ಶುಕ್ರವಾರ, ಏಪ್ರಿಲ್ 3, 2020
19 °C
ಮಂಗಳೂರು ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ವಿಚಾರಣೆ

ಮಂಗಳೂರು ಗೋಲಿಬಾರ್: 38 ದಾಖಲೆ ಸಲ್ಲಿಸಿದ ಡಿಸಿಪಿ ಅರುಣಾಂಗ್ಷು ಗಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಡಿಸೆಂಬರ್  19ರಂದು ನಡೆದ ಗಲಭೆ ಮತ್ತು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಹಾಜರಾದ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರು ವಿಚಾರಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ 38 ದಾಖಲೆಗಳನ್ನು ಸಲ್ಲಿಸಿದರು.

ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧದ ಉಪ‌ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ವಿಚಾರಣೆ ನಡೆಯಿತು‌ ವಿಚಾರಣಾಧಿಕಾರಿ ಎದುರು ಹಾಜರಾದ ಐಪಿಎಸ್ ಅಧಿಕಾರಿ ಅರುಣಾಂಗ್ಷು ಗಿರಿ, ಲಿಖಿತ ಹೇಳಿಕೆ ಮತ್ತು ದಾಖಲೆಗಳನ್ನು ಸಲ್ಲಿಸಿದರು.

‘ಡಿ.19ರಂದು ನಾನು ಪೊಲೀಸ್ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದೆ. ಅನುಮತಿ ಇಲ್ಲದೆ ಪ್ರತಿಭಟನೆಗೆ ಯತ್ನಿಸಿದ ಜನರನ್ನು ನಿಯಂತ್ರಿಸುವ  ಕೆಲಸ ಮಾಡುತ್ತಿದ್ದೆವು. ಪ್ರತಿಭಟನೆಗೆ ಸೇರಿದ್ದ ಜನರು ಗಲಭೆಗೆ ಇಳಿದರು. ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸಿದರು. 78 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡರು. ಪರಿಸ್ಥಿತಿ ನಿಯಂತ್ರಿಸಲು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು’ ಎಂದು ಡಿಸಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಖಾಝಿ ಹೇಳಿಕೆ ದಾಖಲು: ವಿಚಾರಣಾಧಿಕಾರಿ ಎದುರು ಹಾಜರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಅವರು ಘಟನೆಗೆ ಸಂಬಂಧಿಸಿದಂತೆ ಲಿಖಿತ ಹೇಳಿಕೆ ಸಲ್ಲಿಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಕೆಎಸ್ಎಸ್ಎಫ್) ವತಿಯಿಂದ ‌ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪೊಲೀಸರು ಅನುಮತಿ‌ ನಿರಾಕರಿಸಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿತ್ತು. ಈ ಸಂಬಂಧ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಲಾಗಿತ್ತು. ಡಿ.19ರ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂಬುದಾಗಿ ಖಾಝಿ ಹೇಳಿಕೆಯಲ್ಲಿ ಎಂದು ಗೊತ್ತಾಗಿದೆ.

‘ಗಲಭೆಯ ಬಳಿಕ ಕೆಲವರು ನನ್ನನ್ನು ದ್ವೇಷಿಸುತ್ತಿದ್ದಾರೆ. ನನ್ನ ಕೊಲೆಗೂ ಯತ್ನಗಳು ನಡೆದಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ’ ಎಂದು ವಿಚಾರಣಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಚಾರಣಾ ಕಲಾಪ ಮುಗಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಜಿ.ಜಗದೀಶ್, '30 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರು. ಮಾರ್ಚ್ 12ರಂದು ಮತ್ತೆ ವಿಚಾರಣೆ ನಡೆಯಲಿದೆ‌. ಆ ದಿನ ಪೊಲೀಸ್ ಕಮಿಷನರ್ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಲಿದ್ದಾರೆ' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು