ಬುಧವಾರ, ಜುಲೈ 28, 2021
28 °C
ಬುಧವಾರ ರಾತ್ರಿಯಿಂದಲೇ ಲಾಕ್‌ಡೌನ್‌ ಜಾರಿ

ಜಿಲ್ಲೆಯಲ್ಲಿ ಅನಗತ್ಯ ತಿರುಗಾಟಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್‌–19 ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಬುಧವಾರ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜುಲೈ 22ರವರೆಗೂ ಲಾಕ್‌ಡೌನ್‌ ಜಾರಿಯಲ್ಲಿರಲಿದ್ದು, ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರ ಆದೇಶದಂತೆ, ಪ್ರತಿನಿತ್ಯ ಬೆಳಿಗ್ಗೆ ಮೂರು ಗಂಟೆಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸೇವೆಗಳು, ವೈದ್ಯಕೀಯ ಕಾರಣದ ಹೊರತಾಗಿ ಜನರು ಅನಗತ್ಯವಾಗಿ ತಿರುಗಾಡದಂತೆ ನಿರ್ಬಂಧ ಹೇರಲಾಗಿದೆ. ತುರ್ತು ಉದ್ದೇಶ ಮತ್ತು ಅನುಮತಿಸಿರುವ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಬಾರದ ನಾಗರಿಕರು ಖಾಸಗಿ ವಾಹನಗಳನ್ನು ರಸ್ತೆಗಿಳಿಸುವಂತಿಲ್ಲ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಸೇರಿದಂತೆ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಒಂದು ವಾರದ ಕಾಲ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.

‘ಈ ಬಾರಿ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಜಾರಿಗೊಳಿಸುತ್ತಿಲ್ಲ. ಅನಗತ್ಯವಾಗಿ ಜನರು ತಿರುಗಾಡುವುದು ಮತ್ತು ಗುಂಪು ಸೇರುವುದನ್ನು ನಿಯಂತ್ರಿಸುವುದಕ್ಕೆ ಪೂರಕವಾಗಿ ಲಾಕ್‌ಡೌನ್‌ ಜಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲಾಗುವುದು. ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ವಿಕಾಶ್‌ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ. ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

ಆಹಾರ ಪದಾರ್ಥ ಲಭ್ಯ: ದಿನಸಿ, ತರಕಾರಿ, ಹಣ್ಣು, ಮಾಂಸ, ಹಾಲು ಸೇರಿದಂತೆ ಎಲ್ಲ ಬಗೆಯ ಆಹಾರ ಪದಾರ್ಥಗಳ ಮಾರಾಟಕ್ಕೆ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಜನರು ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಂಡು ಖರೀದಿ ಮಾಡಬಹುದು.

ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅವಕಾಶವಿದೆ. ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ಬ್ಯಾಂಕ್‌ಗಳು, ಅಗತ್ಯ ಸೇವೆಗಳ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಇ–ಕಾಮರ್ಸ್‌ ಚಟುವಟಿಕೆಗಳೂ ಎಂದಿನಂತೆ ಮುಂದುವರಿಯಲಿವೆ.

‘ಕೈಗಾರಿಕೆಗಳೂ ಎಂದಿನಂತೆ ಕೆಲಸ ಮಾಡಲಿವೆ. ಈ ಅವಧಿಯಲ್ಲಿ ಕೈಗಾರಿಕೆಗಳ ಕಾರ್ಮಿಕರು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬಹುದು. ಪ್ರತ್ಯೇಕ ಪಾಸ್‌ ಅಗತ್ಯವಿರುವುದಿಲ್ಲ. ಸರ್ಕಾರಿ ನೌಕರರು, ಆಸ್ಪತ್ರೆಗಳ ಸಿಬ್ಬಂದಿ ಮತ್ತು ಕೈಗಾರಿಕೆಗಳ ಸಿಬ್ಬಂದಿಯನ್ನು ಕರೆದೊಯ್ಯುವ ಬಸ್‌ಗಳ ಸಂಚಾರಕ್ಕೂ ಅನುಮತಿ ಇದೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

ಪೊಲೀಸರು ಸಜ್ಜು:

ಲಾಕ್‌ಡೌನ್‌ ಜಾರಿಗೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಸಜ್ಜಾಗಿದ್ದಾರೆ. ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಬುಧವಾರ ರಾತ್ರಿಯಿಂದಲೇ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಅಲ್ಲಿ ಎಲ್ಲ ವಾಹನಗಳ ತಪಾಸಣೆಗೆ ಸೂಚಿಸಿದ್ದು, ಅನಗತ್ಯವಾಗಿ ತಿರುಗಾಡುವವರನ್ನು ಪತ್ತೆಹಚ್ಚಲಾಗುತ್ತಿದೆ.

ಮಾರ್ಗಸೂಚಿ ಮೀರಿದರೆ ಕ್ರಮ

‘ಈ ಬಾರಿ ನಿತ್ಯವೂ ಮೂರು ಗಂಟೆಗಳ ಕಾಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಮಾರ್ಗಸೂಚಿಯ ಪ್ರಕಾರ ಬೆಳಿಗ್ಗೆ 8ರಿಂದ 11ರವರೆಗೆ ವಹಿವಾಟು ನಡೆಸಲು ಅಡ್ಡಿ ಇಲ್ಲ. ಮಾರ್ಗಸೂಚಿ ಉಲ್ಲಂಘಿಸಿ ವಹಿವಾಟು ನಡೆಸಿದರೆ ಕ್ರಮ ಜರುಗಿಸಲಾಗುವುದು’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್ ವಿಕಾಸ್‌ ಕುಮಾರ್‌ ವಿಕಾಶ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.