ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಸ್ಪೋಟ ಪ್ರಕರಣ: ಕೊಯಮತ್ತೂರು ಸ್ಫೋಟಕ್ಕೂ ಆರೋಪಿಗೂ ನಂಟು?

ಮಂಗಳೂರಲ್ಲಿ ಬೀಡುಬಿಟ್ಟಿರುವ ತಮಿಳುನಾಡು ಪೊಲೀಸರು
Last Updated 22 ನವೆಂಬರ್ 2022, 20:07 IST
ಅಕ್ಷರ ಗಾತ್ರ

ಮಂಗಳೂರು: ನಗರದ ಗರೋಡಿಯಲ್ಲಿ ನ.19ರಂದು ಆಟೊರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಕ್‌ಗೂ (24) ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಳೆದ ತಿಂಗಳು (ಅ.23ರಂದು) ನಡೆದಿದ್ದ ಸ್ಫೋಟ ಪ್ರಕರಣಕ್ಕೂ ನಂಟು ಇರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಯಮತ್ತೂರಿನಲ್ಲಿ ಸ್ಫೋಟ ಸಂಭವಿಸುವುದಕ್ಕೆ ಸುಮಾರು ಒಂದೂವರೆ ತಿಂಗಳ ಹಿಂದೆ ಶಾರಿಕ್‌ ಕೊಯಮತ್ತೂರಿಗೆ ಹೋಗಿದ್ದ. ಗುರುತಿನ ಬಗ್ಗೆ ಸುಳ್ಳು ಮಾಹಿತಿ ನೀಡಿ, ತಾನು ಹಿಂದೂ ಎಂದು ಪರಿಚಯಿಸಿಕೊಂಡು ಮೂರು ನಾಲ್ಕು ದಿನ ಅಲ್ಲಿಯೇ ಬಾಡಿಗೆ ಕೊಠಡಿಯಲ್ಲಿ (ಡಾರ್ಮೆಟರಿ) ನೆಲೆಸಿದ್ದ. ಇದಕ್ಕಾಗಿ ಆತ ಸಂಡೂರಿನ ಅರುಣ್‌ ಕುಮಾರ್‌ ಗಾವಳಿ ಅವರ ಆಧಾರ್‌ ಕಾರ್ಡ್‌ ದುರ್ಬಳಕೆ ಮಾಡಿದ್ದ. ಅರುಣ್‌ ಕುಮಾರ್‌ ಗಾವಳಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರ ಆಧಾರ್‌ ಕಾರ್ಡ್ 6 ತಿಂಗಳ ಹಿಂದೆ ಕಳವಾಗಿದ್ದು ಗೊತ್ತಾಗಿತ್ತು. ಅವರು ಕೊಯಮತ್ತೂರಿಗೆ ಹೋಗಿಯೇ ಇರಲಿಲ್ಲ.

ಕೊಯಮತ್ತೂರಿನಲ್ಲಿ ಶಾರಿಕ್‌ ನೆಲೆಸಿದ್ದ ಒಂದೂವರೆ ತಿಂಗಳ ನಂತರ ಕೊಯಮತ್ತೂರು ಸೋಮನಾಥೇಶ್ವರ ದೇವಸ್ಥಾನದ ಬಳಿ ಕಾರಿನಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಜಮೀಶಾ ಮುಬಿನ್‌ (29) ಎಂಬಾತ ಮೃತಪಟ್ಟಿದ್ದ. ಆತನೇ ಆ ಸ್ಫೋಟದ ಸೂತ್ರಧಾರಿ ಎಂಬುದು ಬಳಿಕ ಗೊತ್ತಾಗಿತ್ತು. ಆತ ವಾಸವಿದ್ದ ಮನೆಯಲ್ಲೇ ಬಾಂಬ್‌ ತಯಾರಿಗೆ ಬಳಸುವ ರಾಸಾಯನಿಕಗಳು ಪತ್ತೆಯಾಗಿದ್ದವು. ಸ್ಫೋಟ ಸಂಬಂಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣ ಸಂಬಂಧ ಆರು ಮಂದಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಕೊಯಮತ್ತೂರಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರ (ಈಶ ಫೌಂಡೇಷನ್‌)ವೊಂದನ್ನು ಗುರಿಯಾಗಿಸಿ ಬಾಂಬ್‌ ಸ್ಫೋಟ ನಡೆಸುವ ಸಂಚು ನಡೆದಿದ್ದನ್ನು ಖಚಿತಪಡಿಸಿತ್ತು.

ಕೊಯಮತ್ತೂರು ಬಾಂಬ್‌ ಸ್ಫೋಟದ ಆರೋಪಿಗಳಿಗೂ ಶಾರಿಕ್‌ಗೂ ನಂಟು ಇರುವ ಬಗ್ಗೆ ಪೊಲೀಸರಿಗೆ ಬಲವಾದ ಸಂಶಯ ಇದೆ. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಶಾರಿಕ್‌ ಗಾಯಗೊಂಡ ಮಾಹಿತಿ ಸಿಗುತ್ತಿದ್ದಂತೆಯೇ ಕೊಯಮತ್ತೂರು ಪೊಲೀಸರ ತಂಡವೂ ಮಂಗಳೂರಿಗೆ ಧಾವಿಸಿದೆ. ಶಾರಿಕ್‌ ಮೈಸೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಪತ್ತೆಯಾದ ಸಾಮಗ್ರಿಗಳು, ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ಸ್ಥಳದಲ್ಲಿ ಸಿಕ್ಕ ಪುರಾವೆಗಳನ್ನು ಹಾಗೂ ಕೊಯಮತ್ತೂರಿನಲ್ಲಿ ಘಟನೆಯ ಸ್ಥಳದಲ್ಲಿ ಸಿಕ್ಕ ವಸ್ತುಗಳ ನಡುವೆ ಹೋಲಿಕೆಗಳಿವೆಯೇ ಎಂದೂ ಪರಿಶೀಲಿಸುತ್ತಿದ್ದಾರೆ.

‘ಆರೋಪಿ ಭಾಗಿಯಾಗಿರಬಹುದಾದ ಎಲ್ಲ ಕೃತ್ಯಗಳ ಸಮಗ್ರ ತನಿಖೆಯನ್ನು ನಡೆಸುತ್ತಿದ್ದೇವೆ.
ಕೊಯಮತ್ತೂರಿನ ಸ್ಫೋಟ ಪ್ರಕರಣದ ಆಯಾಮದಲ್ಲೂ ತನಿಖೆ ನಡೆಯಲಿದೆ. ಮಂಗಳೂರಿನ ಘಟನೆ ನಡೆಯುವುದಕ್ಕೆ ಮುನ್ನ ಆರೋಪಿ ಯಾವೆಲ್ಲ ಪ್ರದೇಶಗಳಿಗೆ ಭೇಟಿ ನೀಡಿದ್ದ, ಯಾರನ್ನೆಲ್ಲ ಭೇಟಿ ಮಾಡಿದ್ದ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

‘ರಿಕ್ಷಾ ಚಾಲಕನ ಆರೋಗ್ಯ ಸುಧಾರಣೆ’

ಕುಕ್ಕರ್‌ ಬಾಂಬ್‌ ಸ್ಫೋಟದಿಂದ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯನ್ನು ಹಾಗೂ ರಿಕ್ಷಾ ಚಾಲಕನನ್ನು ನಗರ ಪೊಲೀಸ್‌ ಆಯುಕ್ತರು ಮಂಗಳವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

’ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ಚೇತರಿಸಿಕೊಂಡಿದೆ’ ಎಂದು ಶಶಿಕುಮಾರ್‌ ತಿಳಿಸಿದರು

ಎರಡೂ ಕೈಗಳು, ಬೆನ್ನು, ಮುಖ ಸೇರಿದಂತೆ ಪುರುಷೋತ್ತಮ ಅವರ ದೇಹದಲ್ಲಿ ಶೇ 25 ರಷ್ಟು ಸುಟ್ಟ
ಗಾಯಗಳಾಗಿದ್ದವು.

ಚೇತರಿಸಿಕೊಳ್ಳದ ಆರೋಪಿ;ತನಿಖೆಗೆ ತೊಡಕು

ಆರೋಪಿ ಶಾರಿಕ್‌ ಚೇತರಿಸಿಕೊಳ್ಳದಿರುವುದರಿಂದ ‌‌‌‌‌‌‌‌ಪೊಲೀಸರು ಪ್ರಕರಣದ ತನಿಖೆಗೆ ಆತನಿಂದ ಪೂರಕ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಗರದ ನಾಗುರಿಯಲ್ಲಿ ಬಸ್‌ನಿಂದ ಇಳಿದು ರಿಕ್ಷಾ ಹತ್ತಿದ ಬಳಿಕ ಆತ ಪಂಪ್‌ವೆಲ್‌ಗೆ ಹೋಗುವಂತೆ ಸೂಚಿಸಿದ್ದ. ಅದು ಬಿಟ್ಟರೆ ಚಾಲಕನ ಬಳಿ ಬೇರೇನೋ ಹೇಳಿರಲಿಲ್ಲ. ಆತ ಎಲ್ಲಿ ಬಾಂಬ್‌ ಇಡುವ ಉದ್ದೇಶ ಹೊಂದಿದ್ದ. ಆತ ಯಾವ ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿದ್ದ ಎಂಬುದು ನಿಗೂಢವಾಗಿಯೇ ಉಳಿದಿದೆ.

ಸ್ಫೋಟದಿಂದ ಶಾರಿಕ್‌ನ ಎರಡೂ ಕೈಗಳು, ಎರಡೂ ಕಾಲುಗಳು, ಬೆರಳುಗಳು, ಮುಖ ಹಾಗೂ ಬೆನ್ನು ಸೇರಿದಂತೆ ದೇಹದಲ್ಲಿ ಶೇ 45ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

‘ಆರೋಪಿಯು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಘಟನೆ ನಡೆದ ದಿನದಿಂದ ಆತನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಲ್ಲ. ವಿಚಾರಣೆ ನಡೆಸುವಷ್ಟರ ಮಟ್ಟಿಗೆ ಆತನ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ದೃಢಪಡಿಸುವವರೆಗೂ ಆತನನ್ನು ವಿಚಾರಣೆ ನಡೆಸಲುಸಾಧ್ಯವಾಗುತ್ತಿಲ್ಲ’ ಎಂದು ಶಶಿಕುಮಾರ್‌ ಹೇಳಿದರು.

‘ಆರೋಪಿ ನಿಜಕ್ಕೂ ಉತ್ತರಿಸುವ ಸ್ಥಿತಿಯಲ್ಲಿಲ್ಲವೇ ಅಥವಾ ಬೇಕೆಂದೇ ವಿಚಾರಣೆಗೆ ಸ್ಪಂದಿಸುತ್ತಿಲ್ಲವೇ
ಎಂದು ತಿಳಿಯುತ್ತಿಲ್ಲ. ಆದರೂ ಸದ್ಯಕ್ಕಂತೂ ಆತನನ್ನು ಬಲವಂತಪಡಿಸುವಂತಿಲ್ಲ. ಆತವಿಚಾರಣೆಗೆ ಸ್ಪಂದಿಸುವಂತಾ‌ದರೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆತ ಆದಷ್ಟು ಬೇಗ ಚೇತರಿಸಿ
ಕೊಳ್ಳುವಂತೆ ಮಾಡಲು ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT