ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಪತ್ರ ವಿವಾದ: 18 ವಿದ್ಯಾರ್ಥಿಗಳ ಅಮಾನತು

ವಿಟ್ಲ ಖಾಸಗಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿ, ಹಿಂದೂ ವಿದ್ಯಾರ್ಥಿನಿ ನಡುವಿನ ಪ್ರಕರಣ
Last Updated 13 ಡಿಸೆಂಬರ್ 2022, 19:33 IST
ಅಕ್ಷರ ಗಾತ್ರ

ವಿಟ್ಲ (ದಕ್ಷಿಣ ಕನ್ನಡ): ಪ್ರೇಮ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಪದವಿಪೂರ್ವ ಕಾಲೇಜಿನ 18 ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ವಾರ್ಷಿಕ ಪರೀಕ್ಷೆಯ ವರೆಗೆ ಕಾಲೇಜಿನಿಂದ ಅಮಾನತು ಮಾಡಿದ್ದಾರೆ.

‘ಕಾಲೇಜಿನಲ್ಲಿ ದ್ವಿತೀಯ ಪಿ.ಯು ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿ ಮತ್ತು ಹಿಂದೂ ವಿದ್ಯಾರ್ಥಿನಿ ನಡುವಿನ ಪ್ರೇಮ ಪತ್ರ ಪ್ರಕರಣವು ವಿವಾದದ ಸ್ವರೂಪ ಪಡೆದಿದೆ. ಹೀಗಾಗಿ ಪೋಷಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಮಾತುಕತೆ ನಡೆಸಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಅಮಾನತುಗೊಂಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾತ್ರ ಕಾಲೇಜಿಗೆ ಬರಬಹುದು ಎಂದು ಸೂಚನೆ ನೀಡಲಾಗಿದೆ.

‘ಪ್ರೀತಿಸುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಪೋಷಕರನ್ನು ಕಾಲೇಜಿನ ಆಡಳಿತ ಮಂಡಳಿಯು ಈ ಮೊದಲೇ ಕಾಲೇಜಿಗೆ ಕರೆಯಿಸಿ, ಅವರಿಬ್ಬರ ಪ್ರೇಮದ ವಿಚಾರವನ್ನು ಗಮನಕ್ಕೆ ತಂದಿತ್ತು. ಆ ಬಳಿಕ ಯಾವುದೇ ಗೊಂದಲವಿಲ್ಲದೆ ತರಗತಿ ನಡೆಯುತ್ತಿತ್ತು. ಆದರೆ, ಈಚೆಗೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರೇಮ ಪ್ರಕರಣವು ಮತ್ತೆ ವಿವಾದ ಪಡೆದುಕೊಂಡಿದೆ. ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದುದ್ದನ್ನು ಉಪನ್ಯಾಸಕರು ಪರಿಶೀಲಿಸಲು ಮುಂದಾದಾಗ, ವಿದ್ಯಾರ್ಥಿನಿಯ ಕೈಯಲ್ಲಿ ಪ್ರೇಮಪತ್ರ ಪತ್ತೆಯಾಗಿದೆ. ಆದರೆ, ಅದನ್ನು ನೀಡಿದ ವಿದ್ಯಾರ್ಥಿ ಅಂದು ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪೋಷಕರಿಗೆ ಈ ವಿಷಯ ತಿಳಿಸಿದ ಕಾಲೇಜು ಆಡಳಿತ ಮಂಡಳಿ, ಪರೀಕ್ಷೆಗೆ ಬರೆಯಲು ಮಾತ್ರ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕಳುಹಿಸುವಂತೆ ಸೂಚನೆ ನೀಡಿತ್ತು’ ಎಂಬುದು ಮೂಲಗಳ ಮಾಹಿತಿ.

‘ಪ್ರೇಮಪತ್ರ ಬರೆದ ವಿದ್ಯಾರ್ಥಿಯು ಮರುದಿನ ತರಗತಿಗೆ ಹಾಜರಾದಾಗ, ಹಿಂದೂ ಸಮುದಾಯದ ವಿದ್ಯಾರ್ಥಿಗಳು ಅದನ್ನು ಪ್ರಶ್ನಿಸಿದ್ದರು. ವಿದ್ಯಾರ್ಥಿನಿಗೆ ಕಾಲೇಜಿಗೆ ಬರಬೇಡ ಎಂದು ಹೇಳಿ, ಈ ವಿದ್ಯಾರ್ಥಿಗೆ ಹೇಗೆ ಅವಕಾಶ ನೀಡಿದ್ದೀರಿ ಎಂದು ಕೇಳಿದರು. ವಿಷಯ ವಿವಾದ ಸ್ವರೂಪ ಪಡೆಯುತ್ತಿದ್ದಂತೆ, ಆ ವಿದ್ಯಾರ್ಥಿಯ ಬೆಂಬಲಕ್ಕೆ ನಿಂತವರನ್ನು ಹಾಗೂ ಪ್ರಶ್ನಿಸಲು ಹೋದ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿತ್ತು. ಎರಡೂ ಕಡೆಯ ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಮಾತ್ರ ಅವಕಾಶ ನೀಡುವ ನಿರ್ಧಾರವನ್ನು ಕಾಲೇಜಿನ ಆಡಳಿತ ಮಂಡಳಿ ತೆಗೆದುಕೊಂಡಿದೆ’ ಎಂದು ಮೂಲಗಳು
ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT