ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಪೆ: ಮತ್ಸ್ಯ ಬೇಟೆಗೆ ಸಜ್ಜಾದ ಕಡಲ ಮಕ್ಕಳು

ಕಡಲ ಕಿನಾರೆಯಲ್ಲಿ ಮೊಗವೀರ ಸಮಾಜದ ಸಂಘಟನೆಗಳಿಂದ ಸಮುದ್ರಪೂಜೆ
Last Updated 11 ಆಗಸ್ಟ್ 2022, 16:12 IST
ಅಕ್ಷರ ಗಾತ್ರ

ಬಜಪೆ: ಪಶ್ಚಿಮ ಕರಾವಳಿಯ ಪ್ರಮುಖ ಉದ್ಯೋಗವಾಗಿರುವ ಮೀನುಗಾರಿಕಾ ಋತು ಮತ್ತೆ ಆರಂಭವಾಗಿದೆ. ಎರಡು ತಿಂಗಳ ನಿಷೇಧದ ನಂತರ ಹೊಸ ಹುರುಪಿನೊಂದಿಗೆ ಕಡಲಿನ ಮಕ್ಕಳು ಮತ್ಸ್ಯಬೇಟೆಗಾಗಿ ಸಮುದ್ರಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮೀನುಗಾರಿಕೆಯ ಹೊಸ ಋತುವಿನಲ್ಲಿ ಒಳ್ಳೆಯ ಆದಾಯ ಸಿಗಲಿ, ಮೀನುಗಾರರಿಗೆ ಯಾವುದೇ ಆಪತ್ತು ಬರದೇ ಇರಲಿ ಎಂದು ಪ್ರಾರ್ಥಿಸಿ, ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿದ್ದಾರೆ.

ಮತ್ಸ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿ ವರ್ಷ ಜೂನ್‌ 1ರಿಂದ ಜುಲೈ 31ರವರೆಗೆ ಆಳ ಸಮುದ್ರದ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಆಗಸ್ಟ್‌ 1ರಿಂದ ಮೀನುಗಾರಿಕೆಯು ಅಧಿಕೃತವಾಗಿ ಆರಂಭವಾದರೂ, ಮೀನುಗಾರರು ಮಾತ್ರ ನೂಲು ಹುಣ್ಣಿಮೆಯ ನಂತರವೇ ಸಮುದ್ರಕ್ಕೆ ಇಳಿಯುತ್ತಾರೆ. ಮೊಗವೀರರ ಸಮುದಾಯಗಳಲ್ಲಿ ಸಮುದ್ರ ಪೂಜೆಗೆ ಮೊದಲ ಸ್ಥಾನ. ಪ್ರತಿ ವರ್ಷ ಕಡಲಿಗೆ ನಮಿಸುವುದು ತಲತಲಾಂತರಗಳಿಂದ ಬಂದ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಮೀನುಗಾರಿಕಾ ರಜೆ ಮುಗಿದ ಬಳಿಕ ಪ್ರಕ್ಷುಬ್ಧಗೊಂಡಿರುವ ಸಮುದ್ರ ರಾಜನನ್ನು ಶಾಂತಗೊಳಿಸಲು ಸಮುದ್ರ ಪೂಜೆ ಮಾಡಲಾಗುತ್ತದೆ. ನೂಲಹುಣ್ಣಿಮೆಯ ದಿನವಾದ ಗುರುವಾರ ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಸಾಮೂಹಿಕ ಸಮುದ್ರಪೂಜೆ ನಡೆಯಿತು.

ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನದಿಂದ ಹಾಲು, ಸೀಯಾಳ, ಫಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ, ಬೋಳೂರು ಅಶ್ವತ್ಥಕಟ್ಟೆ, ನಾಗಬ್ರಹ್ಮ ಸ್ಥಾನ, ಬೋಳೂರು ಗ್ರಾಮ ಚಾವಡಿಯಿಂದಾಗಿ ಗುರುಪುರ ನದಿ ದಾಟಿ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸೇರಿತು. ಭಜನೆಯೊಂದಿಗೆ ಗಂಗಾಮಾತೆಗೆ ಸಮರ್ಪಣೆ ಮಾಡಲಾಯಿತು. ಕದ್ರಿ ಸುವರ್ಣ ಕದಳಿ ಮಠದ ರಾಜಯೋಗಿ ನಿರ್ಮಲನಾಥಜಿ ಮಹಾರಾಜ್‌ ಅವರ ಮಾರ್ಗದರ್ಶನದಲ್ಲಿ ಸುಭಾಸ್ ಚಂದ್ರ ಕಾಂಚನ್ ಬೋಳಾರ ಅಧ್ಯಕ್ಷತೆಯಲ್ಲಿ ಪ್ರಾರ್ಥಿಸಲಾಯಿತು.

ಏಳು ಪಟ್ಣ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ಗೌತಮ್ ಸಾಲಿಯಾನ್ ಕೋಡಿಕಲ್, ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ನಾರಾಯಣ ಕೋಟ್ಯಾನ್, ಗ್ರಾಮದ ಗುರಿಕಾರರು, ಗ್ರಾಮದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಳ್ಳಾಲ, ಬೈಕಂಪಾಡಿ, ಹೊಸಬೆಟ್ಟು, ಗುಡ್ಡೆಕೊಪ್ಪ, ಸಸಿಹಿತ್ಲುವಿನಲ್ಲಿಯೂ ಮೊಗವೀರ ಸಮಾಜದ ಸಂಘಟನೆಗಳಿಂದ ಸಮುದ್ರರಾಜನಿಗೆ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT