ಕಣ್ಣು ತೆರೆದಾಗ ನಾನು ನೀರಿನಲ್ಲಿದ್ದೆ: ದೋಣಿ ಅಪಘಾತದ ದೃಶ್ಯ ಬಿಚ್ಚಿಟ್ಟ ವೇಲು

ಮಂಗಳೂರು: ‘ರಾತ್ರಿ 2 ಗಂಟೆಯ ಸಮಯ ಇರಬಹುದು. ನಾನು ನಿದ್ರಿಸುತ್ತಿದ್ದೆ. ಜೋರಾದ ಶಬ್ದ ಕೇಳಿಸಿತು. ಕಣ್ಣು ತೆರೆದು ನೋಡಿದಾಗ ನಾನು ನೀರಿನಲ್ಲಿದ್ದೆ.’
ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲಿ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ ದೋಣಿ ಅಪಘಾತದಲ್ಲಿ ಬದುಕಿ ಉಳಿದ ತಮಿಳುನಾಡಿನ ವೇಲು ಮುರುಗನ್, ರಾತ್ರಿ ನಡೆದ ಅಪಘಾತದ ಸನ್ನಿವೇಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಇಲ್ಲಿನ ಕರಾವಳಿ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವೇಲುಮುರುಗನ್ (37) ಹಾಗೂ ಪಶ್ಚಿಮಬಂಗಾಳದ ಕಾಕ್‌ದ್ವೀಪ್ ಜಿಲ್ಲೆಯ ಸುನಿಲ್ ದಾಸ್, ಕರಾಳ ರಾತ್ರಿಯಲ್ಲಿ ಸಮುದ್ರದ ಉಬ್ಬರದ ಮಧ್ಯೆ ಸಂಭವಿಸಿದ ಅಪಘಾತದ ದೃಶ್ಯಗಳನ್ನು ನೆನೆದು, ಒಂದು ಕ್ಷಣ ಆತಂಕಕ್ಕೆ ಒಳಗಾದರು.
‘ನಾನು, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಇತರ 13 ಜನರೊಂದಿಗೆ ಏ. 11ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೂರ್‌ನಿಂದ ಮೀನುಗಾರಿಕೆಗೆ ತೆರಳಿದ್ದೆವು. ಈ ವೇಳೆ ನಮಗೆ ಅಧಿಕ ಮೀನುಗಳು ದೊರಕದ್ದರಿಂದ, ನಾವು ಆಳ ಸಮುದ್ರ ಮೀನುಗಾರಿಕೆ ನಡೆಸಲು ನಿರ್ಧರಿಸಿದೆವು. 70 ನಾಟಿಕಲ್ ಮೈಲುಗಳಷ್ಟು ದೂರ ಸಾಗಿದೆವು. ಮುಂದೆ ಚಲಿಸುತ್ತಿದ್ದಂತೆ ಹವಾಮಾನ ಸ್ಥಿತಿಯೂ ಕೆಟ್ಟಿತ್ತು. ಮತ್ತಷ್ಟು ಮುಂದೆ ಸಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಯಿತು’ ಎಂದು ವೇಲುಮುರುಗನ್ ತಿಳಿಸಿದರು.
‘ಬಳಿಕ ನಮ್ಮ ಬೋಟ್‌ನ ನಾಯಕ ಊಟ ಮಾಡುವಂತೆ ಹೇಳಿದರು. ಊಟ ಮಾಡಿ, ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಈ ವೇಳೆ ಬೋಟ್‌ನ ಎಲ್ಲ ಲೈಟ್‌ಗಳನ್ನು ಆನ್ ಮಾಡಲಾಗಿತ್ತು. ಊಟದ ಬಳಿಕ ನಾವೆಲ್ಲರೂ ವಿಶ್ರಾಂತಿ ಪಡೆದೆವು. ಸ್ವಲ್ಪ ಸಮಯದ ಬಳಿಕ ಭಾರೀ ಮಳೆ ಸುರಿಯಲು ಪ್ರಾರಂಭವಾಯಿತು. ನಾನು ನಾಯಕನ ಕೋಣೆಗೆ ಮಲಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಉಬ್ಬರ ಇಳಿತ ಹೆಚ್ಚಾಗಿತ್ತು. ಹವಾಮಾನ ಕೆಟ್ಟಿದ್ದರಿಂದ ನಮ್ಮ ಮುಂದಿನ ದಾರಿಯೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ’ ಎಂದರು.
‘ನನಗೆ ದಣಿವಾಗಿದ್ದರಿಂದ ನಿದ್ರೆಗೆ ಜಾರಿದ್ದೆ. ಸ್ವಲ್ಪ ಸಮಯದ ಬಳಿ ದೊಡ್ಡ ಶಬ್ದ ಕೇಳಿ ನನಗೆ ಎಚ್ಚರವಾಯಿತು. ಈ ವೇಳೆ ನಾನು ಏಳಲು ಪ್ರಯತ್ನಿಸುತ್ತಿದ್ದೆ. ಜನರು ಕಿರುಚಾಡುತ್ತಿರುವುದು ಕೇಳಿಸುತ್ತಿತ್ತು. ಆದರೆ, ಈ ವೇಳೆ ನಾನು ಕೂಡಾ ನೀರಿಗೆ ಬಿದ್ದೆ. ಕೆಲವು ಸಮಯದ ಬಳಿಕ ನಾನು ಬೋಟ್ ಮೇಲ್ಭಾಗವನ್ನು ತಲುಪಿದೆ. ನಮ್ಮ ಬೋಟ್‌ಗೆ ಹಡಗು ಡಿಕ್ಕಿಯಾಗಿದ್ದು ಆಗ ನನಗೆ ತಿಳಿಯಿತು’ ಎಂದು ವಿವರಿಸಿದರು.
‘ಡಿಕ್ಕಿ ಹೊಡೆದ ಹಡಗಿನ ಸಿಬ್ಬಂದಿ ನಮ್ಮನ್ನು ಪತ್ತೆಹಚ್ಚಿ ಹಡಗಿಗೆ ಬರಲು ಸಹಾಯ ಮಾಡಿದರು. ಪ್ರಥಮ ಚಿಕಿತ್ಸೆ ನೀಡಿದರು. ಆ ಸಂದರ್ಭ ನನಗೆ ಮಾತನಾಡಲು ಕೂಡಾ ಆಗಲಿಲ್ಲ. ಮುಳುಗಿದ ಬೋಟ್‌ನಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ನಾನು ಅವರಿಗೆ ತಿಳಿಸಿದೆ. ಆದರೆ, ನನಗೆ ಅವರನ್ನು ಹುಡುಕಲು ಆಗಲಿಲ್ಲ’ ಎಂದು ವೇಲು ಮುರುಗನ್ ಭಾವುಕರಾದರು.
ಮಂಗಳೂರು: ಮೀನುಗಾರಿಕಾ ದೋಣಿ ದುರಂತದಲ್ಲಿ ಮೂವರ ಸಾವು, 9 ಮಂದಿ ನಾಪತ್ತೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.