್ತಾನೆ.

‘ಲಿಂಗಾಯತ ಮಠಗಳು ಹಾಗೂ ಸನ್ಯಾಸಿಗಳು ‘ಶಿವನು ಬಡವ’ ಎಂದು ಸಾರಿ, ಬಡವನ ರೂಪ ಧರಿಸಿ ನಿಲ್ಲಬೇಕಿದೆ ಅಲ್ಲಮನಂತೆ’ ಎಂತಲೂ ಬರೆಯುತ್ತಾರೆ. ಇಲ್ಲಿ ಲೇಖಕರು ಅಲ್ಲಮ ಬಡವ ಎಂದೂ ಹೇಳಿದಂತಾಗಿದೆ. ಶರಣರ ‘ಶಿವ’ನ ಪರಿಕಲ್ಪನೆ ಬೇರೆ; ಪುರಾಣಗಳ ‘ಶಿವ’ನ ಕಲ್ಪನೆ ಬೇರೆ. ಲೇಖಕರು ಇದರ ತುಲನೆ ಮಾಡಬೇಕಿತ್ತು.

– ಡಾ. ಬಿ. ರಾಜಶೇಖರಪ್ಪ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT