ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,600 ರೈತರಿಗೆ ಹೊಸ ಸಾಲ

ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌
Last Updated 4 ಜುಲೈ 2020, 4:40 IST
ಅಕ್ಷರ ಗಾತ್ರ

ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ₹ 14,500 ಕೋಟಿ ಸಾಲ ನೀಡಲು ಉದ್ದೇಶಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 3,600 ರೈತರು ಹೊಸ ಸಾಲ ಪಡೆಯಲಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ (ಎಸ್‌ಸಿಡಿಸಿಸಿ) ಸಹಕಾರ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಕೆಗೆ ಚಾಲನೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವಧನ ವಿತರಿಸಿ ಅವರು ಮಾತನಾಡಿದರು.

ಕಳೆದ ವರ್ಷ ರೈತರಿಗೆ ಸಹಕಾರ ಸಂಸ್ಥೆಗಳ ಮೂಲಕ ₹ 13,500 ಕೋಟಿ ಸಾಲ ನೀಡಲಾಗಿತ್ತು. ಈ ಬಾರಿ ಅದನ್ನು ಹೆಚ್ಚಿಸಲಾಗಿದೆ. ನಬಾರ್ಡ್‌ ಸಾಲ ವಿತರಣೆಗೆ ₹ 1,750 ಕೋಟಿಯನ್ನು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. ಏಪ್ರಿಲ್‌ 1ರಿಂದ ಈವರೆಗೆ ರಾಜ್ಯದ ರೈತರಿಗೆ ₹ 4,432 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಕಳೆದ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 18,843 ರೈತರಿಗೆ ₹ 286.89 ಕೋಟಿ ಸಾಲ ವಿತರಣೆ ಮಾಡಿತ್ತು. ಈ ಬಾರಿ ಹೆಚ್ಚುವರಿ ಗುರಿಗೆ ಅನುಗುಣವಾಗಿ 3,600 ರೈತರಿಗೆ ಹೊಸದಾಗಿ ಸಾಲಗಳನ್ನು ಮಂಜೂರು ಮಾಡಲಾಗುವುದು. ತ್ವರಿತವಾಗಿ ಸಾಲ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

‘ಸದಸ್ಯರ ನಡುವೆ ಸಹಕಾರ ಇದ್ದರೆ ಸಹಕಾರಿ ಸಂಸ್ಥೆಯೊಂದು ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ ಉದಾಹರಣೆ. ಗುರಿ ಸಾಧನೆ, ಸಾಲ ವಿತರಣೆ, ವಸೂಲಾತಿ ಮತ್ತು ಬ್ಯಾಂಕ್‌ನ ಚಟುವಟಿಕೆಗಳ ವಿಸ್ತರಣೆಯಲ್ಲಿ ಆಡಳಿತ ಮಂಡಳಿ ಹೊಂದಿರುವ ಬದ್ಧತೆಯೇ ಈ ಪ್ರಗತಿಗೆ ಕಾರಣ’ ಎಂದು ಸಚಿವರು ಶ್ಲಾಘಿಸಿದರು. ಅಪೆಕ್ಸ್‌ ಬ್ಯಾಂಕ್‌, 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮತ್ತು ರಾಜ್ಯದ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಏಕರೂಪದ ತಂತ್ರಾಂಶ ಬಳಕೆ ಜಾರಿಗೊಳಿಸುವ ಪ್ರಸ್ತಾವವಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ನೇತೃತ್ವದ ಸಮಿತಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ರೈತರಿಗೆ ಅನುಕೂಲ: ಎಸ್‌ಸಿಡಿಸಿಸಿ ಬ್ಯಾಂಕ್‌ ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಹಿಡಿತವನ್ನು ತಪ್ಪಿಸಲು ಈ ತಿದ್ದುಪಡಿ ನೆರವಾಗಲಿದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರಕುಮಾರ್‌, ‘ಶೀಘ್ರದಲ್ಲೇ ಆಶಾ ಕಾರ್ಯಕರ್ತೆಯರಿಗೂ ಪ್ರತ್ಯೇಕ ಸ್ವಸಹಾಯ ಗುಂಪುಗಳನ್ನು ರಚಿಸಲಾಗುವುದು. ಅವರು ಬಯಸಿದರೆ ತ್ವರಿತವಾಗಿ ಸಾಲ ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ಯಾಬ್‌ ಬ್ಯಾಂಕಿಂಗ್‌ಗೆ ಚಾಲನೆ ನೀಡಿದರು. ಶಾಸಕರಾದ ಡಿ.ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್‌ ಹೆಗ್ಡೆ, ಕರ್ನಾಟಕ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್‌. ಶ್ರೀಧರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯಕುಮಾರ್‌ ಸೂರಿಂಜೆ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT