ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಲಂಚ, ಭ್ರಷ್ಟಾಚಾರ ಮುಕ್ತವಾದರೆ ಮಾತ್ರ ಜನರಿಗೆ ನೈಜ ಸ್ವಾತಂತ್ರ್ಯ’

Last Updated 11 ಆಗಸ್ಟ್ 2022, 16:20 IST
ಅಕ್ಷರ ಗಾತ್ರ

ಮಂಗಳೂರು: ‘ಸಮಾಜವು ಲಂಚ, ಭ್ರಷ್ಟಾಚಾರ ಮುಕ್ತವಾದರೆ ಮಾತ್ರ ಜನರಿಗೆ ನೈಜ ಸ್ವಾತಂತ್ರ್ಯ ಲಭಿಸುತ್ತದೆ. ‌ಪ್ರತಿ ಊರಿನಲ್ಲಿ ಲಂಚರಹಿತವಾಗಿ ಸೇವೆ ನೀಡುವ ಅಧಿಕಾರಿಗಳನ್ನು ಜನರೇ ಗುರುತಿಸಿ ಸನ್ಮಾನಿಸಬೇಕು. ಆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿ ರೂಪಿಸಬೇಕು’ ಎಂದು ಸುದ್ದಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ.ಯು.ಪಿ. ಶಿವಾನಂದ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಂಚಮುಕ್ತ ಸಮಾಜ ನಿರ್ಮಾಣ ಜನಾಂದೋಲನದ ಭಾಗವಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕಿನಲ್ಲಿ ಲಂಚರಹಿತ ಉತ್ತಮ ಸೇವೆ ನೀಡುವ ಅಧಿಕಾರಿಗಳನ್ನು ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ಜನರೇ ಗುರುತಿಸಿದ್ದಾರೆ. ಈ ಅಧಿಕಾರಿಗಳನ್ನು ಮುಂದಕ್ಕೆ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿ ಜನರಿಂದಲೇ ಸನ್ಮಾನಿಸುವ ಚಿಂತನೆಯಿದೆ’ ಎಂದು ತಿಳಿಸಿದರು.

‘ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ’ ಎಂದು ಪರಿಗಣಿಸಿ ಲಂಚ, ಭ್ರಷ್ಟಾಚಾರವನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡಲಾಗಿದೆ. ಈ ಅಭಿಯಾನಕ್ಕೆ ಸಾರ್ವಜನಿಕರು ಮಾತ್ರವಲ್ಲದೆ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮಗಳ ಸಹಕಾರ ಅತಿ ಅಗತ್ಯ. ಎಲ್ಲರೂ ಕೈಜೋಡಿಸಿದರೆ ವ್ಯವಸ್ಥೆಯನ್ನು ಶುಚಿಗೊಳಿಸುವ ಕೆಲಸ ಕಷ್ಟವಲ್ಲ’ ಎಂದು ಹೇಳಿದರು.

‘ಲಂಚ ಪಡೆಯುವುದು ಕೂಡಾ ದರೋಡೆ ಎಂಬ ಭಾವನೆ ಅಧಿಕಾರಿಗಳಲ್ಲಿ ಮೂಡಬೇಕು. ಈ ಬಗ್ಗೆ ಒಂದು ವರ್ಷದಿಂದ ನಿರಂತರವಾಗಿ ಸುದ್ದಿ ಮಾಹಿತಿ ಟ್ರಸ್ಟ್‌ ಮತ್ತು ಸುದ್ದಿ ಜನಾಂದೋಲನ ವೇದಿಕೆ ಜಾಗೃತಿ ಮೂಡಿಸುತ್ತಿದೆ. ಲಂಚ ಪಡೆಯದೆ ಸೇವೆ ನೀಡುವ ಅಧಿಕಾರಿಗಳನ್ನು ಗುರುತಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಅದನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಜನರ ಮೂಲಕವೇ ನಡೆಸಲು ಪ್ರಯತ್ನಿಸಲಾಗುತ್ತದೆ’ ಎಂದರು.

ಪತ್ರಕರ್ತ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT