ಭಾನುವಾರ, ಮೇ 16, 2021
22 °C

ಉಜಿರೆ: ವಿಶ್ವಸಾಹಿತ್ಯ ಅಧ್ಯಯನ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ‘ಪ್ರಪಂಚದ ಸಮುದಾಯ, ಸಂಸ್ಕೃತಿ, ಭಾಷಿಕ ಸಂಪರ್ಕ, ಜೀವನವೈವಿಧ್ಯ ಪರಸ್ಪರ ಹಂಚಿಕೊಳ್ಳುವ ದೃಷ್ಟಿಯಿಂದ ವಿಶ್ವ ಸಾಹಿತ್ಯ ಅಧ್ಯಯನ ಅವಶ್ಯಕ’ ಎಂದು  ವಿಮರ್ಶಕ ಪ್ರೊ.ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.

ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕನ್ನಡ ಸಂಘ ಹಾಗೂ ನೀನಾಸಂ ಪ್ರತಿಷ್ಠಾನ, ಹೆಗ್ಗೋಡು ಸಹಯೋಗದಲ್ಲಿ ಶುಕ್ರವಾರ ಇಲ್ಲಿ ನಡೆದ ವಿಶ್ವಸಾಹಿತ್ಯ ಪ್ರವೇಶ 22ನೇ ವರ್ಷದ ಎರಡು ದಿನಗಳ ರಾಜ್ಯಮಟ್ಟದ ಸಾಹಿತ್ಯ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.

‘ಆಧುನಿಕ ಕನ್ನಡ ಸಾಹಿತ್ಯವು ಆಧುನಿಕ ಪೂರ್ವ ಕನ್ನಡ ಅಭಿಜಾತ ಸಾಹಿತ್ಯಕ್ಕೆ, ಜನಪದ ಸಾಹಿತ್ಯಕ್ಕೆ ಋಣಿಯಾಗಿರುವ ಜತೆಗೆ ಭಾರತ ಹಾಗೂ ಐರೋಪ್ಯ ಭಾಷೆಗಳನ್ನು ಪರಿಚಯಿಸಿದೆ. ಹೀಗಾಗಿ ಎಲ್ಲ ಭಾಷೆ, ಎಲ್ಲ ದೇಶಗಳ ಅಧ್ಯಯನ ಸಾಧ್ಯವಿಲ್ಲದಿದ್ದರೂ ಅನುವಾದಗಳಿಂದ ಹಾಗೂ ವಿದ್ವಾಂಸರ ನೆರವಿನಿಂದ ವಿಶ್ವ ಸಾಹಿತ್ಯ ಅಧ್ಯಯನ ನಡೆಸೋಣ’ ಎಂದು ಹೇಳಿದರು.

ಪ್ರಾಂಶುಪಾಲ ಎಸ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸಾಹಿತ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಭಾಷೆ ಹಾಗೂ ಸಂಸ್ಕೃತಿಯ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಭಾರತದಲ್ಲಿ ವೈವಿಧ್ಯ ಭಾಷೆಗಳಿಂದ ಒಗ್ಗೂಡುವ ಸಂಸ್ಕೃತಿ ಹಾಗೂ ಪ್ರಪಂಚದ ನಾನಾ ಪ್ರಕಾರದ ಸಾಹಿತ್ಯಕ್ಕಿರುವ ಮೌಲ್ಯವನ್ನು ವಿಸ್ತಾರವಾಗಿ ಉಣಬಡಿಸುವ ಕೆಲಸ ಶ್ಲಾಘನೀಯ’ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಕೇವಲ ತರಗತಿಗೆ, ಕಾರ್ಯಾಗಾರಕ್ಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳ ‌ವೈಯಕ್ತಿಕ ನೆಲೆಯಲ್ಲಿ ಅಧ್ಯಯನ, ವಿಶ್ಲೇಷಣೆ ಆಗಬೇಕು ಎಂದು ಸಲಹೆ ನೀಡಿದರು.

ತುಮಕೂರು ಡಿ.ವಿ.ಜಿ ಅಧ್ಯಯನ ವಿಭಾಗ ಮುಖ್ಯಸ್ಥ ಬಿ.ನಿತ್ಯಾನಂದ ಶೆಟ್ಟಿ, ಪ್ರೊ. ಮನೋಹರ್ ಸಾಲಿಮಠ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್, ಶಿಬಿರದ ಸಂಯೋಜಕ ಡಾ.ಕೆ.ವಿ. ನಾಗರಾಜಪ್ಪ, ಡಾ. ಬೋಜಮ್ಮ ಕೆ.ಎನ್. ಉಪಸ್ಥಿತರಿದ್ದರು.

ಪೂಂಜಾಲಕಟ್ಟೆ, ಬೆಳ್ತಂಗಡಿ ಸರ್ಕಾರಿ ಪದವಿ ಕಾಲೇಜು, ಎಸ್.ಡಿ.ಎಂ. ಕಾಲೇಜು, ಬಿಎಡ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು