ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಮಂಗಳೂರು ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆ

‘ದೇಶಿ ಅಂತಸತ್ವದಲ್ಲಿ ವಿ.ವಿ. ರೂಪಿಸಿ’

Published:
Updated:
Prajavani

ಮುಡಿಪು: ‘ಶ್ರೀಮಂತ ಜ್ಞಾನ ಪರಂಪರೆಯನ್ನು ಹೊಂದಿದ ಭಾರತದಲ್ಲಿ ದೇಶೀಯ ಅಂತಃಸತ್ವಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳು ನಿರ್ಮಾಣಗೊಳ್ಳಬೇಕು’ ಎಂದು ಒಡಿಸ್ಸಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ‘40ನೇ ಸಂಸ್ಥಾಪನಾ ದಿನಾಚರಣೆ’ಯಲ್ಲಿ ಗುರುವಾರ ಅವರು ಮಾತನಾಡಿದರು.

‘ಹಿಂದೆ ಭಾರತದ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆಯು ಜಗತ್ತಿಗೆ ಮಾದರಿಯಾಗಿತ್ತು. ಆದರೆ, ಇಂದಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ದೇಶದ ವ್ಯಕ್ತಿತ್ವಕ್ಕೆ ಅನುಗುಣವಾಗಿ ರೂಪುಗೊಳ್ಳದೇ, ವಿದೇಶಿ ವಿಶ್ವವಿದ್ಯಾಲಯಗಳನ್ನು ಮಾದರಿಯಾಗಿಟ್ಟುಕೊಂಡು ರೂಪುಗೊಂಡಿವೆ’ ಎಂದರು.

‘ಭಾರತದ ಆಯುರ್ವೇದ, ಯೋಗ, ಕೃಷಿ ಸಂಸ್ಕೃತಿಯ ಬಗ್ಗೆ ಅಮೆರಿಕ ಸೇರಿದಂತೆ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಉತ್ಸುಕರಾಗಿಗದ್ದಾರೆ. ತಮ್ಮ ದೇಶದಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಣವು ನಮ್ಮಲ್ಲಿ ಉತ್ತಮ ವ್ಯಕ್ತಿತ್ವ, ಮೌಲ್ಯವನ್ನು ಬೆಳೆಸಿ ಮಾದರಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಕಾರ್ಯೋನ್ಮುಖವಾಗಿದೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿಯ ಸಂಸ್ಕೃತಿ, ಆರಾಧನಾ ಪದ್ಧತಿ ವಿಶಿಷ್ಟವಾಗಿದೆ. ಈ ಬಗ್ಗೆ ಅಧ್ಯಯನಗಳು ನಡೆಯಬೇಕು. ಮಂಗಳೂರು ವಿಶ್ವವಿದ್ಯಾಲಯವು ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ‘ವಿಶ್ವವಿದ್ಯಾಲಯದ ಹಿಂದಿನ ಎಂಟೂ ಕುಲಪತಿಗಳು ಉತ್ತಮ, ಆದರ್ಶ ಕಾರ್ಯಗಳನ್ನು ಮಾದರಿಯಾಗಿಟ್ಟು, ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಬಗ್ಗೆ ಹಲವಾರು ಕನಸು ಹಾಗೂ ಸವಾಲುಗಳೂ ಇವೆ. ಆದ್ದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಗಳೂರು ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಕಟ್ಟಲು ಪ್ರಯತ್ನಿಸುತ್ತೇನೆ’ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಹನುಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಿ.ಕೆ.ದೇವರಾಯ, ಜಿ.ಚಿದ್ವಿಲಾಸ್, ಪ್ರೊ.ಗೋಪಾಲ್ ಮುಗೆರಾಯ, ಪ್ರೊ.ಶಶಿಕಲಾ ಗುರುಪುರ, ಡಾ.ಗಣೇಶ್ ಅಮೀನ್ ಸಂಕಮಾರ್ ಅವರನ್ನು ಸನ್ಮಾನಿಸಲಾಯಿತು.

ಕುಲಸಚಿವ ಪ್ರೊ.ಎ.ಎಂ.ಖಾನ್, ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ, ಹಣಕಾಸು ಅಧಿಕಾರಿ ಪ್ರೊ.ರವೀಂದ್ರಾಚಾರಿ, ಕಾರ್ಯಕ್ರಮ ಸಂಯೋಜಕಾರಾದ ಪ್ರೊ.ಶಿವಲಿಂಗಯ್ಯ, ಪ್ರಾಧ್ಯಾಪಕರಾದ ಪ್ರೊ.ರವಿಶಂಕರ್‌ರಾವ್ ಹಾಗೂ ಡಾ.ಧನಂಜಯ ಕುಂಬ್ಳೆ ಇದ್ದರು.

Post Comments (+)