ಮಂಗಳವಾರ, ಸೆಪ್ಟೆಂಬರ್ 21, 2021
28 °C
ಕುವೈತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 63 ಮಂದಿಯಲ್ಲಿ ತಮಿಳುನಾಡಿನ ಐವರಷ್ಟೇ ಬಾಕಿ

ಮುಂಬೈಗೆ ತಲುಪಿದ 8 ಮಂದಿ ಸಂತ್ರಸ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉದ್ಯೋಕ್ಕೆಂದು ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಕಾರ್ಮಿಕರಲ್ಲಿ ಎಂಟು ಮಂದಿಯ ಕೊನೆಯ ತಂಡ ಸೋಮವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಎಲ್ಲರೂ ತಮ್ಮ ಕುಟುಂಬಗಳನ್ನು ಸೇರುವ ನಿರೀಕ್ಷೆ ಇದೆ.

ಜನವರಿ ತಿಂಗಳಿನಲ್ಲಿ ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್‌ ಮೂಲಕ ಕುವೈತ್‌ಗೆ ತೆರಳಿದ್ದ 63 ಮಂದಿ ಕೆಲಸ, ವೇತನ ಇಲ್ಲದೇ ವಂಚನೆಗೊಳಗಾಗಿದ್ದರು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ನೆರವಿನಲ್ಲಿ ಈ ಕಾರ್ಮಿಕರನ್ನು ರಕ್ಷಿಸಿ ತವರಿಗೆ ಕಳುಹಿಸುವ ಕೆಲಸ ಆರಂಭಿಸಿದ್ದರು.

ಜುಲೈ 15ರಂದು ಇಬ್ಬರು ಕಾರ್ಮಿಕರು ಮುಂಬೈ ಮಾರ್ಗವಾಗಿ ಮಂಗಳೂರು ತಲುಪಿದ್ದರು. ನಂತರ ಹಲವು ತಂಡಗಳಲ್ಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲಾಗಿತ್ತು. ಕೆಲಸ ನೀಡಿದ್ದ ಕಂಪನಿ ಮತ್ತು ಕುವೈತ್‌ ಆಡಳಿತದಿಂದ ದಂಡನೆಗೆ ಗುರಿಯಾಗಿದ್ದ ಕಾರ್ಮಿಕರು ದೇಶಕ್ಕೆ ಹಿಂದಿರುಗುವುದು ವಿಳಂಬವಾಗಿತ್ತು.

ಇಮ್ತಿಯಾಝ್‌ ಉಳ್ಳಾಲ್‌ ಮೇಲಂಗಡಿ, ಅಶ್ಫಾಕ್‌ ಅಮೀರ್‌ ಹುಸೇನ್‌, ಗಣೇಶ ಶಿವರಾಮ, ಮಹಮ್ಮದ್ ಇರ್ಫಾನ್‌, ಹನೀಸ್‌ ಅಬ್ಬು, ಅಝೀಝ್‌ ಅಬ್ದುಲ್‌, ಅಬ್ದುಲ್‌ ಅಝೀಝ್‌ ಆಲಿಕುಂಞಿ ಮತ್ತು ಮಹಮ್ಮದ್ ಆರೀಫ್‌ ಬನ್ನೂರು ಎಂಬ ಕಾರ್ಮಿಕರು ದಂಡ ಪಾವತಿಸಬೇಕಿತ್ತು. ಇದರಿಂದಾಗಿ ಇವರು ಆರಂಭಿಕ ಹಂತದಲ್ಲಿ ವಾಪಸು ಬರಲು ಆಗಿರಲಿಲ್ಲ.

‘ಮಂಗಳೂರಿನ ಎಂಟು ಕಾರ್ಮಿಕರ ಪೈಕಿ ಆರು ಮಂದಿಯ ಬಾಬ್ತು ದಂಡವನ್ನು ಕುವೈತ್‌ ಕೇರಳ ಮುಸ್ಲಿಮರ ಅಸೋಸಿಯೇಷನ್‌ ಕರ್ನಾಟಕ ಘಟಕ ಭರಿಸಿತು. ಉಳಿದ ಇಬ್ಬರ ದಂಡದ ಮೊತ್ತವನ್ನು ಭಾರತೀಯ ಪ್ರವಾಸಿ ಪರಿಷತ್‌ನ ಕುವೈತ್ ಘಟಕ ವಾಪತಿಸಿತು. ಎಂಟು ಮಂದಿಗೂ ಕುವೈತ್‌ ಕೇರಳ ಮುಸ್ಲಿಮರ ಅಸೋಸಿಯೇಷನ್‌ನ ಕರ್ನಾಟಕ ಘಟಕವೇ ಟಿಕೆಟ್‌ ಕೂಡ ಒದಗಿಸಿತ್ತು’ ಎಂದು ಸಂತ್ರಸ್ತ ಕಾರ್ಮಿಕರನ್ನು ರಕ್ಷಿಸಿ, ವಾಪಸು ಕಳುಹಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಕುವೈತ್‌ ಘಟಕದ ಮಾಜಿ ಅಧ್ಯಕ್ಷ ಮೋಹನ್‌ದಾಸ್‌ ಕಾಮತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯೆ ಸೆಕೆಂಡ್‌ ಸೆಕ್ರೆಟರಿ ಸಿಬಿ ಯು.ಎಸ್‌. ಅವರ ಪ್ರಯತ್ನದಿಂದ ಎಲ್ಲ ಕಾರ್ಮಿಕರೂ ದೇಶಕ್ಕೆ ಮರಳುವಂತಾಯಿತು. ಎಂಟು ಮಂದಿ ಭಾನುವಾರವೇ ಹೊರಟಿದ್ದರು. ಸೋಮವಾರ ಮುಂಬೈ ತಲುಪಿದ್ದಾರೆ. ಮಂಗಳವಾರ ಮಧ್ಯಾಹ್ನ ಮಂಗಳೂರು ತಲುಪುವರು’ ಎಂದರು.

ಐವರು ಬಾಕಿ: ವಂಚನೆಗೊಳಗಾದ 63 ಕಾರ್ಮಿಕರ ಪೈಕಿ ತಮಿಳುನಾಡಿನ ಐವರು ಮಾತ್ರ ಕುವೈತ್‌ನಲ್ಲಿ ಉಳಿದಿದ್ದಾರೆ. ಇವರೆಲ್ಲರೂ ದಂಡನೆಗೊಳಗಾದವರು. ಈ ಪೈಕಿ ಮೂವರ ಬಾಬ್ತು ದಂಡ ಪಾವತಿಗೆ ಕುವೈತ್‌ನಲ್ಲಿ ನೆಲೆಸಿರುವ ತಮಿಳುನಾಡಿನ ಕೆಲವರು ಮುಂದಾಗಿದ್ದಾರೆ. ಈ ಮೂರು ಮಂದಿ ಗುರುವಾರ ತಮಿಳುನಾಡಿಗೆ ಹೊರಡಲಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಮೊತ್ತದ ದಂಡ ಪಾವತಿಸಬೇಕಿರುವ ಇಬ್ಬರ ಬಿಡುಗಡೆಗೆ ರಾಯಭಾರ ಕಚೇರಿ ಅಧಿಕಾರಿಗಳೇ ಪ್ರಯತ್ನಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆ ಇಬ್ಬರು ಕಾರ್ಮಿಕರು ಕೂಡ ದೇಶಕ್ಕೆ ಹಿಂದಿರುಗಲಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು