ಶನಿವಾರ, ಡಿಸೆಂಬರ್ 7, 2019
24 °C
ಸರ್ವೀಸ್‌ ಪರೇಡ್‌ನಲ್ಲಿ ಪೊಲೀಸ್‌ ಸಿಬ್ಬಂದಿಗೆ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಭರವಸೆ

ಮೂರೇ ದಿನದಲ್ಲಿ ಅರ್ಜಿ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಜೆ, ಬಡ್ತಿ, ವೇತನ ಮತ್ತು ಭತ್ಯೆ ಬಾಕಿ ಸೇರಿದಂತೆ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ನಗರದ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಸಿಬ್ಬಂದಿ ಸಲ್ಲಿಸುವ ಅರ್ಜಿಗಳನ್ನು ಮೂರೇ ದಿನಗಳ ಅವಧಿಯೊಳಗೆ ವಿಲೇವಾರಿ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಭರವಸೆ ನೀಡಿದರು.

ನಗರದ ಸಿಎಆರ್‌ ಮೈದಾನದಲ್ಲಿ ಶುಕ್ರವಾರ ನಡೆದ ‘ಪೊಲೀಸ್‌ ಸರ್ವೀಸ್‌ ಪರೇಡ್‌’ನಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಪೊಲೀಸ್‌ ಸಿಬ್ಬಂದಿ ಸಲ್ಲಿಸುವ ಅರ್ಜಿಗಳ ವಿಲೇವಾರಿ ವಿಳಂಬ ಆಗಲು ಅವಕಾಶ ನೀಡುವುದಿಲ್ಲ. ಮೂರು ಕೆಲಸದ ದಿನಗಳೊಳಗೆ ಈ ಅರ್ಜಿಗಳ ವಿಲೇವಾರಿ ಕಡ್ಡಾಯವಾಗಲಿದೆ. ತಪ್ಪಿದರೆ ಸಂಬಂಧಿಸಿದ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿ, ಕ್ರಮ ಜರುಗಿಸಲಾಗುವುದು’ ಎಂದರು.

ಪೊಲೀಸ್‌ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೂ ವೇಗ ನೀಡಲಾಗುವುದು. ಶಕ್ತಿನಗರದಲ್ಲಿ ಪೊಲೀಸ್‌ ವಸತಿಗೃಹಗಳು ಶಿಥಿಲಾವಸ್ಥೆಯಲ್ಲಿರುವುದು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ಗಮನಕ್ಕೆ ಬಂತು. ಹೊಸದಾಗಿ ನಿರ್ಮಿಸಿರುವ ಮನೆಗಳನ್ನು ಉದ್ಘಾಟನೆಗೂ ಕಾಯದೇ ಅದೇ ದಿನ ಸಂಜೆ ಸಿಬ್ಬಂದಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಸಿಬ್ಬಂದಿ ವರ್ಗಾವಣೆಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ನೇಮಕಾತಿ ಸಮಯದಲ್ಲಿ ಹೊರ ಜಿಲ್ಲೆಗಳವರು ಇಲ್ಲಿ ಅರ್ಜಿ ಸಲ್ಲಿಸುತ್ತಾರೆ. ಆಯ್ಕೆಯಾದ ಬಳಿಕ ವರ್ಗಾವಣೆಗೆ ಒತ್ತಡ ತರುವುದು ಸರಿಯಲ್ಲ. ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಕಲಿತು ಇಲ್ಲಿಯೇ ಸೇವೆ ಮುಂದುವರಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ವರ್ಗಾವಣೆ ಬಯಸಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಮಿಷನರ್‌ ಎರಡೂ ಹುದ್ದೆಗಳೂ ಮುಖ್ಯವಾದವು. ಪೊಲೀಸರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವು ನೀಡುವುದಕ್ಕಾಗಿ ಸಮಾಲೋಚನೆ ಆರಂಭಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿಯನ್ನೂ ಆರಂಭಿಸುವ ಯೋಚನೆ ಇದೆ ಎಂದರು.

ಬೀಟ್‌ ವ್ಯವಸ್ಥೆಗೆ ಆ್ಯಪ್‌:

ಹೊಸದಾಗಿ ಪ್ರಾರಂಭಿಸಿರುವ ‘ನನ್ನ ಬೀಟ್ ನನ್ನ ಹೆಮ್ಮೆ’ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. 756 ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ 30,000 ಸದಸ್ಯರಿದ್ದಾರೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಈ ಸದಸ್ಯರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಬೀಟ್‌ ಸದಸ್ಯರ ಜೊತೆ ಸಂವಹನಕ್ಕಾಗಿ ಮೊಬೈಲ್‌ ಅಪ್ಲಿಕೇಷನ್‌ ಒಂದನ್ನು ಶೀಘ್ರದಲ್ಲಿ ಬಳಕೆಗೆ ತರಲಾಗುವುದು ಎಂದು ಕಮಿಷನರ್‌ ಹೇಳಿದರು.

‘30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಬೀಟ್‌ನ ನಾಗರಿಕ ಸದಸ್ಯರ ಸಹಕಾರದಿಂದಾಗಿ ಬಂಧಿಸಲಾಗಿದೆ. ಇತ್ತೀಚೆಗೆ ಮೂಲ್ಕಿ ಬಳಿ ರಸ್ತೆ ಅಪಘಾತ ಸಂಭವಿಸಿದ್ದಾಗ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಬೀಟ್‌ ಸದಸ್ಯರು ನೆರವಾದರು. ಮೂರು ತಿಂಗಳಲ್ಲಿ ಬೀಟ್‌ ಸದಸ್ಯರ ಸಂಖ್ಯೆಯನ್ನು 2.5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದರು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್‌ ಸೇರಿದಂತೆ ಕಮಿಷನರೇಟ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಮಿಷನರೇಟ್‌ ವ್ಯಾಪ್ತಿಯ ಬಹುತೇಕ ಅಧಿಕಾರಿಗಳು, ಸಿಬ್ಬಂದಿ ಪರೇಡ್‌ನಲ್ಲಿ ಭಾಗಿಯಾದರು. ಅತ್ಯುತ್ತಮ ಕೆಲಸ ಮಾಡಿದ ಪೊಲೀಸ್‌ ಸಿಬ್ಬಂದಿ ಹಾಗೂ ಬೀಟ್‌ ಸಮಿತಿಗಳ ನಾಗರಿಕ ಸದಸ್ಯರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು