ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಎಕರೆ ಕೃಷಿ ಜಮೀನು ಜಲಾವೃತ

ಪಜೀರು ಕೇದಗೆಬೈಲ್‌ನಲ್ಲಿ ಭೂಕುಸಿತ; ಶಾಸಕ ಯು.ಟಿ.ಖಾದರ್ ಭೇಟಿ
Last Updated 10 ಸೆಪ್ಟೆಂಬರ್ 2019, 13:33 IST
ಅಕ್ಷರ ಗಾತ್ರ

ಮುಡಿಪು: ಬಂಟ್ವಾಳ ತಾಲ್ಲೂನ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತದ್ಮ ಮುರಾಯಿ ಕೇದಗೆಬೈಲ್ ಎಂಬಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ, ಸುಮಾರು 200 ಎಕರೆ ಪ್ರದೇಶ ಜಲಾವೃತಗೊಂಡು ಹಾನಿ ಸಂಭವಿಸಿದೆ. ಶಾಸಕ ಯು.ಟಿ.ಖಾದರ್ ಆಗಮಿಸಿ ಪರಿಶೀಲನೆ ನಡೆಸಿದರು.

ತದ್ಮ ಕೇದಗೆಬೈಲ್ ಸಮೀಪದ ಜೈನಕೋಟೆ ಪ್ರದೇಶದ ಗುಡ್ಡ ಪ್ರದೇಶವು ಸೋಮವಾರ ಕುಸಿದಿದೆ. ಮಣ್ಣು ಕುಸಿದು ಬಿದ್ದ ಪರಿಣಾಮ ಇಲ್ಲಿ ನೀರು ಹರಿಯುವ ತೋಡು ದಿಕ್ಕು ಬದಲಿಸಿ, ತೋಟದ ಮೂಲಕ ಹರಿದು ಸುಮಾರು 200 ಎಕರೆ ಕೃಷಿ ಪ್ರದೇಶವು ಜಲಾವೃತವಾಗಿದೆ. ಅಡಿಕೆತೋಟ ಹಾಗೂ ಭತ್ತದ ಗದ್ದೆಗಳಲ್ಲಿ ನೀರು ತುಂಬಿ ಅಪಾರ ಪ್ರಮಾಣದ ಕೃಷಿ ಹಾನಿ ಸಂಭವಿಸಿದೆ. ಕೆಲವು ಮನೆಗಳು ಕೂಡಾ ಜಲಾವೃತಗೊಂಡಿದೆ.

ಕೋಟೆ ಪ್ರದೇಶದಗುಡ್ಡದಲ್ಲಿ ಬಿರುಕು ಇನ್ನೂ ವಿಸ್ತರಿಸುತ್ತಿದ್ದು, ಇಲ್ಲಿರುವ ಮನೆಗಳಿಗೂ ಅಪಾಯ ಎದುರಾಗಲಿದೆ.

ಈ ಪ್ರದೇಶಕ್ಕೆ ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲದಿರುವುದರಿಂದ ನೀರು ಹರಿಯುವ ತೋಡಿಗೆ ಬಿದ್ದ ಗುಡ್ಡ ಪ್ರದೇಶದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆರೆವು ಮಾಡಲು ಸಾಧ್ಯವಾಗಿಲ್ಲ. ಯಂತ್ರ ಬಳಸದೆ, ಜನರೇ ಗುಡ್ಡದ ಮಣ್ಣನ್ನು ತೆರವುಗೊಳಿಸುವುದು ಕಷ್ಟದ ಕೆಲಸ ಎಂದು ಸ್ಥಳೀಯರು ತಿಳಿಸಿದ್ದಾರೆ.

‘15 ದಿನಗಳ ಕಾಲ ಇದೇ ರೀತಿ ನೀರು ಹರಿದರೆ ಇಲ್ಲಿಯ ತೋಟಗಳ ಅಡಿಕೆ ಮರ, ಭತ್ತದ ಗದ್ದೆಗಳಿಗೆ ಅಪಾರ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಕೃಷಿಕ ಪ್ರಭಾಕರ ಅವರು ಅಳಲು ತೋಡಿಕೊಂಡರು.

ಶಾಸಕ ಖಾದರ್ ಭೇಟಿ: ಭೂಕುಸಿತ ಉಂಟಾಗಿರುವ ಪಜೀರು ಗ್ರಾಮದ ಕೇದಗೆಬೈಲ್ ಪ್ರದೇಶಕ್ಕೆ ಶಾಸಕ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಈ ಪ್ರದೇಶದಲ್ಲಿ ಗುಡ್ಡ ಕುಸಿದು ತೋಡಿನಲ್ಲಿರುವನೀರು ಹರಿವಿಗೆ ತಡೆಯುಂಟಾಗಿದೆ. ನೀರು ಇದೀಗ ಕೃಷಿಕರ ಜಮೀನು ಮೂಲಕ ಹರಿಯುತ್ತಿದೆ. ಕೂಡಲೇ ಮಣ್ಣು ತೆರವುಗೊಳಿಸಿ ನೀರು ಹರಿದುಹೋಗುವ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೃಷಿ ಪ್ರದೇಶ ನಾಶವಾಗಿದ್ದು ಬೆಲೆ ಪರಿಹಾರದ ಬಗ್ಗೆಯೂ ಚರ್ಚಿಸಲಾಗುವುದು. ಅಲ್ಲದೆ ಮುಡಿಪು ಭಾಗದಿಂದ ಹರಿಯುವ ಈ ತೋಡು ಅರ್ಕುಳದ ನೇತ್ರಾವತಿ ನದಿಗೆ ಹರಿಯುತ್ತದೆ. ಈ ತೋಡಿನ ಹೂಳೆತ್ತುವ ಕಾರ್ಯವು ಶೀಘ್ರದಲ್ಲೇ ನಡೆಯಲಿದೆ’ ಎಂದರು.


ಬಂಟ್ವಾಳ ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರಶಾಂತ ಕಾಜವ, ಇಂತಿಯಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಅಬ್ದುಲ್ ಜಲೀಲ್ ಮೊಂಟುಗೋಳಿ, ನಾಸೀರ್ ನಡುಪದವು, ಪಂಚಾಯಿತಿ ಸದಸ್ಯರಾದ ಶಾಫಿ, ಫ್ಲೋರಿನ್ ಡಿಸೋಜ, ಜಗನ್ನಾಥ್ ಪೂಂಜ, ಸಮೀರ್ ಉಪಸ್ಥಿತರಿದ್ದರು.

ಭಾರಿ ಶಬ್ದ: ‘ನಾನು ಇಲ್ಲಿಯ ತೋಟದಲ್ಲಿ ಅಡಿಕೆ ಹೆಕ್ಕುತ್ತಿದ್ದೆ. ಆಗ ಭಾರಿ ಶಬ್ದವೊಂದು ಕೇಳಿಸಿತು. ಅತ್ತ ತಿರುಗಿದಾಗ ಗುಡ್ಡ ಪ್ರದೇಶವು ಏಕಾಏಕಿ ಕುಸಿದು ಬಿದ್ದಿತ್ತು. ಇದು ಭೂಕಂಪವೇ ಆಗಿರಬಹುದು ಎಂದೆನಿಸಿ ಭಯಗೊಂಡು ಅಲ್ಲಿಂದ ಓಡಿ ಹೋದೆ’ ಎಂದುಕಾರ್ಮಿಕ ಅಬೂಬಕ್ಕರ್ ತಿಳಿಸಿದರು.

ಜೈನರ ಕೋಟೆ: ಪಜೀರು ಗ್ರಾಮದ ತದ್ಮ ಮುರಾಯಿ ಎಂಬಲ್ಲಿಯ ಎತ್ತರ ಪ್ರದೇಶದಲ್ಲಿ ಜೈನರ ಕಾಲದಲ್ಲಿ ನಿಮರ್ಿಸಲಾಗಿದ್ದ ಕೋಟೆಯೊಂದು ಇತ್ತು ಎನ್ನಲಾಗಿದೆ. ಈ ಪ್ರದೇಶವು ಹಿಂದೆ ವಿಶಾಲವಾಗಿತ್ತು. ಬಳಿಕ ಕಾಲಕ್ರಮೇಣ ಕೋಟೆಯ ಭಾಗವು ಕುಸಿದು ಹೋಗಿ ಸ್ವಲ್ಪ ಭಾಗ ಮಾತ್ರ ಬಾಕಿಯಾಗಿತ್ತು. ಇದೀಗ ಈ ಪ್ರದೇಶವೇ ಕುಸಿದು ಬಿದ್ದು ಕೋಟೆಯ ಅವಶೇಷ ನಾಶವಾಗಿದೆ. ಇದೀಗ ಈ ಪ್ರದೇಶಲ್ಲಿ ಇನ್ನೂ ಭೂಮಿ ಬಿರುಕು ಬಿಟ್ಟಿದ್ದು ಜನರು ಆತಂಕದಲ್ಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT