ಶುಕ್ರವಾರ, ನವೆಂಬರ್ 22, 2019
26 °C
ಚಿಂತಕ, ಗಾಂಧಿವಾದಿ ಪ್ರೊ.ಗಣೇಶ್‌ ಎನ್‌.ದೇವಿ

ಗಾಂಧಿ ಬದುಕಿದ್ದರೆ ಎನ್‌ಆರ್‌ಸಿ ವಿರೋಧಿಸುತ್ತಿದ್ದರು

Published:
Updated:
Prajavani

ಮಂಗಳೂರು: ಮಹಾತ್ಮ ಗಾಂಧೀಜಿ ಯವರು ಈಗ ಬದುಕಿರುತ್ತಿದ್ದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿದ್ದರು. ಕಸ್ತೂರಬಾ ಅವರೂ ಹೋರಾಟದಲ್ಲಿ ಜತೆಯಾಗಿರುತ್ತಿದ್ದರು ಎಂದು ಗಾಂಧಿವಾದಿ, ಚಿಂತಕ ಪ್ರೊ.ಗಣೇಶ್‌ ಎನ್‌.ದೇವಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಅಧ್ಯಯನ ಕೇಂದ್ರದ ವತಿಯಿಂದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಗಾಂಧಿಯವರ ಸಂಭಾಷಣೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ‘ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯ’ ವಿಷಯ ಕುರಿತು ಅವರು ಮಾತನಾಡಿದರು.

ಲಿಂಗ, ಧರ್ಮ, ಜಾತಿ, ವರ್ಗಗಳ ಭೇದವಿಲ್ಲದೆ ಸತ್ಯ ಮತ್ತು ಅಹಿಂಸೆಯ ಹೋರಾಟಗಳಿಂದ ಮಾತ್ರವೇ ಪ್ರಜಾಪ್ರಭುತ್ವವನ್ನು ಕಾಪಾಡಲು ಸಾಧ್ಯ. ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವವನ್ನು ಗಾಂಧೀಜಿ ಬಯಸಿದ್ದರು. ಆದರೆ, ಕೇಂದ್ರ ಸರ್ಕಾರವು ಎನ್‌ಆರ್‌ಸಿ
ಮೂಲಕ ಮುಸ್ಲಿಮರು ಮತ್ತು ಯೆಹೂದಿಗಳು ದೇಶದಲ್ಲಿ ಆಶ್ರಯ ಪಡೆಯುವ ಅವಕಾಶ ನಿರಾಕರಿಸಲು ಹೊರಟಿದೆ. ಇದು ಗಾಂಧೀಜಿಯವರು ಪ್ರತಿಪಾದಿಸಿದ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆ ಎಂದರು.

ಅಹಿಂಸೆ ಮತ್ತು ಸತ್ಯದ ಬುನಾದಿಯ ಮೇಲೆ ನಡೆಸಿದ ಹೋರಾಟವನ್ನು ಗಾಂಧೀಜಿಯವರು ಎಂದೂ ರಾಜಕೀಯ ತತ್ವವಾಗಿ ಕಂಡಿರಲಿಲ್ಲ. ಅಹಿಂಸೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಆಳುವವರನ್ನು ಪ್ರಶ್ನಿಸುತ್ತಿದ್ದರು. ಸತ್ಯವನ್ನು ಹೇಳುವ ಮೂಲಕ ಆ ಕಾಲಘಟ್ಟದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದರು. ದ್ವೇಷ, ತಾರತಮ್ಯ, ಕೋಮುಸಂಘರ್ಷ ರಹಿತ
ಪ್ರಜಾಪ್ರಭುತ್ವವನ್ನು ಅವರು ಬಯಸಿದ್ದರು ಎಂದು ಹೇಳಿದರು.

ಮಹಾನ್‌ ಧೈರ್ಯಶಾಲಿ: ‘ತಾನು ನಂಬಿದ ವಿಚಾರಗಳನ್ನು ಇತತರಿಗೆ ತಿಳಿಸುವ ವಿಷಯದಲ್ಲಿ ಗಾಂಧೀಜಿಯವರು ಮಹಾನ್‌ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಮುಸಲೋನಿಯಂತಹ ಸರ್ವಾಧಿಕಾರಿಯ ಜೊತೆಗಿನ ಚರ್ಚೆಯ ವೇಳೆಯಲ್ಲೂ ಅವರು ಕೋಮುವಾದಕ್ಕೆ ಅವಕಾಶವಿಲ್ಲದ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸುವ ಕುರಿತು ಮಾತನಾಡಿದ್ದರು’ ಎಂದು ಗಣೇಶ್‌ ದೇವಿ ಸ್ಮರಿಸಿದರು.

ಗಾಂಧೀಜಿ ಎದುರಿಸಿದ್ದ ಸವಾಲುಗಳೇಈಗ ದೇಶದ ಜನರ ಮುಂದಿವೆ. ಅವರು ತೋರಿದ ಧೈರ್ಯವನ್ನು ಈಗಿನ ಯುವಜನರು ತೋರಿಸಬೇಕಿದೆ. ಭಯರಹಿತ, ಅಹಿಂಸೆ ಮತ್ತು ತ್ಯಾಗದ ಹೊರತಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದರು.

ಜನರು ಪ್ರಭುತ್ವವನ್ನು ಪ್ರಶ್ನಿಸುವುದು ಮತ್ತು ಸತ್ಯದ ಕುರಿತು ನಿರ್ಭೀತಿಯಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಗಾಂಧೀಜಿ ಬಯಸಿದ್ದರು. ಅವರ ಚಿಂತನೆಗಳನ್ನು ಪುನರ್‌ ಅವಲೋಕಿಸುವ ಮತ್ತು ಅಳವಡಿಸಿಕೊಂಡು ನಡೆಯುವ ಕೆಲಸವನ್ನು ಯುವಜನತೆ ಮಾಡಬೇಕಿದೆ. ಆಗ ಪ್ರಜಾಪ್ರಭುತ್ವ ನಿಜವಾಗಿಯೂ ಬಲಗೊಳ್ಳುತ್ತದೆ ಎಂದು ಹೇಳಿದರು.

ಶಕ್ತಿಯಾಗಿದ್ದ ಕಸ್ತೂರಬಾ: ಗಾಂಧೀಜಿಯವರಿಗೆ ಪತ್ನಿ ಕಸ್ತೂರಬಾ ದೊಡ್ಡ ಶಕ್ತಿಯಾಗಿದ್ದರು. ಕಸ್ತೂರಬಾ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಸತ್ಯಾಗ್ರಹಗಳನ್ನು ಗೆಲುವಿನ ದಡ ತಲುಪಿಸಿತ್ತು. ಪತ್ನಿಯ ನಿಧನದ ನಂತರ ಗಾಂಧೀಜಿಯವರು ಯಾವುದೇ ಸತ್ಯಾಗ್ರಹವನ್ನೂ ನಡೆಸಿಲ್ಲ ಎಂಬುದು ಇದಕ್ಕೆ ಸಾಕ್ಷಿ ಎಂದರು.

ನೆಹರೂ ಅಧ್ಯಯನ ಕಂದ್ರದ ನಿರ್ದೇಶಕ ಪ್ರೊ.ರಾಜಾರಾಂ ತೋಳ್ಪಾಡಿ ಮಾತನಾಡಿ, ‘ಪ್ರಜಾಪ್ರಭುತ್ವ ಈಗ ಆತಂಕದಲ್ಲಿದೆ. ಇಂತಹ ಸಮಯದಲ್ಲಿ ಗಾಂಧೀಜಿ ತೋರಿದ ದಾರಿಗಳು ನಮಗೆ ಅನುಕರಣೀಯ’ ಎಂದು ಹೇಳಿದರು

ರಾಜಕೀಯ ವಿಶ್ಲೇಷಕ ಪ್ರೊ.ವಲೇರಿಯನ್ ರಾಡ್ರಿಗಸ್, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಎಚ್., ಪ್ರಾಂಶುಪಾಲ ಡಾ. ಉದಯ ಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)