ಮಂಗಳವಾರ, ನವೆಂಬರ್ 19, 2019
25 °C
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ರೆಡ್‌ಕ್ರಾಸ್ ರಕ್ತ ನಿಧಿ ಕೇಂದ್ರ

ಮಲೇರಿಯಾ–ಡೆಂಗಿ: ಹೆಚ್ಚುತ್ತಿದೆ ರಕ್ತಕ್ಕೆ ಬೇಡಿಕೆ

Published:
Updated:

ಮಂಗಳೂರು: ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರಿನೊಂದಿಗೆ ರಕ್ತಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ.

ಕಳೆದ ವರ್ಷ (2018) ಜೂನ್‌ನಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಿತ್ತು. ಈ ಬಾರಿ (2019) ಮುಂಗಾರು ವಿಳಂಬವಾಗಿ ಆರಂಭವಾಗಿದ್ದು, ಜುಲೈಯಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಮುಂಗಾರಿನಲ್ಲಿ ಸೊಳ್ಳೆಯಿಂದ ಹರಡುವ ಮಲೇರಿಯಾ, ಡೆಂಗಿ ಮತ್ತಿತರ ರೋಗಗಳು ಜಿಲ್ಲೆಯಲ್ಲಿ ಉಲ್ಬಣಿಸುವ ಪರಿಣಾಮ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿಶೇಷವಾಗಿ ಜಿಲ್ಲಾ ಕೇಂದ್ರದಲ್ಲಿ ಈ ಸಮಸ್ಯೆ ಹೆಚ್ಚಿದ್ದು, ವರ್ಷದಿಂದ ವರ್ಷಕ್ಕೆ ರಕ್ತವನ್ನು ಪಡೆಯುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. 

ಪ್ರತಿ ರಕ್ತದ ಯುನಿಟ್‌ಗೆ ರೆಡ್‌ಕ್ರಾಸ್‌ ಬ್ಲಡ್‌ ಬ್ಯಾಂಕ್ ಕನಿಷ್ಠ ದರ ವಿಧಿಸುತ್ತದೆ. ಇದು ಕೇವಲ ರಕ್ತದ ಪರೀಕ್ಷೆ ಹಾಗೂ ವರ್ಗೀಕರಿಸುವ ದರ ಮಾತ್ರ. ಈ ನಡುವೆಯೂ ರೆಡ್‌ ಕ್ರಾಸ್ 2017–18ರಲ್ಲಿ 2,988, 2018–19ರಲ್ಲಿ 2,218 ಯುನಿಟ್‌ ರಕ್ತವನ್ನು ಉಚಿತವಾಗಿಯೇ ನೀಡಿದೆ.

‘ರೆಡ್‌ಕ್ರಾಸ್‌ ಮಾದರಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 13 ಬ್ಲಡ್ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಯೂ ಮುಂಗಾರಿನಲ್ಲಿ ರಕ್ತಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ’ ಎಂದು ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಪ್ರಭಾಕರ ಶರ್ಮಾ ವಿವರಿಸಿದರು.

18 ರಿಂದ 45 ವರ್ಷದೊಳಗಿನ 45 ಕೆಜಿಗಿಂತ ಹೆಚ್ಚಿನ ತೂಕವಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಪ್ರತಿ ವ್ಯಕ್ತಿಯ ದೇಹದಲ್ಲಿ ಸುಮಾರು ಆರು ಲೀಟರ್‌ನಷ್ಟು ರಕ್ತವಿದ್ದು, ಒಂದು ಬಾರಿಗೆ 350 ಮಿಲಿ ಲೀಟರ್ ರಕ್ತ ದಾನ ಮಾಡಬಹುದು. ಈ ರಕ್ತವು ಮುಂದಿನ 24ರಿಂದ 48 ಗಂಟೆಯೊಳಗೆ ಅವರ ದೇಹದಲ್ಲಿ ಮತ್ತೆ ಉತ್ಪಾದನೆಗೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.

ಎ+–,ಬಿ+–,ಒ+–, ಎಬಿ+– ರಕ್ತದ ಗುಂಪುಗಳಿವೆ. ದಾನಿಗಳು ನೀಡಿದ ರಕ್ತವನ್ನು ಪೂರ್ಣ ರಕ್ತ, ಪ್ಯಾಕ್ಡ್‌ ಸೆಲ್, ಫ್ರೆಶ್ ಫ್ರೋಜನ್ ಪ್ಲಾಸ್ಮಾ ಹಾಗೂ ಪ್ಲೇಟ್‌ಲೆಟ್ ಎಂದು ನಾಲ್ಕು ರೀತಿಯಲ್ಲಿ ವರ್ಗೀಕರಿಸಿ, ರೋಗಿಯ ಬೇಡಿಕೆಗೆ ಅನುಗುಣವಾಗಿ ನೀಡಲಾಗುತ್ತದೆ.

ಡೆಂಗಿ ಬಾಧಿತರಿಗೆ ಪ್ಲೇಟ್‌ಲೆಟ್‌ ನೀಡಲಾಗುತ್ತದೆ. ಆದರೆ, ಒಬ್ಬ ದಾನಿಯ 350 ಮಿಲಿ ಲೀಟರ್ ರಕ್ತದಲ್ಲಿ ಕೇವಲ ಶೇ 14.29ರಷ್ಟು (50 ಮಿಲಿ ಲೀಟರ್) ಮಾತ್ರ ಪ್ಲೇಟ್‌ಲೆಟ್‌ ಸಿಗುತ್ತದೆ. ಹೀಗಾಗಿ, ಡೆಂಗಿ ಸಂದರ್ಭದಲ್ಲಿ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ತೀವ್ರವಾಗಿ ಏರಿಕೆಯಾಗಿತ್ತು ಎನ್ನುತ್ತಾರೆ ಕೇಂದ್ರದ ರವೀಂದ್ರ.  

‘ರಕ್ತದಾನ ಶಿಬಿರ, ರಕ್ತದಾನಿಗಳ ಗ್ರೂಪ್, ಸಂಘಟನೆಗಳ ಮೂಲಕ ರಕ್ತವನ್ನು ಸಂಗ್ರಹಿಸುತ್ತೇವೆ. ಯುವಜನತೆ ಸಮಾಜಕ್ಕೆ ನೆರವಾಗುವ ನಿಟ್ಟಿನಲ್ಲಿ ರಕ್ತದಾನಕ್ಕೆ ಮುಂದೆ ಬರಬೇಕು. ಯಾರೇ ರಕ್ತದಾನ ಶಿಬಿರ ಆಯೋಜಿಸಿದರೂ, ಸಹಕಾರ ನೀಡುತ್ತೇವೆ’ ಎನ್ನುತ್ತಾರೆ ರವೀಂದ್ರ.

ರೆಡ್‌ಕ್ರಾಸ್ ವತಿಯಿಂದ ಬಡವರಿಗಾಗಿ ಈತನಕ 2017–18ರಲ್ಲಿ 2,988 ಹಾಗೂ 2018–19ರಲ್ಲಿ 2,218 ಮಂದಿಗೆ ಉಚಿತವಾಗಿ ರಕ್ತ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0824–2410787 ಅಥವಾ 2424788 ಸಂಪರ್ಕಿಸಬಹುದು ಎನ್ನುತ್ತಾರೆ ಕೇಂದರದ ಸಿಬ್ಬಂದಿ ಪ್ರಿಯಾ ಮತ್ತು ನಾಗಭೂಷಣ.

ಪ್ರತಿಕ್ರಿಯಿಸಿ (+)