ಶನಿವಾರ, ಫೆಬ್ರವರಿ 22, 2020
19 °C

150 ನೇ ವರ್ಷಾಚರಣೆಯ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ 150ನೇ ವರ್ಷದ ಸಂಭ್ರಮಾಚರಣೆ ಇದೇ 6ರಂದು ನಡೆಯಲಿದೆ.

ಕಾಲೇಜಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ‘1868ರಲ್ಲಿ ಆರಂಭಗೊಂಡ ಕಾಲೇಜು 150 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಇದನ್ನು  ‘ಸರ್ಕಾರಿ ಕಾಲೇಜು’ ಎಂದು ಕರೆಯಲಾಗುತ್ತಿದ್ದು, 1993 ರಿಂದ ‘ವಿಶ್ವವಿದ್ಯಾಲಯ ಕಾಲೇಜು’ ಎಂದು ನಾಮಕರಣಗೊಂಡಿತು. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇದೇ6 ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯ ಕಾಲೇಜಿನ ಆವರಣದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು. 

‘2018ನೇ ಶೈಕ್ಷಣಿಕ ವರ್ಷಕ್ಕೆ 150 ವರ್ಷ ತುಂಬಿತ್ತಾದರೂ ಆಡಳಿತಾತ್ಮಕ ಕಾರಣಗಳಿಂದಾಗಿ  ಕಾರ್ಯಕ್ರಮವನ್ನು ಮುಂದೂಡಬೇಕಾಯಿತು’ ಎಂದರು. 

‘ರವೀಂದ್ರ ಕಲಾ ಭವನದ ನವೀಕರಣ ಹಾಗೂ ಕರ್ಣಾಟಕ ಬ್ಯಾಂಕ್‍ ಪ್ರಾಯೋಜಿತ ಬಯಲು ರಂಗ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ದಯಾನಂದ ಪೈ ಬ್ಲಾಕ್‍ನಲ್ಲಿ 8 ಕೊಠಡಿಗಳನ್ನು ನಿರ್ಮಾಣ ಮಾಡುವುದು, ಗ್ರಂಥಾಲಯದ ಡಿಜಿಟಲೀಕರಣ, ರವೀಂದ್ರ ಕಲಾ ಭವನದಲ್ಲಿ ಕಲಾ ಗ್ಯಾಲರಿ ನಿರ್ಮಾಣ,  ಬಿಸಿಯೂಟ ಯೋಜನೆಯ ವಿಸ್ತರಣೆ ಹಾಗೂ ಆಧುನಿಕ ಅಡುಗೆ ಮನೆ ಮತ್ತು ಊಟದ ಸಭಾಂಗಣ ನಿರ್ಮಾಣ,  ಯೋಗ ಥೆರಪಿ ಕೇಂದ್ರ ಆರಂಭಿಸುವ ಗುರಿಯನ್ನು ಹೊಂದಲಾಗಿದೆ’ ಎಂದು ವಿವರಿಸಿದರು.

‘ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಮಾರಾಟ ಮಳಿಗೆಯನ್ನು ಕಾಲೇಜಿನ ಆವರಣದಲ್ಲಿ ತೆರೆಯಲಾಗುವುದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೋರ್ಸ್‍ಗಳನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ಮಾಡಲಾಗುತ್ತದೆ. ಒಟ್ಟಾರೆ, ವಿಶ್ವವಿದ್ಯಾಲಯ ಕಾಲೇಜನ್ನು ಮಾದರಿ ಕಾಲೇಜನ್ನಾಗಿ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

ಕಾರ್ಯಕ್ರಮಗಳ ವಿವರ

ಇದೇ 6 ರಂದು ಬೆಳಿಗ್ಗೆ 10.20ಕ್ಕೆ ವಿವಿ ಕಾಲೇಜು ಮತ್ತು ಭಾರತೀಯ ಪುರಾತತ್ವ ಇಲಾಖೆ  ಏರ್ಪಡಿಸಿರುವ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮವನ್ನು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಸ್‍. ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್‍ ಶ್ರೀ ಚಾರ್ಲ್ಸ್‌ ಲೋಬೊ ಬಿಡುಗಡೆ ಮಾಡುವರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‍ ಕುಮಾರ್ ಕಟೀಲ್‍, ಶಾಸಕರಾದ ವೇದವ್ಯಾಸ ಕಾಮತ್‍,  ಯು. ಟಿ. ಖಾದರ್‌, ವಿಧಾನ ಪರಿಷತ್‍ ಸದಸ್ಯರಾದ ಎಸ್‍. ಎಲ್‍. ಭೋಜೇಗೌಡ, ಐವನ್‍ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ವಿನಯ್‍ರಾಜ್‍ ಪಾಲ್ಗೊಳ್ಳುವರು.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಉದ್ಯಮಿ ಡಾ. ಪಿ. ದಯಾನಂದ ಪೈ, ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕ ಡಾ. ಶಿವಕಾಂತ ಬಾಜಪೇಯಿ, ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಎ. ಎಂ. ಖಾನ್‍, ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲ ಡಾ. ಉದಯ್ ಕುಮಾರ್‌ ಎಂ. ಎ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪಿ. ಹೇಮಲತಾ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕರ್ನಲ್‍ ಶರತ್‍ ಭಂಡಾರಿ ಉಪಸ್ಥಿತರಿರುವರು.

ಮಧ್ಯಾಹ್ನ 2.30ರಿಂದ 5 ಗಂಟೆವರೆಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಯಿಂದ 7 ಗಂಟೆವರೆಗೆ ವಿಶ್ವವಿದ್ಯಾಲಯ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಹಾಲಿ ಮತ್ತು ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು