ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಮಂಗಳೂರಿನಲ್ಲೇ ಪ್ರಯೋಗಾಲಯ ಸ್ಥಾಪನೆಗೆ ಆಗ್ರಹ

ಕೊರೊನಾ ಸೋಂಕು ಪರೀಕ್ಷೆಗೆ ಸೌಲಭ್ಯಗಳ ಕೊರತೆ
Last Updated 14 ಮಾರ್ಚ್ 2020, 14:26 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್‌ ಸೋಂಕು ತಗುಲಿರುವುದನ್ನು ಖಚಿತಪಡಿಸಬಲ್ಲ ಅತ್ಯಾಧುನಿಕ ಪ್ರಯೋಗಾಲಯವನ್ನು ಮಂಗಳೂರಿನಲ್ಲೇ ತುರ್ತಾಗಿ ಸ್ಥಾಪಿಸಬೇಕೆಂಬ ಬೇಡಿಕೆ ಕೊರೊನಾ ನಿಯಂತ್ರಣ ಕುರಿತು ಸಂಸದರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರಿಂದ ಕೇಳಿಬಂತು.

ಶಂಕಿತ ಪ್ರಕರಣಗಳಲ್ಲಿ ರೋಗಿಗಳ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಈವರೆಗೂ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. ಈಗ ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಯೋಗಾಲಯ ಸದ್ಯಕ್ಕೆ ಲಭ್ಯವಿಲ್ಲ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್‌ ಸಭೆಗೆ ತಿಳಿಸಿದರು.

ಬಳಿಕ ಪ್ರಯೋಗಾಲಯ ಆರಂಭಿಸುವಂತೆ ಆಗ್ರಹಿಸಿದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು, ‘ಹೊರ ಜಿಲ್ಲೆಗಳಿಗೆ ಮಾದರಿಗಳನ್ನು ಸಂಗ್ರಹಿಸಿ, ವರದಿ ಪಡೆಯುವಾಗ ವಿಳಂಬವಾಗುತ್ತದೆ. ಜಿಲ್ಲೆಯಲ್ಲೇ ಪ್ರಯೋಗಾಲಯ ಇದ್ದರೆ ತುರ್ತಾಗಿ ಪರೀಕ್ಷೆಯ ಫಲಿತಾಂಶ ಲಭಿಸುತ್ತದೆ. ತಕ್ಷಣವೇ ಮಂಗಳೂರಿನಲ್ಲಿ ಪ್ರಯೋಗಾಲಯ ಆರಂಭಿಸಬೇಕು’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಪ್ರಯೋಗಾಲಯ ಸ್ಥಾಪನೆಯ ಬೇಡಿಕೆ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಆದಷ್ಟು ಬೇಗ ಪ್ರಯೋಗಾಲಯ ಆರಂಭಕ್ಕೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

27 ಜನರ ಪರೀಕ್ಷೆ

ಜಿಲ್ಲೆಯಲ್ಲಿ ಈವರೆಗೆ 27 ಮಂದಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. 17 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇಲ್ಲ ಎಂಬ ವರದಿ ಬಂದಿದೆ. 10 ಮಂದಿಗೆ ಸಂಬಂಧಿಸಿದಂತೆ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ವಿಮಾನ ನಿಲ್ದಾಣ ಮತ್ತು ಬಂದರುಗಳ ಮೂಲಕ ಬರುತ್ತಿರುವ ವಿದೇಶಿ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಮಾರ್ಚ್‌ 4ರಿಂದಲೇ ಇಂತಹ ವ್ಯಕ್ತಿಗಳಿಂದ ಸ್ವಯಂಘೋಷಣೆ ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವ ಯಾವುದೇ ಪ್ರಕರಣವೂ ಖಚಿತವಾಗಿಲ್ಲ ಎಂದರು.

‘ಇರಾನ್‌ ಮತ್ತು ಆಸ್ಟ್ರೇಲಿಯಾದಿಂದ ಬಂದಿದ್ದ ವ್ಯಕ್ತಿಗಳನ್ನು ಜ್ವರದ ಲಕ್ಷಣಗಳಿದ್ದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದೇಶಗಳಿಂದ ಬರುವವರಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬರದಿದ್ದರೂ, 14 ದಿನಗಳ ಕಾಲ ಅವರ ಮನೆಗಳಲ್ಲೇ ನಿಗಾದಲ್ಲಿ ಇರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದರು.

ಆಸ್ಪತ್ರೆಗಳು ಸಜ್ಜು

‘ಕೊರೊನಾ ವೈರಸ್‌ ತಗುಲಿರುವ ಶಂಕಿತ ಪ್ರಕರಣಗಳಲ್ಲಿ ನಿಗಾ ವಹಿಸಲು ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ಪ್ರತ್ಯೇಕ (ಐಸೋಲೇಷನ್‌) ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳ ಐಸೋಲೇಷನ್‌ ವಾರ್ಡ್‌ ಮೀಸಲಿಡಲಾಗಿದೆ. ಸೋಂಕು ದೃಢಪಟ್ಟ ವ್ಯಕ್ತಿಗಳ ಚಿಕಿತ್ಸೆಗಾಗಿ ಪುರುಷರು ಮತ್ತು ಮಹಿಳೆಯರಿಗೆ ತಲಾ ಮೂರು ಹಾಸಿಗೆಗಳ ವಿಶೇಷ ಕೊರೊನಾ ವಾರ್ಡ್‌ ಸಿದ್ಧಪಡಿಸಲಾಗಿದೆ. ಮೂರು ಹಾಸಿಗೆಗಳ ತೀವ್ರ ನಿಗಾ ಘಟಕವನ್ನೂ ಸಜ್ಜುಗೊಳಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿವರ ನೀಡಿದರು.

ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 80 ಹಾಸಿಗೆಗಳ ಐಸೋಲೇಷನ್‌ ವಾರ್ಡ್‌ ನಿರ್ಮಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪ್ರತ್ಯೇಕ ವಾರ್ಡ್‌ ನಿರ್ಮಿಸಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲೂ ಐಸೋಲೇಷನ್‌ ವಾರ್ಡ್‌ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದರು.

ತಪಾಸಣೆ ಹೆಚ್ಚಿಸಲು ಸೂಚನೆ

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಜನರ ತಪಾಸಣೆ ಹೆಚ್ಚಿಸುವಂತೆ ಸಂಸದರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ರಾಜೇಶ್‌ ನಾಯ್ಕ್‌ ಯು., ಡಿ.ವೇದವ್ಯಾಸ ಕಾಮತ್‌, ಡಾ.ವೈ.ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜ, ಬಿ.ಎಂ.ಫಾರೂಕ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್‌.ಸೆಲ್ವಮಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌, ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ ಚಂದ್ರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT