ಮಂಗಳೂರು: ‘ಕಾಲುನೋವಿನಿಂದ ಬಳಲುತ್ತಿರುವ ಅಮ್ಮನಿಗೆ ಗುರುವಾರ ಬೆಳಿಗ್ಗೆ ಚೆನ್ನಾಗಿ ಮಸಾಜ್ ಮಾಡಿದ್ದ. ಔಷಧ ಖಾಲಿಯಾಗಿದ್ದನ್ನು ನೋಡಿ, ‘ಮದ್ದು ತರಲು ಹೋಗುತ್ತೇನೆ’ ಎಂದು ಹೇಳಿ ಹೊರಟಿಲ್ಲ. ಆದರೆ ಅವನು ಮರಳಲೇ ಇಲ್ಲ...’
ಕರಂಗಲ್ಪಾಡಿಯಲ್ಲಿ ಮನೆ ಕೆಡವುವಾಗ ಲಿಂಟಲ್ ಕುಸಿದು ಗುರುವಾರ ಮೃತಪಟ್ಟ ಅಡ್ವಿನ್ ಹೆರಾಲ್ಡ್ ಮಾಬೆನ್ (54) ಅವರ ಸೋದರಿ ರೇಷ್ಮಾ ಅಂಚನ್ ನೋವನ್ನು ಹಂಚಿಕೊಂಡಿದ್ದು ಹೀಗೆ.
‘ಅಣ್ಣ ಮನೆಯಿಂದ ಹೊರಟು ಕೆಲವೇ ನಿಮಿಷಗಳಲ್ಲಿ ದೊಡ್ಡ ಸದ್ದಾಯಿತು. ಸ್ಥಳಕ್ಕೆ ಧಾವಿಸಿ ನೋಡಿದಾಗ ಇಬ್ಬರು ಲಿಂಟಲ್ ಕೆಳಗಡೆ ಸಿಲುಕಿದ್ದರು. ಮುಖ ಜಜ್ಜಿ ಹೋಗಿದ್ದರಿಂದ ಅಲ್ಲಿರುವುದು ನಮ್ಮ ಅಣ್ಣ ಎಂದು ತಿಳಿಯಲೇ ಇಲ್ಲ. ಯಾರೋ ಕೆಲಸದವರು ಲಿಂಟಲ್ ಅಡಿ ಸಿಲುಕಿದ್ದಾರೆ ಎಂದೇ ಭಾವಿಸಿದ್ದೆವು. ಮಣ್ಣಾಗಿದ್ದ ಅಂಗಿಯನ್ನು ಸರಿಯಾಗಿ ನೋಡಿದ ಬಳಿಕವಷ್ಟೇ ಅದು ನಮ್ಮಣ್ಣ ಎಂಬುದು ಖಾತರಿಯಾಯಿತು‘ ಎನ್ನುವಾಗ ಅವರ ಕಣ್ತುಂಬಿ ಬಂತು.
‘ಈ ಮನೆಯಲ್ಲಿ ಅಣ್ಣ ಹಾಗೂ ಅಮ್ಮ ಮಾತ್ರ ಇದ್ದರು. ಹಾಸಿಗೆ ಹಿಡಿದಿದ್ದ ಅಮ್ಮನಿಗೆ (ಸೆಲೆಸ್ಟಿನ್ ಮಾಬೆನ್) ಈಗ 79 ವರ್ಷ. ಔಷಧ ನೀಡಿ, ಮಸಾಜ್ ಮಾಡಿ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಅಣ್ಣ ಈಗ ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ನೋವಿನಿಂದ ಹೇಳಿದರು.
ಪತಿಯನ್ನು ಕಳೆದುಕೊಂಡಿದ್ದ ಸೆಲೆಸ್ಟಿನ್ ಮಾಬೆನ್ ಅವರಿಗೆ ಸಿಎಸ್‌ಐ ಚರ್ಚ್ ಆ ಮನೆಯನ್ನು ನೀಡಿತ್ತು. ಅದರ ದಕ್ಷಿಣದಲ್ಲಿ ಜೇಮ್ಸ್ ಜತ್ತನ್ನ (ತಾಯಿಯ ಸೋದರ ಸಂಬಂಧಿ) ಅವರ ಮನೆ ಇತ್ತು. ಎರಡೂ ಮನೆಗಳು ಒಂದೇ ಗೋಟೆಯನ್ನು ಹಂಚಿಕೊಂಡಿವೆ.
ಜೇಮ್ಸ್ ಜತ್ತನ್ನ ಅವರ ಮನೆ ಕೆಡವುವಾಗ ಸೆಲೆಸ್ಟಿನ್ ಮಾಬೆನ್ ಅವರ ಮನೆಯ ಗೋಡೆ ಹಾಗೂ ಚಾವಣಿಯೂ ಹಾಣಿಗೊಳಗಾಗಿದೆ.
‘ಈ ಗೋಡೆ ಯಾವಾಗ ಬೇಕಾದರೂ ಬೀಳಬಹುದು. ಹಾಗಾಗಿ ಅಮ್ಮನನ್ನು ಇಲ್ಲೇ ಪಕ್ಕದಲ್ಲಿರುವ ನಮ್ಮ ಮನೆಗೆ ಕರೆದೊಯ್ದಿದ್ದೇನೆ. ಪಕ್ಕನೇ ಏನಾದರೂ ಆದರೆ ಅವರಿಗೆ ತಕ್ಷಣ ಎದ್ದು ನಡೆಯಲೂ ಆಗುವುದಿಲ್ಲ’ ಎಂದು ರೇಷ್ಮಾ ತಿಳಿಸಿದರು.
‘ಜೇಮ್ಸ್ ಜತ್ತನ್ನ ಅನೇಕ ವರ್ಷಗಳಿಂದ ಬಹರೇನ್ ನಲ್ಲೇ ನೆಲೆಸಿದ್ದಾರೆ. ಅವರು ಊರಿಗೆ ಬಂದಾಗ ಬಲ್ಮಠ ಬಳಿಯ ಫ್ಲ್ಯಾಟ್ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಈ ಜಾಗದಲ್ಲಿ ಮನೆ ಕಟ್ಟುವುದು ಅವರ ಕನಸಾಗಿತ್ತು. ಒಂದು ವರ್ಷದಿಂದ ಖಾಲಿ ಇದ್ದ ಮನೆಯನ್ನು ಕೆಡವುತ್ತಿದ್ದಂತೆಯೇ ಈ ದುರ್ಘಟನೆ ಸಂಭವಿಸಿದೆ’ ಎಂದು ನೆರಮನೆಯ ನಿವಾಸಿಯೊಬ್ಬರು ತಿಳಿಸಿದರು.
‘ಗುರುವಾರ ಬೆಳಿಗ್ಗೆ ನಮ್ಮ ಮನೆಯಲ್ಲಿ ಚಹಾ ಸೇವಿಸಿದ್ದ ಅವರು ಕಟ್ಟಡದ ಕೆಡವುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಸುತ್ತಿದ್ದರು. ಆ ಮೊಬೈಲ್ ಈಗಲೂ ಕಟ್ಟಡದ ಅವಶೇಷದಡಿಯಲ್ಲೇ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.