ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ರಸ್ತೆಗಿಳಿಯದ ವಾಹನ– ಜನಜೀವನ ಸಂಪೂರ್ಣ ಸ್ತಬ್ಧ

Last Updated 13 ಜುಲೈ 2020, 6:01 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದ್ದು, ನಗರದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು.

ಸಂಪೂರ್ಣ ಲಾಕ್‌ಡೌನ್‌ ಕಾರಣದಿಂದ ಕಾರ್ಮಿಕರು ಹಾಗೂ ಅಗತ್ಯ ಸಾಮಗ್ರಿಗಳ ಸಾಗಣೆ ವಾಹನಗಳನ್ನು ಹೊರತುಪಡಿಸಿ, ನಗರ ಸಂಪೂರ್ಣವಾಗಿ ಬಂದ್‌ ಆಗಿದೆ. ನಗರದ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಂದೋಬಸ್ತ್‌ ಮಾಡಿದ್ದರು. ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೇ ಒಳ ರಸ್ತೆಗಳೂ ಬಹುತೇಕ ನಿರ್ಜನವಾಗಿದ್ದವು. ಕೆಲವೇ ಕೆಲವರು ಮನೆ ಸಮೀಪದ ಹಾಲಿನ ಅಂಗಡಿಗಳಿಗೆ ತೆರಳುತ್ತಿರುವುದು ಕಂಡು ಬಂತು.

ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದ್ದು, ಮಾರುಕಟ್ಟೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಔಷಧಿ, ದಿನಪತ್ರಿಕೆ, ಹಾಗೂ ಅಗತ್ಯ ಸಾಮಗ್ರಿಗಳನ್ನು ಹೊರತುಪಡಿಸಿ, ಎಲ್ಲ ಅಂಗಡಿಗಳು ಬಂದ್ ಆಗಿದ್ದವು.

ನಾಗರಿಕರು ಲಾಕ್‌ಡೌನ್ ಅನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಪಂಪ್‌ವೆಲ್, ಜಪ್ಪಿನಮೊಗರು, ಅಂಬೇಡ್ಕರ್ ವೃತ್ತ, ಟೌನ್‌ಹಾಲ್ ಬಳಿ ಸೇರಿದಂತೆ ನಗರ ಹಲವು ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಲಾಲ್‌ಬಾಗ್, ಪಂಪ್‌ವೆಲ್ ಮತ್ತು ಟೌನ್‌ಹಾಲ್‌ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸಂಚಾರ ಮಾಡುತ್ತಿರುವ ಹಲವು ವಾಹನಗಳನ್ನು ಪೊಲೀಸರು ತಡೆದಿದ್ದು, ತುರ್ತು ಕಾರಣದಿಂದ ಓಡಾಡುತ್ತಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡಿದರು.

ವಾಹನ ಸಂಚಾರ ಸ್ಥಗಿತ: ಲಾಕ್‌ಡೌನ್‌ನಿಂದಾಗಿ ಭಾನುವಾರ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆಟೋ ರಿಕ್ಷಾ, ಖಾಸಗಿ, ಬಸ್‌ಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು, ಟ್ಯಾಕ್ಸಿಗಳು ಸೇರಿದಂತೆ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ.
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಮಾಡಲಾಗಿತ್ತು. ಜನರೇ ಇಲ್ಲದೇ ನಷ್ಟ ಅನುಭವಿಸುತ್ತಿದ್ದ ಖಾಸಗಿ ಬಸ್‌ಗಳೂ ಜಿಲ್ಲಾಡಳಿತದ ಆದೇಶದಂತೆ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಎಲ್ಲೆಡೆಯೂ ಪೊಲೀಸರು ಬಿಗಿ ಬಂದೋಬಸ್ತ್‌ ನಡೆಸಿದ್ದರು.

ಲಾಕ್‌ಡೌನ್‌ ಜಾರಿಗೊಳಿಸಿ– ಖಾದರ್‌

ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಏರಿಕೆಯಾಗುತ್ತಿದ್ದು, ಬೆಂಗಳೂರಿನಂತೆ ಇಲ್ಲೂ ಲಾಕ್‌ಡೌನ್ ಮಾಡಿ ಎಂದು ಶಾಸಕ ಯು.ಟಿ. ಖಾದರ್‌ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

‘ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪನವರೇ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ದಿನೇ ದಿನೇ ಕೈ ಮೀರುತ್ತಿದೆ. ಬೆಂಗಳೂರಿನಂತೆ ಇಲ್ಲೂ ಲಾಕ್‌ಡೌನ್ ಮಾಡಿ. ಇನ್ನಷ್ಟು ಆರೋಗ್ಯ ಹಾಗೂ ವೈದ್ಯಕೀಯ ಮೂಲಸೌಕರ್ಯ ಸಿದ್ಧತೆ ಮಾಡಿ, ಸೂಕ್ತ ಸಮಯ ನೋಡಿ, ಪೂರಕ ಯೋಜನೆಯ ಅನುಷ್ಠಾನ ಮಾದರಿ ಸಿದ್ಧಪಡಿಸಿದ ಬಳಿಕವಷ್ಟೇ ಲಾಕ್‌ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿ. ಇದು ನನ್ನ ವಿನಯ ಪೂರ್ವಕ ಮನವಿ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT