ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭದ ನಿರ್ಲಕ್ಷ್ಯವೇ ಇಟಲಿಗೆ ಮುಳುವಾಯಿತು

ತವರಿಗೆ ಹಿಂದಿರುಗಿರುವ ಸಂಶೋಧನಾ ವಿದ್ಯಾರ್ಥಿನಿ ಶ್ರೀಮಧು ಭಟ್‌
Last Updated 14 ಏಪ್ರಿಲ್ 2020, 8:45 IST
ಅಕ್ಷರ ಗಾತ್ರ

ಮಂಗಳೂರು: ‘ಕೊರೊನಾ ವೈರಸ್‌ ಸೋಂಕು ಇಟಲಿಗೆ ಕಾಲಿಟ್ಟಾಗ ಅಲ್ಲಿನ ಜನರು, ಸರ್ಕಾರ ಯಾರೊಬ್ಬರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆರಂಭಿಕ ಹಂತದಲ್ಲಿ ತೋರಿದ ನಿರ್ಲಕ್ಷ್ಯವೇ ಇಟಲಿಯ ಪಾಲಿಗೆ ಮುಳುವಾಗಿದೆ’ ಎನ್ನುತ್ತಾರೆ ಇಟಲಿಯಿಂದ ತವರಿಗೆ ಹಿಂದಿರುಗಿರುವ ಸಂಶೋಧನಾ ವಿದ್ಯಾರ್ಥಿನಿ ಶ್ರೀಮಧು ಭಟ್‌.

ನಗರದ ಸುರತ್ಕಲ್‌ನ ಕುಳಾಯಿ ನಿವಾಸಿಯಾಗಿರುವ ಶ್ರೀಮಧು, 2019ರ ಅಕ್ಟೋಬರ್‌ನಿಂದ ಇಟಲಿಯ ಟ್ಯೂರಿನ್‌ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕೋವಿಡ್‌–19 ಸೋಂಕು ವ್ಯಾಪಿಸುತ್ತಿದ್ದಂತೆ ತವರಿಗೆ ಮರಳಿರುವ ಅವರು ಭಾನುವಾರ ಕುಟುಂಬವನ್ನು ಸೇರಿಕೊಂಡಿದ್ದಾರೆ.

‘ಫೆಬ್ರುವರಿ ಮಧ್ಯ ಭಾಗದಲ್ಲಿ ಇಟಲಿಯಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಆರಂಭಿಕ ಹಂತದಲ್ಲಿ ಅಲ್ಲಿನ ಜನರು ಅದನ್ನು ಒಂದು ಸಾಮಾನ್ಯ ಶೀತ, ಕೆಮ್ಮು, ಜ್ವರದ ಸಮಸ್ಯೆ ಎಂದೇ ಪರಿಗಣಿಸಿದರು. ವೃದ್ಧರು ಮತ್ತು ಇತರೆ ರೋಗಗಳಿಂದ ಬಳಲುವವರಿಗಷ್ಟೇ ಸಮಸ್ಯೆ ಎಂದು ವಾದಿಸುತ್ತಿದ್ದರು. ಸೋಂಕು ಹರಡುತ್ತಿರುವ ವೇಗದ ಕುರಿತು ಯೋಚಿಸಲೇ ಇಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಾಕ್‌ಡೌನ್‌ ಗಂಭೀರವಾಗಿರಲಿಲ್ಲ:

ವೈರಸ್‌ ಸೋಂಕು ಹಬ್ಬುವುದನ್ನು ತಡೆಯಲು ಹಲವು ದಿನಗಳ ಬಳಿಕ ಲಾಕ್‌ಡೌನ್‌ ಘೋಷಿಸಲಾಯಿತು. ಆರಂಭದಲ್ಲಿ ಅದು ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿಗೆ ಸೀಮಿತವಾಗಿತ್ತು. ಆ ಅವಧಿಯಲ್ಲಿ ಬಾರ್‌, ರೆಸ್ಟೊರೆಂಟ್‌, ಪಬ್‌, ಮಾಲ್‌ ಎಲ್ಲವೂ ತೆರೆದಿದ್ದವು. ವಿದ್ಯಾರ್ಥಿಗಳು ಅಲ್ಲಿ ಬಂದು ಜಮೆಯಾಗುತ್ತಿದ್ದರು ಎಂದು ಶ್ರೀಮಧು ಹೇಳಿದರು.

‘ಸ್ವಲ್ಪ ದಿನಗಳ ಬಳಿಕ ಲಾಕ್‌ಡೌನ್‌ ಅನ್ನು ತುಸು ಬಿಗಿಗೊಳಿಸಲಾಯಿತು. ಆದರೆ, ದಿನಸಿ ಅಂಗಡಿಗಳು, ಮಾಲ್‌ಗಳು, ಸೂಪರ್‌ ಮಾರ್ಕೆಟ್‌ಗಳು ತೆರೆದೇ ಇದ್ದವು. ನಾನು ಮಾರ್ಚ್‌ 14ಕ್ಕೆ ಅಲ್ಲಿಂದ ನಿರ್ಗಮಿಸಿದೆ. ಆ ದಿನದಲ್ಲೂ ಸಾರ್ವಜನಿಕ ಸಾರಿಗೆ ಬಂದ್‌ ಆಗಿರಲಿಲ್ಲ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುತ್ತಲೇ ಇದ್ದರು’ ಎಂದು ತಿಳಿಸಿದರು.

ಇಟಲಿಯಲ್ಲಿ ಜನರು ಮತ್ತು ಆಡಳಿತ ವ್ಯವಸ್ಥೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಗಂಭೀರವಾಗಿ ಯೋಚಿಸಲಿಲ್ಲ. ಸರ್ಕಾರ ನೀಡಿದ ಆದೇಶವನ್ನು ಅಲ್ಲಿಯ ಜನರೂ ಕಟ್ಟುನಿಟ್ಟಾಗಿ ಪಾಲಿಸಲಿಲ್ಲ. ಇದು ಸಾವಿರಾರು ಮಂದಿಯ ಸಾವಿಗೆ ಕಾರಣವಾಯಿತು ಎಂದು ಅಲ್ಲಿನ ಚಿತ್ರಣವನ್ನು ಬಿಡಿಸಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT