ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗೋಲಿಬಾರ್‌| ಪೊಲೀಸ್‌ ಭದ್ರತೆಯಲ್ಲೇ ಅಂತ್ಯಸಂಸ್ಕಾರ

ವೆನ್ಲಾಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಹಸ್ತಾಂತರ
Last Updated 21 ಡಿಸೆಂಬರ್ 2019, 10:04 IST
ಅಕ್ಷರ ಗಾತ್ರ

ಮಂಗಳೂರು: ಗುರುವಾರ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಕಂದಕ್‌ ನಿವಾಸಿ ಅಬ್ದುಲ್ ಜಲೀಲ್‌ (47) ಮತ್ತು ಕುದ್ರೋಳಿ ನಿವಾಸಿ ನೌಶೀನ್‌ (23) ಅವರ ಅಂತ್ಯಕ್ರಿಯೆಯನ್ನುಭಾರಿ ಪೊಲೀಸ್‌ ಭದ್ರತೆಯ ನಡುವೆಯೇ ನೆರವೇರಿಸಲಾಯಿತು.

ಗುರುವಾರ ಸಂಜೆಯಿಂದ ಮೃತದೇಹಗಳನ್ನು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಪೊಲೀಸ್‌ ಬಿಗಿ ಭದ್ರತೆಯಲ್ಲಿ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮೂವರು ವಿಧಿವಿಜ್ಞಾನ ತಜ್ಞರು ಹಾಗೂ ಒಬ್ಬ ಬ್ಯಾಲಿಸ್ಟಿಕ್‌ ತಜ್ಞರನ್ನು ಒಳಗೊಂಡ ತಂಡ ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿತು.

ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್‌ ಅವರ ಉಪಸ್ಥಿತಿಯಲ್ಲೇ ಇಡೀ ಪ್ರಕ್ರಿಯೆ ನಡೆದಿದ್ದು, ಸಂಪೂರ್ಣ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀಗಣೇಶ್‌ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಪಡೆದರು.

ಮಧ್ಯಾಹ್ನ 2.15ಕ್ಕೆ ಭಾರಿ ಪೊಲೀಸ್‌ ಭದ್ರತೆಯಲ್ಲಿ ಶವಾಗಾರದಿಂದ ಮೃತದೇಹಗಳನ್ನು ಯೂನಿಟಿ ಆಸ್ಪತ್ರೆ ಸಮೀಪದ ಮಸೀದಿಗೆ ತರಲಾಯಿತು. ಅಲ್ಲಿ ಧಾರ್ಮಿಕ ವಿಧಿಗಳನ್ನು ನರೆವೇರಿಸಿದ ಬಳಿಕ ಮೃತರ ಮನೆಗಳಿಗೆ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲಾಯಿತು. ಪೊಲೀಸ್‌ ಭದ್ರತೆಯಲ್ಲೇ ಒಂದು ಗಂಟೆ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಂಜೆ 4.30ರ ಸುಮಾರಿಗೆ ಮನೆಯಿಂದ ಪೊಲೀಸ್‌ ಭದ್ರತೆಯಲ್ಲೇ ಮಸೀದಿಗಳಿಗೆ ಮೃತದೇಹಗಳನ್ನು ಕೊಂಡೊಯ್ಯಲಾಯಿತು. ಪಾರ್ಥಿವ ಶರೀರಗಳ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಮಸೀದಿಗಳಿಗೆ ತಲುಪಿದ ಬಳಿಕ ಪ್ರಾರ್ಥನೆ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು. ಜಲೀಲ್‌ ಅವರ ಅಂತ್ಯಕ್ರಿಯೆ ಬಂದರು ಪ್ರದೇಶದ ಝೀನತ್‌ ಭಕ್ಷ್‌ ಮಸೀದಿಯ ಆವರಣದಲ್ಲಿ ನಡೆದರೆ, ನೌಶೀನ್‌ ಅಂತ್ಯಕ್ರಿಯೆ ಕುದ್ರೋಳಿಯ ಮೊಯಿದ್ದೀನ್‌ ಮಸೀದಿ ಆವರಣದಲ್ಲಿ ನಡೆಯಿತು. ಸಹಸ್ರಾರು ಪೊಲೀಸರ ಬಿಗಿ ಭದ್ರತೆಯಲ್ಲೇ ಎಲ್ಲವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT