ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಾರ್ಡ್‌ಗೆ ₹25 ಲಕ್ಷ ಮಂಜೂರು: ಪಾಲಿಕೆ ಸಭೆಯಲ್ಲಿ ಮೇಯರ್‌ ದಿವಾಕರ್‌ ಘೋಷಣೆ

ಪ್ರತಿಪಕ್ಷಗಳ ಆಕ್ಷೇಪ
Last Updated 23 ಸೆಪ್ಟೆಂಬರ್ 2020, 3:12 IST
ಅಕ್ಷರ ಗಾತ್ರ

ಮಂಗಳೂರು: ಪಾಲಿಕೆಯ ವಾರ್ಡ್‌ಗಳಲ್ಲಿ ತುರ್ತು ಕಾಮಗಾರಿಗಳಿಗೆ ಅನುಕೂಲವಾಗಲು ಸದಸ್ಯರಿಗೆ ತಲಾ ₹25 ಲಕ್ಷ ಅನುದಾನವನ್ನು ಮೇಯರ್‌ ಘೋಷಿಸಿದರು. ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷಗಳ ಸದಸ್ಯರು, ಪಾಲಿಕೆಯಲ್ಲಿ ಹಣವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಮಂಗಳವಾರ ಪಾಲಿಕೆ ಮಂಗಳ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮೇಯರ್‌ ದಿವಾಕರ್‌ ಪಾಂಡೇಶ್ವರ್‌, ಈ ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಒಳಚರಂಡಿ, ನೀರು ಸರಬರಾಜು ಸೇರಿದಂತೆ ವಾರ್ಡ್‌ಗಳಲ್ಲಿ ಕಾಮಗಾರಿ ಕೈಗೊಳ್ಳಬಹುದು ಎಂದರು.

ಪ್ರತಿಪಕ್ಷದ ಸದಸ್ಯ ಎ.ಸಿ. ವಿನಯರಾಜ್ ಮಾತನಾಡಿ, ನೀರಿನ ಶುಲ್ಕ ಸಂಗ್ರಹದ ₹4 ಕೋಟಿ ಹೊರತುಪಡಿಸಿ ಪಾಲಿಕೆಯಲ್ಲಿ ಹಣವೇ ಇಲ್ಲ. ಕಂದಾಯ ಇಲಾಖೆ ದಿವಾಳಿಯಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ತತಿಕ್ರಿಯಿಸಿದ ಮೇಯರ್ ದಿವಾಕರ್‌, ‘ನಾವು ಅಧಿಕಾರಕ್ಕೆ ಬರುವಾಗ ಹಿಂದಿನ ಸಾಲ ಸಾಕಷ್ಟು ಇತ್ತು’ ಎಂದರು. ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕೋವಿಡ್–19 ನಂತಹ ಪ್ರತಿಕೂಲ ಸ್ಥಿತಿಯಲ್ಲೂ ಮೇಯರ್‌ ಅನುದಾನ ಘೋಷಿಸಿದ್ದಾರೆ. ಪ್ರತಿಪಕ್ಷಗಳ ಈ ರೀತಿಯ ರಾಜಕೀಯ ಆರೋಪ ಸರಿಯಲ್ಲ ಎಂದರು.

ವಿನಯ್‌ರಾಜ್ ಮಾತನಾಡಿ, ‘ನಾನು ಆರೋಪ ಮಾಡುತ್ತಿಲ್ಲ. ವಾಸ್ತವವನ್ನು ತೆರೆದಿಡುತ್ತಿದ್ದೇನೆ’ ಎಂದು ಹೇಳಿದ್ದು, ಹಿರಿಯ ಸದಸ್ಯ ಸುಧೀರ್ ಶೆಟ್ಟಿ ಅವರನ್ನು ಕೆರಳಿಸಿತು. ‘ನಿಮ್ಮ ಅವಧಿಯಲ್ಲಿ ಏನೆಲ್ಲಾ ಮಾಡಿದ್ದೀರಿ ತಿಳಿದಿದೆ. ನಮಗೆ ಅಧಿಕಾರ, ಆಡಳಿತ ಮಾಡಲು ಗೊತ್ತಿದೆ. ನೀವು ತಿಳಿಸುವ ಅಗತ್ಯವಿಲ್ಲ. ರಾಜಕೀಯ ಮಾಡುವುದು ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಉಪ ಮೇಯರ್ ವೇದಾವತಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಅಕ್ರಮ ಕಟ್ಟಡ ತೆರವು ಮಾಡಿ

ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ. ಕಳೆದ ಸಭೆಯಲ್ಲಿ ಕಟ್ಟಡ ತೆರವಿಗೆ ಆದೇಶಿಸಿದ್ದರೂ ಕ್ರಮ ಆಗಿಲ್ಲ ಎಂದು ಸದಸ್ಯ ಅನಿಲ್ ಕುಮಾರ್ ಹೇಳಿದರು.

ವಾರ್ಡ್‌ ಸದಸ್ಯೆ ಸಂಗೀತಾ ನಾಯಕ್ ಮಾತನಾಡಿ, ಈ ಹಿಂದೆಯೇ 28 ಮನೆಗಳನ್ನು ಅನಧಿಕೃತವಾಗಿ ಕಟ್ಟಲಾಗಿದ್ದು, ಹಿಂದಿನ ಸದಸ್ಯರು ಅವರಿಗೆ ದಾರಿ ವ್ಯವಸ್ಥೆಯನ್ನೂ ಮಾಡಿದ್ದಾರೆ ಎಂದರು.

ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್ ಮಾತನಾಡಿ, ಅದು ಪಾಲಿಕೆಯ ಆಸ್ತಿ. ಅಕ್ರಮವಾಗಿ ನಿರ್ಮಾಣ ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂದರು. ಮಧ್ಯ ಪ್ರವೇಶಿಸಿದ ಮೇಯರ್ ದಿವಾಕರ, ‘ಹಾಗಿದ್ದರೆ ಹಿಂದೆ ಆಗಿರುವ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲು ತಯಾರಿದ್ದೀರಾ’ ಎಂದು ಪ್ರಶ್ನಿಸಿದರು. ‘ಅಕ್ರಮವಾಗಿರುವುದನ್ನು ತೆಗೆಸಲು ನಮ್ಮ ಅಭ್ಯಂತರವಿಲ್ಲ’ ಎಂದು ಸದಸ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT