ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥುನ್‌ ರೈ ಹೇಳಿಕೆ; ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

Last Updated 16 ಜುಲೈ 2019, 15:26 IST
ಅಕ್ಷರ ಗಾತ್ರ

ಸುರತ್ಕಲ್‌: ‘ಸುರತ್ಕಲ್‌ ಟೋಲ್ ಗೇಟ್‌ ವಿರುದ್ಧ ಪ್ರತಿಭಟನೆ ಮಾಡುವ ನೈತಿಕತೆ ಬಿಜೆಪಿಯವರಿಗೆ ಇದ್ದರೆ ಸಂಸದರಿಗೆ ಚಪ್ಪಲಿಯಲ್ಲಿ ಹೊಡೆಯಲಿ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಿಥುನ್‌ ರೈ ಹೇಳಿದ್ದಾರೆ.

ಸ್ಥಳೀಯ ವಾಹನಗಳಿಂದಲೂ ಟೋಲ್‌ ಸಂಗ್ರಹ ವಿರೋಧಿಸಿ ಸುರತ್ಕಲ್‌ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಟೋಲ್‌ ಗೇಟ್‌ ಬಳಿಯೇ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸುವಾಗ ಮಿಥುನ್‌, ಈ ರೀತಿ ಹೇಳಿಕೆ ನೀಡಿದ್ದಾರೆ.

‘ಹಿಂದೆ ನಾವು 11 ದಿನಗಳ ಕಾಲ ಹೋರಾಟ ನಡೆಸಿದ್ದೆವು. ಆಗ ಸಂಸದರು ಇದೇ ಮಾರ್ಗದಲ್ಲಿ ಉಡುಪಿಗೆ ತೆರಳಿ ಅಲ್ಲಿನ ಮರಳಿನ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದರು. ಟೋಲ್‌ ಗೇಟ್‌ ವಿರುದ್ಧದ ಹೋರಾಟ ಬೆಂಬಲಿಸಿರಲಿಲ್ಲ. ಟೋಲ್‌ ಗೇಟ್‌ ಮುಚ್ಚಿಸುವುದಾಗಿ ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು’ ಎಂದರು.

‘ಚುನಾವಣೆ ಬಳಿಕ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೂಡಿ ಬಂಡವಾಳಷಾಹಿಗಳನ್ನು ಬೆಂಬಲಿಸುತ್ತಿದ್ದಾರೆ. ಟೋಲ್‌ ವಸೂಲಿಗೆ ಪೊಲೀಸ್‌ ಭದ್ರತೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿದರು.

‘ಬಿಜೆಪಿಯವರು ಇಷ್ಟು ದಿನ ಹೋರಾಟದಿಂದ ದೂರ ಇದ್ದು, ಈಗ ಬಂದಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಶಾಸಕರು, ಸಂಸದರ ವಿರುದ್ಧ ಪ್ರತಿಭಟನೆ ನಡೆಸಲಿ. ಸಂಸದರಿಗೆ ಚಪ್ಪಲಿಯಿಂದ ಹೊಡೆಯಲಿ’ ಎಂದು ಹೇಳಿದರು.

ಕ್ಷಮೆ ಯಾಚನೆಗೆ ಆಗ್ರಹ:ಹೇಳಿಕೆ ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಬಿಜೆಪಿ ಘಟಕಗಳ ಮುಖಂಡರು, ಕ್ಷಮೆ ಯಾಚಿಸುವಂತೆ ಮಿಥುನ್‌ ರೈ ಅವರನ್ನು ಆಗ್ರಹಿಸಿದರು.

‘ಕಾಂಗ್ರೆಸ್‌ ಪಕ್ಷದ ಮುತುವರ್ಜಿಯಲ್ಲೇ ಟೋಲ್‌ ಗೇಟ್‌ ಆರಂಭವಾಗಿತ್ತು. ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ ಇದಕ್ಕೆ ಕಾರಣ. ಸಂಸದರ ಬಗ್ಗೆ ಕೀಳುಮಟ್ಟದ ಮಾತನಾಡಿರುವುದು ಮಿಥುನ್‌ ರೈ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದೆ’ ಎಂದು ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ಘಟಕದ ಕಾರ್ಯದರ್ಶಿ ಅಶೋಕ್‌ ಕೃಷ್ಣಾಪುರ ಹೇಳಿದರು.

‘ಮಿಥುನ್‌ ರೈ ವಿರುದ್ಧ ನಳಿನ್‌ಕುಮಾರ್‌ ಕಟೀಲ್‌ ಅವರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಆಘಾತದಿಂದ ಅವರು ಹೊರಬಂದಿಲ್ಲ. ಮಿಥುನ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಸೂಕ್ತ ವೈದ್ಯರಿಂದ ಚಿಕಿತ್ಸೆ ಪಡೆಯಲಿ’ ಎಂದು ಬಿಜೆಪಿ ಮೂಡುಬಿದಿರೆ ಕ್ಷೇತ್ರ ಘಟಕದ ಅಧ್ಯಕ್ಷ ಈಶ್ವರ ಕಟೀಲ್‌ ಹೇಳಿದರು.ವಿಠಲ್ ಸಾಲ್ಯಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT