ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ: 12 ಮಂದಿ ಬಂಧನ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ
Last Updated 28 ಡಿಸೆಂಬರ್ 2019, 10:22 IST
ಅಕ್ಷರ ಗಾತ್ರ

ಮಂಗಳೂರು: ಡಿಸೆಂಬರ್‌ 19ರಂದು ನಗರದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗಲಭೆ ನಡೆಸಿದ ಆರೋಪದ ಮೇಲೆ ಪೊಲೀಸರು ಈವರೆಗೆ 12 ಮಂದಿಯನ್ನು ಬಂಧಿಸಿದ್ದಾರೆ.

‘ಗಲಭೆಗೆ ಸಂಬಂಧಿಸಿದಂತೆ ಒಟ್ಟು 24 ಪ್ರಕರಣ ದಾಖಲಿಸಲಾಗಿದೆ. ವಿಡಿಯೊ ತುಣುಕುಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋಟೊಗಳ ಆಧಾರದಲ್ಲಿ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ಆರಂಭದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಗುರುವಾರ ನಾಲ್ವರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 12ಕ್ಕೇರಿದೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್.ಹರ್ಷ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂಸಾಚಾರದಲ್ಲಿ ನೇರವಾಗಿ ಭಾಗಿ
ಯಾಗಿದ್ದ ಫಯಾಜ್‌, ಭಾಷಾ ಕಲಂದರ್‌, ನಸಿರುದ್ದೀನ್‌ ಮತ್ತು ಮೊಹಮ್ಮದ್ ಫಾರೂಕ್‌ ಎಂಬುವವರನ್ನು ಗುರುವಾರ ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ಸಾರ್ವಜನಿಕರು ವಿಡಿಯೊ ತುಣುಕು ಮತ್ತು ಸಿಸಿಟಿವಿ ದೃಶ್ಯಾವಗಳಿಗಳನ್ನು ಒದಗಿಸುತ್ತಲೇ ಇದ್ದಾರೆ. ಈ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಸಾಕ್ಷ್ಯ ಸಾರ್ವಜನಿಕರಿಂದಲೇ ಲಭ್ಯವಾಗಿದೆ. ಅಧಿಕಾರಿಗಳು ಹಲವು ತಂಡಗಳಲ್ಲಿ ಈ ಸಾಕ್ಷ್ಯಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಕಲ್ಲು ತೂರಾಟ, ಹಿಂಸಾಚಾರದಲ್ಲಿ ಭಾಗಿಯಾದ 100ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಸಂಚುಕೋರರ ಸುಳಿವು: ಡಿ.19ರಂದು ಪ್ರತಿಭಟನೆ ಇರುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ರವಾನಿಸಿ, ಯುವಕರನ್ನು ಗಲಭೆಗೆ ಪ್ರಚೋದಿಸಿದ ಸಂಚುಕೋರರ ಕುರಿತು ಖಚಿತ ಸುಳಿವು ಲಭ್ಯವಾಗಿದೆ. ಆರೋಪಿಗಳ ನಡುವಿನ ಸಂವಹನಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನೂ ತನಿಖಾ ತಂಡ ಕಲೆಹಾಕಿದೆ. ಬಂಧನಕ್ಕೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಸಿಐಡಿಯಿಂದ ಮಾಹಿತಿ ಸಂಗ್ರಹ: ಗಲಭೆ ಮತ್ತು ಗೋಲಿಬಾರ್ ಕುರಿತು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದರು. ಇನ್ನೂ ಅಧಿಕೃತವಾಗಿ ಆದೇಶ ಹೊರಬಿದ್ದಿಲ್ಲ. ಪೂರ್ವಭಾವಿಯಾಗಿ ನಗರಕ್ಕೆ ಬಂದಿರುವ ಸಿಐಡಿ ಎಸ್‌ಪಿ ರಾಹುಲ್‌ ಕುಮಾರ್‌ ಶಹಾಪುರವಾಡ್‌ ನೇತೃತ್ವದ ಸಿಐಡಿ ಪೊಲೀಸರ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದೆ.

ಗುರುವಾರವೇ ಸಿಐಡಿ ಅಧಿಕಾರಿಗಳ ಒಂದು ತಂಡ ನಗರಕ್ಕೆ ತಲುಪಿದೆ. ಗಲಭೆ ಹಾಗೂ ಗೋಲಿಬಾರ್‌ ನಡೆದ ಸ್ಥಳಗಳಿಗೂ ಭೇಟಿ ನೀಡಿದೆ. ಅಧಿಕೃತ ಆದೇಶ ಹೊರಬಿದ್ದ ಬಳಿಕವೇ ನ್ಯಾಯಾಲಯದ ಮೂಲಕ ಪ್ರಕರಣದ ತನಿಖೆ ವಹಿಸಿಕೊಳ್ಳಲು ಈ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇಂದಿನಿಂದ ಮ್ಯಾಜಿಸ್ಟ್ರೇಟ್ ವಿಚಾರಣೆ:

ಗಲಭೆ ಮತ್ತು ಗೋಲಿಬಾರ್‌ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಆದೇಶಿಸಲಾಗಿದೆ. ಜಗದೀಶ್‌ ಅವರು ಶನಿವಾರದಿಂದ ವಿಚಾರಣೆ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT