ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಅಪೂರ್ವ ಕಲಾಕೃತಿಯಂತಾಗಲಿ ಬದುಕು:ಸರಸ್ವತಿ ಸ್ವಾಮೀಜಿ

ವಿಶ್ವಕರ್ಮ ಕಲಾ ಪರಿಷತ್‌ ಉದ್ಘಾಟಿಸಿದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ
Last Updated 26 ಮಾರ್ಚ್ 2023, 16:25 IST
ಅಕ್ಷರ ಗಾತ್ರ

ಮಂಗಳೂರು: ‘ನಮ್ಮ ಬದುಕು ಬಿಳಿ ಹಾಳೆಯ ಹಾಗೆ. ನಡತೆ ಎಂಬ ಕುಂಚವನ್ನು ಬಳಸಿ, ಸತ್‌ ಚಿಂತನೆ, ಸದಾಲೋಚನೆಗಳೆಂಬ ಬಣ್ಣಗಳಿಂದ ಅದನ್ನು ಸಂಗ್ರಹಯೋಗ್ಯವಾದ ಅಪೂರ್ವ ಕಲಾಕೃತಿಯಂತೆ ರೂಪಿಸಬೇಕು’ ಎಂದು ಕಟಪಾಡಿಯ ಆನೆಗುಂದಿ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಮರ್ಪಣಂ ವಿಶ್ವಕರ್ಮ ಕಲೋತ್ಸವ’ ಕಾರ್ಯಕ್ರಮದಲ್ಲಿ ‘ವಿಶ್ವಕರ್ಮ ಕಲಾ ಪರಿಷತ್‌’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನಾವು ಮುಂದಿನ ತಲೆಮಾರಿಗೆ ಸಾಧನೆಯನ್ನು ಬಿಟ್ಟುಹೋಗಬೇಕೇ ಹೊರತು, ಸಮಸ್ಯೆಗಳನ್ನಲ್ಲ’ ಎಂದರು.

‘ವಿಶ್ವಕರ್ಮ ಸಮಾಜದ ಮನೆ ಮನೆಯಲ್ಲೂ ಕಲಾವಿದರಿದ್ದಾರೆ. ಸೂಕ್ತ ಅವಕಾಶ ಸಿಕ್ಕರೆ ಅವರೆಲ್ಲರೂ ಶ್ರೇಷ್ಠ ಕಲಾವಿದರಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದವರು. ಭುವನ ವಿಶ್ವಕರ್ಮ ಜಯಂತಿಯ ಶುಭ ಸಂದರ್ಭದಲ್ಲಿ ಉದ್ಘಾಟನೆಯಾದ ವಿಶ್ವಕರ್ಮ ಕಲಾ ಪರಿಷತ್‌ ಇಂತಹ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಲೆಗೆ ಸಂಬಂಧಿಸಿದ ಅತ್ಯುನ್ನತ ಸಂಸ್ಥೆಯಾಗಿ ಬೆಳೆಯಬೇಕು. ಇದರ ವ್ಯಾಪ್ತಿ ನಾಡಿನಾದ್ಯಂತ ವಿಸ್ತರಿಸಬೇಕು’ ಎಂದು ಹಾರೈಸಿದರು.

ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಿದ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೇಶವ ಆಚಾರ್ಯ, ‘ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪೂರ್ವ ಕಲಾಕೃತಿ ರೂಪಿಸಲು ಕಲಾವಿದನಿಗೆ ತಾಳ್ಮೆ ಹಾಗೂ ಅಗಾಧ ಪರಿಶ್ರಮ ಅಗತ್ಯ. ಕಲಾ ಪರಿಷತ್‌ ವಿಶ್ವಕರ್ಮರ ಪಂಚ ಕಸುಬುಗಗಳೂ ಸೇರಿದಂತೆ ಕಲೆಗೆ ಸಂಬಂಧಿಸಿದ ಸಮಗ್ರ ಸಂಸ್ಥೆಯಾಗಿ ಹೊರಹೊಮ್ಮಲಿ’ ಎಂದರು.

ಪರಿಷತ್‌ನ ಗೌರವಾಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ‘ವಿಶ್ವಕರ್ಮರಲ್ಲಿ ಕಲೆ ರಕ್ತಗತವಾಗಿದೆ. ಈ ಸಮಾಜದಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಸಾಮರ್ಥ್ಯವಿರುವ ಪ್ರತಿಭಾನ್ವಿತ ಕಲಾವಿದರಿದ್ದಾರೆ. ಪ್ರೋತ್ಸಾಹದ ಕೊರತೆಯಿಂದ ಅವರು ತೆರೆಮರೆಯ ಕಾಯಿಗಳಂತಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಪರಿಷತ್‌ ಮಾಡಲಿದೆ. ದೇವಾಲಯಗಳ ಕಾಷ್ಟಶಿಲ್ಪ, ಶಿಲಾ ಶಿಲ್ಪ, ಎರಕ ಶಿಲ್ಪಗಳಿಗೆ ಸಂಬಂಧಿಸಿದ ವಿಚಾರಗಳ ದಾಖಲೀಕರಣವೂ ಆಗಬೇಕಿದೆ’ ಎಂದರು.

ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ಜಂಟಿ ನಿರ್ದೇಶಕ ದೇವರಾಜ್‌ ಕೆ, 'ಕೇಂದ್ರ ಸರ್ಕಾರವು 2023–24ನೇ ಸಾಲಿನ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್‌ ಕಾರ್ಯಕ್ರಮವನ್ನು ಪ್ರಕಟಿಸಿದೆ. ವಿಶ್ವಕರ್ಮ ಸಮಾಜವು ಮುಂದುವರಿಸಿಕೊಂಡು ಬಂದಿರುವ ಪಾರಂಪರಿಕ ಕಲೆಗಳಿಗೆ ಇದರಡಿ ಉತ್ತೇನ ಸಿಗಲಿದೆ. ಕಲಾವಿದರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದ ಈ ಕಾರ್ಯಕ್ರಮದಿಂದ ಸಾಂಪ್ರದಾಯಿಕ ಕೌಶಲ ಅಭಿವೃದ್ಧಿಯ ಜೊತೆಗೆ ಕಲಾಕೃತಿಗಳ ಮಾರಾಟ ಮತ್ತು ರಫ್ತಿಗೂ ಉತ್ತೇಜನ ನೀಡಲಾಗುತ್ತದೆ. ಎಂಎಸ್‌ಎಂಇ ಇಲಾಖೆಯ ಇತರ ಯೋಜನೆಗಳ ಜೊತೆ ಜೋಡಿಸಿಕೊಂಡು ಕಾರ್ಯಕ್ರಮ ರೂಪಿಸುವ ಸಿದ್ಧತೆಗಳು ನಡೆಯುತ್ತಿವೆ’ ಎಂದರು.

ಪರಿಷತ್‌ನ ಅಧ್ಯಕ್ಷ ಡಾ.ಎಸ್‌.ಪಿ.ಗುರುದಾಸ್‌, ‘ನಮ್ಮ ಸಮಾಜದ ಕಲಾವಿದರಿಗೆ ಸಿಗಬೇಕಾದ ಮನ್ನಣೆ, ಗೌರವ ಸಿಗುತ್ತಿಲ್ಲ. ಅದನ್ನು ದೊರಕಿಸಿಕೊಡಲು ಈ ಸಂಸ್ಥೆ ಪ್ರಯತ್ನಿಸಲಿದೆ. ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಲಾವಿದರಿಗೆ ಹೊಸ ಮಾರುಕಟ್ಟೆ ಒದಗಿಸಲು ಶ್ರಮಿಸಲಿದೆ. ಕಲಾವಿದರು ಆರ್ಟಿಸಾನ್‌ ಕಾರ್ಡ್‌ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ಸವಲತ್ತು ಪಡೆಯಬೇಕು’ ಎಂದರು.

ಕಲಾಪೋಷಕರಾದ ಪಿ.ಶಿವರಾಮ ಆಚಾರ್ಯ ಕಂಕನಾಡಿ, ಮುನಿಯಾಲ್‌ ದಾಮೋದರ ಆಚಾರ್ಯ, ಪೈಯಾಲ್‌ ಭಾಸ್ಕರ ಆಚಾರ್ಯ. ಶಕುಂತಳಾ ಬಿ.ರಾವ್‌ ಹಾಗೂ ರಂಗಭೂಮಿ ಕಲಾವಿದ ಯೋಗೀಶ್‌ ಬೋಳೂರು ಅವರನ್ನು ಅಭಿನಂದಿಸಲಾಯಿತು.

ಮುಂಬೈನ ಕನ್ನಡಿಗ ಕಲಾವಿದರ ಪರಿಷತ್‌ನ ಜಿ.ಟಿ.ಆಚಾರ್ಯ, ವಿಶ್ವಕರ್ಮ ಕಲಾ ಪರಿಷತ್‌ನ ಗೌರವಾಧ್ಯಕ್ಷರಾದ ಪಿ.ಎನ್‌.ಆಚಾರ್ಯ, ಖಜಾಂಚಿ ಎ.ಜಿ.ಸದಾಶಿವ. ಉಪಾಧ್ಯಕ್ಷೆ ರತ್ನಾವತಿ ಜೆ.ಬೈಕಾಡಿ ಇದ್ದರು. ದಾಮೋದರ ಶರ್ಮ ನಿರೂಪಿಸಿದರು.

**

ಸಮರ‌ಪಣಂ ಕಲೋತ್ಸವ–ಕಲಾಲೋಕದ ಅನಾವರಣ

ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ‘ಸಮರ್ಪಣಂ ವಿಶ್ವಕರ್ಮ ಕಲೋತ್ಸವ’ವು ವಿವಿಧ ಮಾಧ್ಯಮಗಳಲ್ಲಿ ತಯಾರಾದ ನೂರಾರು ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು. 35ಕ್ಕೂ ಅಧಿಕ ಕಲಾವಿದರು ಕಲಾಕೃತಿಗಳನ್ನು ಪ್ರದರ್ಶಿಸಿದರು. ಸಾಂಪ್ರದಾಯಿಕ ಚಿತ್ರಕಲಾಕೃತಿಗಳ ಜೊತೆಗೆ, ಕಾಷ್ಟಶಿಲ್ಪ, ನೂಲಿನಲ್ಲಿ ಅರಳಿದ ಕಲಾಕೃತಿಗಳು, ಗೆರಟೆ ಕಲಾಕೃತಿಗಳು, ಹೂವು–ಎಲೆಗಳಲ್ಲಿ ನಿರ್ಮಿಸಿದ ಕಲಾಕೃತಿಗಳು, ಮನೆಗಳ ಮೀನಿಯೇಚರ್‌ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಜಯಚಂದ್ರ ನಾಳ ಅವರು ನಿರ್ಮಿಸಿದ 6 ಅಡಿ 4 ಇಂಚು ಎತ್ತರದ ಪುಷ್ಫರಥ ವಿಶೇಷ ಆಕರ್ಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT