ಮಂಗಳೂರು: ಬಿಲ್ ಪಾವತಿಸಲು ಲಂಚ ಪಡೆಯುತ್ತಿದ್ದ ಕೃಷಿ ಇಲಾಖೆ ಉಪ ನಿರ್ದೇಶಕರನ್ನು ಲೋಕಾಯುಕ್ತ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಮಂಗಳೂರು ಕೃಷಿ ಉಪ ನಿರ್ದೇಶಕಿ ಭಾರತಮ್ಮ ಬಂಧಿತರು. ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿದ್ದ ಪರಮೇಶ್ ಎಂ.ಪಿ ಎಂಬುವರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ₹50 ಲಕ್ಷ ಮೌಲ್ಯದ ವಿವಿಧ ಜಾತಿಯ ಅರಣ್ಯ, ತೋಟಗಾರಿಕೆ ಸಸಿಗಳನ್ನು ಬಂಟ್ವಾಳ ತಾಲ್ಲೂಕಿಗೆ ಸರಬರಾಜು ಮಾಡಿಸಿದ್ದರು. ನಂತರ ಅವರು ವೃತ್ತಿಯಿಂದ ನಿವೃತ್ತರಾಗಿದ್ದರು. ಕಾಮಗಾರಿ ನಡೆಸಿದ ಬಿಲ್ ಪಾವತಿಸಲು ಅರಣ್ಯ ಗುತ್ತಿಗೆದಾರರು ಪರಮೇಶ್ ಅವರಿಗೆ ಒತ್ತಡ ಹಾಕುತ್ತಿದ್ದರು. ಬಿಲ್ ಪಾವತಿಸಬೇಕಾಗಿದ್ದ ಅಧಿಕಾರಿ ಭಾರತಮ್ಮ ಅವರು ಬಿಲ್ ಪಾವತಿಸಲು ₹1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದ ಬಗ್ಗೆ ಪರಮೇಶ್ ದೂರು ನೀಡಿದ್ದರು. ಅದರಂತೆ ಶನಿವಾರ ಮಂಗಳೂರಿನ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಭಾರತಮ್ಮ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎಸ್. ಸೈಮನ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕಲಾವತಿ.ಕೆ, ಚೆಲುವರಾಜು.ಬಿ, ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಪಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.