ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ರಕ್ಷಣೆಗೆ ಗಾಂಧಿ ತತ್ವ ಶಕ್ತಿ: ಅರವಿಂದ ಚೊಕ್ಕಾಡಿ

ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ
Last Updated 26 ಜನವರಿ 2023, 12:42 IST
ಅಕ್ಷರ ಗಾತ್ರ

ಮಂಗಳೂರು: ಮಹಾತ್ಮ ಗಾಂಧೀಜಿ ತಮ್ಮ ಬದುಕಿನುದ್ದಕ್ಕೂ ಪ್ರತಿನಿಧಿಸಿದ ನೈತಿಕ ಶಕ್ತಿ, ಸಂವಾದದ ಮೂಲಕ ಸಮಸ್ಯೆ ಬಗೆಹರಿಸುವ ವಿಧಾನ ಹಾಗೂ ಅಹಿಂಸಾ ತತ್ವಗಳು ಪ್ರಜಾಪ್ರಭುತ್ವ ರಕ್ಷಣೆಯ ಮೂಲಶಕ್ತಿಗಳಾಗಿವೆ. ಇವುಗಳನ್ನು ಅನುಸರಿಸುವುದರಿಂದ ಪ್ರಜಾಪ್ರಭುತ್ವವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯ ಎಂದು ಅಧ್ಯಾಪಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಗಾಂಧಿಮಾರ್ಗದ ಮಹತ್ವ’ ಕುರಿತು ಅವರು ಉಪನ್ಯಾಸ ನೀಡಿದರು.

ಅಹಿಂಸೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದವರು ಗಾಂಧೀಜಿ.‌ ಅದರಿಂದ ಕೆಲವು ನಷ್ಟಗಳು ಆಗಿವೆ ನಿಜ.‌ ಆದರೆ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಅತಿ ಮಹತ್ವದ ತತ್ವ ಅಹಿಂಸೆ. ಪ್ರಜಾಪ್ರಭುತ್ವವು ಉಳಿದೆಲ್ಲ‌ ಪ್ರಭುತ್ವಕ್ಕಿಂತ ಭಿನ್ನವಾಗಿ ಉಳಿಯುವುದು ಅಹಿಂಸೆಯ ತತ್ವದಲ್ಲಿ.‌ ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಮಾತಿನ ಶಕ್ತಿಗೆ ಅಪಾರ ಮಹತ್ವವಿದೆ.‌ ಕೋಟಿಗಳ ಲೆಕ್ಕದಲ್ಲಿ ಖರ್ಚಾದರೂ ಸರಿ, ಸಂಸತ್ತು ಮತ್ತು ವಿಧಾನ ಮಂಡಲಗಳೆಂಬ ಮಾತಿನ ಸಭೆಗಳಿವೆ. ಸಮಸ್ಯೆಗಳು ಮಾತಿನ ಮೂಲಕವೇ ಪರಿಹಾರವಾಗಬೇಕೆಂಬುದು ಅದರ ಆಶಯವಾಗಿದೆ.‌ ಗಾಂಧೀಜಿಯ ಒಲವಿಗೆ ಸರಿಹೊಂದುವುದು ಅಧ್ಯಕ್ಷೀಯ ಪ್ರಜಾಪ್ರಭುತ್ವ. ಆದರೆ, ಅವರ ಅಹಿಂಸಾ ತತ್ವಕ್ಕೆ ಹೆಚ್ಚು ಪರವಾಗಿರುವುದು ಸಂಸದೀಯ ಪ್ರಜಾಪ್ರಭುತ್ವವೇ ಆಗಿದೆ ಎಂದರು.

‘ಗಾಂಧೀಜಿ ಯಾರನ್ನೂ ನಿರಾಕರಣೆ ಮಾಡಲಿಲ್ಲ.‌ ಯಾರ ಬಗ್ಗೆ ದ್ವೇಷದ ಮಾತಾಡಲಿಲ್ಲ. ತನ್ನ ವಿಚಾರದಲ್ಲಿ ಸ್ಥಿರವಾಗಿದ್ದರು.‌ ಸರಿಯಾದ ವಿಚಾರವನ್ನು ಸ್ವೀಕರಿಸಿದರು. ಸರಿಯಲ್ಲದ ವಿಚಾರವನ್ನು ನಿರಾಕರಿಸಿದರು.‌ ಇದು ಪ್ರಜಾಪ್ರಭುತ್ವದ ಮೂಲ ತತ್ವ.‌ ವ್ಯವಸ್ಥೆಯ ಉತ್ತಮೀಕರಣಕ್ಕೆ ಗಾಂಧೀಜಿಯವರ ಮೌಲ್ಯಗಳು, ನಂಬಿಕೆಗಳು, ದಿಟ್ಟತನ, ಸಂಯಮ ಇವೆಲ್ಲವೂ ಆಧಾರ ಸ್ತಂಭಗಳಾಗಿವೆ ಎಂದು ಅನೇಕ ದೃಷ್ಟಾಂತಗಳನ್ನು ತೆರೆದಿಟ್ಟರು.

ಪ್ರಜಾಪ್ರಭುತ್ವ ಎಂದರೆ ಜವಾಬ್ದಾರಿ, ಕೇವಲ ಹಕ್ಕಲ್ಲ. ಈ ವಿಚಾರ ಮುಂದಿಟ್ಟು ನೋಡಿದಾಗ, ಸಮುದಾಯಗಳ ಯುವಜನರು ವೇಷ ಪೂರಿತ ಮಾತಾಡಿದಾಗ ಆಗುವ ಆತಂಕಕ್ಕಿಂತ, ಜ್ಞಾನಿಗಳು ಎಂದು ನಾವು ಭಾವಿಸಿದವರು ದ್ವೇಷದ ಮಾತನಾಡಿದಾಗ ಜಾಸ್ತಿ ಆತಂಕವಾಗುತ್ತದೆ.‌ ಹುಡುಗರ ಸಂಖ್ಯೆ ಅದೆಷ್ಟೇ ದೊಡ್ಡದಿದ್ದರೂ ತಿಳಿಸಿ ಹೇಳಬಹುದು.‌ ಆದರೆ ತಿಳಿವಳಿಕೆ ಇರುವ ಜ್ಞಾನಿಗಳಿಗೆ ತಿಳಿಸಿ ಹೇಳಬಹುದಾದ್ದೇನೂ ಇರುವುದಿಲ್ಲ. ಇವರಿಗೆ ಮಾತಿನ ಶಕ್ತಿಯ ಅರಿವಿಲ್ಲದಿದ್ದರೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಹೇಗೆ? ಸಮಾಜದ ಮೊದಲ ಆಯ್ಕೆಯೇ ಆಯುಧ ಪ್ರಯೋಗ ಎಂದು ಆದ ದಿವಸ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್, ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್ ಇದ್ದರು. ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT