ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಶೇ 75ರಷ್ಟು ಮತದಾನ

ಕೋಟೆಕೊಪ್ಪ ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ
Last Updated 13 ಮೇ 2018, 7:34 IST
ಅಕ್ಷರ ಗಾತ್ರ

ಸಾಗರ: ಕೆಲವು ಮತದಾನ ಕೇಂದ್ರಗಳಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಮತದಾನ ಸಕಾಲದಲ್ಲಿ ಆರಂಭವಾಗದೆ ಇದ್ದರೂ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.

ಕ್ಷೇತ್ರದಲ್ಲಿ ಒಟ್ಟು ಶೇ 75ರಷ್ಟು ಮತದಾನವಾಗಿದೆ.

ತ್ಯಾಗರ್ತಿ ಸಮೀಪದ ಕೋಟೆಕೊಪ್ಪ ಗ್ರಾಮದ ಮತಗಟ್ಟೆಯಲ್ಲಿ ಮಧ್ಯಾಹ್ನ 1ರವರೆಗೂ ಮತದಾನ ಸರಾಗವಾಗಿ ನಡೆದಿತ್ತು. ಆದರೆ, ನಂತರ ಮತದಾರರು ಮತ ಚಲಾಯಿಸಲು ಹೋದಾಗ ಬಿಜೆಪಿ ಪಕ್ಷದ ಚಿಹ್ನೆಗೆ ಬಟನ್ ಒತ್ತಿದರೂ ಅದು ಚಲಾವಣೆಯಾಗಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮತದಾರರು ಮತಗಟ್ಟೆಯ ಅಧಿಕಾರಿಗೆ ದೂರಿದರೂ ಕೆಲಕಾಲ ಅವರು ಯಾವುದೇ ಕ್ರಮ ಕೈಗೊಳ್ಳದೇ ಮತದಾನ ಮುಂದುವರಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಕೂಡ ಮತಗಟ್ಟೆಗೆ ಬಂದು ಪಕ್ಷದ ಬೂತ್ ಏಜೆಂಟರ ಮೂಲಕ ತಕರಾರು ದಾಖಲಿಸಿದರು. ಈ ಹಂತದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮತದಾರರೊಬ್ಬರು ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಬಲವಾಗಿ ತಮ್ಮ ಬೆರಳನ್ನು ಒತ್ತಿದ ಕಾರಣ ಅದು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತ್ತು ಎಂದು ಮತಗಟ್ಟೆಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು. ಆದರೆ ಇದಕ್ಕೆ ತೃಪ್ತರಾಗದ ಬಿಜೆಪಿ ಕಾರ್ಯಕರ್ತರು ಒಂದು ಪಕ್ಷದ ಚಿಹ್ನೆಗೆ ಮತ ಚಲಾಯಿಸಿದಾಗ ಅದು ಚಲಾವಣೆ ಆಗುತ್ತಿಲ್ಲ ಎಂದು ಗೊತ್ತಾದ ತಕ್ಷಣ ಮತದಾನವನ್ನು ನಿಲ್ಲಿಸಬೇಕಿತ್ತು ಎಂದು ತಕರಾರು ತೆಗೆದರು.

ಚುನಾವಣಾಧಿಕಾರಿಗಳು ದೋಷ ಪೂರಿತ ಮತ ಯಂತ್ರದ ಬದಲು ಹೊಸ ಯಂತ್ರವನ್ನು ತರಿಸಿ ಮತದಾನವನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮಂಜುನಾಥ ಕವರಿ, ತಹಶೀಲ್ದಾರ್ ಪ್ರಭುಸ್ವಾಮಿ ವಿ.ಎಂ. ಸ್ಥಳಕ್ಕೆ ಬಂದು ವಾತಾವರಣವನ್ನು ತಿಳಿಗೊಳಿಸಿದರು.

ನಗರ ವ್ಯಾಪ್ತಿಯ ಎ.ಕೆ. ಕಾಲೊನಿ ಯಲ್ಲಿನ ಪಿಂಕ್ (ಸಖಿ) ಮತಗಟ್ಟೆಯನ್ನು ಸಿಂಗರಿಸಲಾಗಿತ್ತು. ಇದರಲ್ಲಿ ಒಟ್ಟು 1,317 ಮತದಾರರಿದ್ದು, ಈ ಪೈಕಿ 674 ಮಹಿಳಾ ಮತದಾರರೇ ಇದ್ದಾರೆ. ಬೆಳಿಗ್ಗೆ 10.30ರ ವೇಳೆಗೆ 146 ಮಹಿಳೆಯರು ಮತ ಚಲಾಯಿಸಿದ್ದರು.

ತಾಲ್ಲೂಕಿನ ಈಳಿ ಹಾಗೂ ಬಂದಗದ್ದೆ ಗ್ರಾಮದ ಮತಗಟ್ಟೆಯಲ್ಲಿ ಅಂಗವಿಕಲರ ಮತಗಟ್ಟೆಯನ್ನು ಗುರುತಿಸಿದ್ದರೂ ಅಲ್ಲಿ ಗಾಲಿ ಕುರ್ಚಿ ಸೌಲಭ್ಯ ಇರಲಿಲ್ಲ. ಹಾಗಾಗಿ ಅಂಗವಿಕಲರು, ವೃದ್ಧರು ಪ್ರಯಾಸದಿಂದ ಮತ ಚಲಾಯಿಸುವಂತಾಯಿತು.

ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ ಮತಯಂತ್ರ ದೋಷದಿಂದಾಗಿ ಒಂದು ಗಂಟೆ ವಿಳಂಬವಾಗಿ ಮತದಾನ ಕಾರ್ಯ ಆರಂಭವಾಯಿತು. ಮರಾನ್ ಕುಳಿ ಮತಗಟ್ಟೆಯಲ್ಲಿ ಎರಡು ಬಾರಿ ಮತಯಂತ್ರ ಕೈಕೊಟ್ಟಿತ್ತು.

ತ್ಯಾಗರ್ತಿ ಗ್ರಾಮದ ಮತಗಟ್ಟೆಯಲ್ಲಿ ಮಧ್ಯಾಹ್ನದ ನಂತರ ಮತ ಯಂತ್ರದಲ್ಲಿ ದೋಷ ಕಾಣಿಸಿಕೊಂಡ ಕಾರಣ ಸಂಜೆ 5.30ರ ವೇಳೆಗೂ ಮತದಾನ ಕೇಂದ್ರದ ಎದುರು ಉದ್ದನೆಯ ಸಾಲು ಕಂಡುಬಂತು. ಇಲ್ಲಿನ ಮತದಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಟ್ಟಿನಕಾರು ಮತಗಟ್ಟೆಯಲ್ಲೂ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ವಿಳಂಬವಾಗಿದೆ.

ಜೆಡಿಎಸ್ ಅಭ್ಯರ್ಥಿ ಎಂ.ಬಿ.ಗಿರೀಶ್ ಗೌಡ ಪತ್ನಿಯೊಂದಿಗೆ ಯಡೇಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರು ಹರತಾಳು ಗ್ರಾಮದಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT