ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಅಕ್ಕ–ಅಮ್ಮನ ಪಣ, ಪದಕ ಪಡೆದ ರಮ್ಯಾ

ಮಂಗಳೂರು ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ
Last Updated 29 ಫೆಬ್ರುವರಿ 2020, 7:03 IST
ಅಕ್ಷರ ಗಾತ್ರ
ADVERTISEMENT
""

ಮಂಗಳೂರು: ‘ನಮ್ಮಂತವರು, ಹೆಣ್ಣು ಮಕ್ಕಳು ಎಲ್ಲರ ಜೊತೆ ಸಮಾನವಾಗಿ ನಿಲ್ಲಬೇಕಾದರೆ, ಶಿಕ್ಷಣವೊಂದೇ ದಾರಿ’ ಎನ್ನುವಾಗ ಕೂಲಿಕಾರ ಪಾರ್ವತಿ ಹಾಗೂ ಗುತ್ತಿಗೆ ನೌಕರಿಯ ಸೌಮ್ಯರ ಕಣ್ಣಾಲಿಗಳು ತುಂಬಿತ್ತು.

ಅವರು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 38ನೇ ಘಟಿಕೋತ್ಸವದಲ್ಲಿ ಎಂ.ಪಿ.ಇಡಿನಲ್ಲಿ ಚಿನ್ನದ ಪದಕ ಪಡೆದಪುತ್ತೂರು ತಾಲ್ಲೂಕಿನ ಕಾವು ತೋಟದ ಮೂಲೆಯ ರಮ್ಯಾ ಪಿ. ಅವರ ಅಮ್ಮ ಮತ್ತು ಅಕ್ಕ. ಕಲಿಯುವ ಕನಸಿದ್ದರೂ, ಬಡತನ, ಸಾಮಾಜಿಕ ಸ್ಥಿತಿ ಕಾರಣ ಶಿಕ್ಷಣ ಮುಂದುವರಿಸಲಾರದ ತಾಯಿ–ಮಗಳು, ಕೂಲಿ ಮಾಡಿ ಸಣ್ಣ ಮಗಳನ್ನು ಓದಿಸಿದ್ದರು.

ರಮ್ಯಾಳ ತಾಯಿ ಪಾರ್ವತಿ ನಾಯ್ಕ, ಮೂಲತಃ ಸುಳ್ಯ ತಾಲ್ಲೂಕಿನ ಅಡ್ಕಾರಿನವರು. ಬಡತನ, ಹೆಣ್ಣು ಮಗಳು, ಪರಿಸರದ ಕಾರಣಕ್ಕೆ ಅವರ ಪೋಷಕರು ಮೂರನೇ ತರಗತಿಗೆ ಶಾಲೆ ಬಿಡಿಸಿದ್ದರು. ಕೂಲಿಯೇ ಬದುಕಾಗಿತ್ತು.

ಕಾವಿನ ದೇರಣ್ಣ ನಾಯ್ಕ ಜೊತೆ ವಿವಾಹವಾಗಿದ್ದು, ಅವರೂ ಕೂಲಿಕಾರರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಬಡತನದಿಂದಾಗಿ ದೊಡ್ಡ ಮಗಳು ಸೌಮ್ಯಳ ಕಲಿಕೆಯೂ 10ನೇ ತರಗತಿಗೆ ಮೊಟಕುಗೊಂಡಿತ್ತು. ಗುತ್ತಿಗೆ ಕೆಲಸಕ್ಕೆ ಸೇರಿದಳು. ಆದರೆ, ಪಣತೊಟ್ಟ ತಾಯಿ–ಮಗಳು, ತಂಗಿ ರಮ್ಯಾಳಿಗೆ ಶಿಕ್ಷಣ ಕೊಡಿಸಿದ್ದಾರೆ.

‘ಅಮ್ಮ ಮತ್ತು ಅಕ್ಕ ನನಗೆ ಛಲ ಹಿಡಿದು ಪ್ರೋತ್ಸಾಹಿಸಿದರು. ನಾನು, ಶಾಲೆಯಲ್ಲಿ ಇದ್ದಾಗಲೇ ಎತ್ತರ ಜಿಗಿತದಲ್ಲಿ ರಾಜ್ಯಕ್ಕೆ ಪ್ರಥಮ ಬಂದೆ. ಉಜಿರೆ ಎಸ್‌ಡಿಎಂನಲ್ಲಿ ಉಚಿತ ಶಿಕ್ಷಣ ಸಿಕ್ಕಿತು. ಬಳಿಕ ಬಿಪಿಇಡಿಗೆ ಸೇರಿದ್ದು, ಚಿನ್ನದ ಪದಕ ಪಡೆದನು. ಈಗ ಮತ್ತೆ ಪಡೆದಿದ್ದೇನೆ’ ಎಂದು ರಮ್ಯಾ ಕೃತಜ್ಞತೆ ವ್ಯಕ್ತಪಡಿಸಿದಳು.

‘ಪಿಎಚ್‌ಡಿ ಮಾಡುವ ಆಸೆ ಇದೆ. ಆರ್ಥಿಕ ಕಷ್ಟದ ಕಾರಣ, ಪರೀಕ್ಷೆ ಮುಗಿದ ಕೂಡಲೇ ಕೆಲಸಕ್ಕೆ ಸೇರಿಕೊಂಡಿದ್ದೇನೆ...’ ಎಂದರು.

ಛಲದ ಹುಡುಗಿ ವಿದ್ಯಾಶ್ರೀ:ಜೀವವಿಜ್ಞಾನದಲ್ಲಿ ಚಿನ್ನದ ಪಕದ ಪಡೆದ ವಿದ್ಯಾಶ್ರೀಯೂ ಕೂಲಿಕಾರ ಕುಟುಂಬದ ಮಗಳು. ‘ಮನೆಯಲ್ಲಿ ಕಾಡುವ ಬಡತನದಿಂದ ಹತ್ತನೇ ತರಗತಿ ಬಳಿಕ ನನ್ನನ್ನು ಹತ್ತಿರದ ಫ್ಯಾಕ್ಟರಿ ಕೆಲಸಕ್ಕೆ ಹಾಕುವ ಯೋಜನೆಯಲ್ಲಿದ್ದರು. ಆದರೆ, ನಾನು ಕಲಿಯಬೇಕೆಂದು ಹಟ ಮಾಡಿದೆ. ಕನಸನ್ನು ನನಸಾಗಿಸಿಕೊಂಡೆ’ ಎಂದು ನಿಟ್ಟುಸಿರು ಬಿಟ್ಟರು.

ಅವರು, ಹೆಬ್ರಿಯ ಶಿವಪುರದ ಕೃಷ್ಞ ನಾಯ್ಕ್ ಹಾಗೂ ವಿನೋದ ದಂಪತಿಯ ಪುತ್ರಿ. ತಂದೆ ಕೂಲಿ‌, ತಾಯಿ ಬೀಡಿ ಕಟ್ಟುತ್ತಾರೆ. ಸಾಲ ಮಾಡಿ ಮಗಳಿಗೆ ಓದಿಸಿದ್ದು, ‘ಪ್ರಾಧ್ಯಾಪಕಿಯಾಗಿ ಹೆತ್ತವರ ಕಷ್ಟ ನೀಗಿಸಬೇಕು’ ಎಂದು ವಿದ್ಯಾಶ್ರೀ ಆಶಯ ವ್ಯಕ್ತಪಡಿಸಿದರು.

ಶೋಭಿತಾ ಪದ್ಮಾರ್

ತರಕಾರಿ ವ್ಯಾಪಾರಿಯ ಮಗಳಿಗೆ ಚಿನ್ನದ ಪದಕ

ಆನ್ವಯಿಕ ಪ್ರಾಣಿಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಶೋಭಿತಾ ಪದ್ಮಾರ್, ಬದಿಯಡ್ಕ ಬಳಿಯ ಮಾರ್ಪನಡ್ಕದ ತರಕಾರಿ ವ್ಯಾಪಾರಿ ಅಚ್ಯುತ ಮಣಿಯಾಣಿ ಪದ್ಮಾರ್ ಹಾಗೂ ಹೇಮಲತಾ ದಂಪತಿ ಪುತ್ರಿ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಪದವಿಪೂರ್ವ ಶಿಕ್ಷಣವನ್ನು ಅಗಲ್ಪಾಡಿ ಶ್ರೀಅನ್ನಪೂರ್ಣೇಶ್ವರಿ ಶಾಲೆಯಲ್ಲಿ ಪೂರೈಸಿದ ಅವರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಪ್ರಸ್ತುತ ಮಂಗಳೂರಿನ ಹಂಪನಕಟ್ಟೆಯ ಸರಕಾರಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಬಿಇಡ್ ಮಾಡುತ್ತಿದ್ದಾರೆ.

ಅಂಧ ವಿದ್ಯಾರ್ಥಿಗೆ ಅಮ್ಮನ ಬಲ:ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅಂಧ ವಿದ್ಯಾರ್ಥಿ ನಿತ್ಯಾನಂದ, ಅಂಗನವಾಡಿ ಸಹಾಯಕಿಯಾಗಿರುವ ತಾಯಿ ವಿನೋದ ಸಹಾಯದಿಂದಲೇ ಬಿಎಸ್‌ಡಬ್ಲ್ಯೂನ ಚಿನ್ನದ ಪದಕವನ್ನು ಇಲ್ಲಿನ ವೇದಿಕೆಯಲ್ಲಿ ಪಡೆದರು. ಅವರು ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ವಿದ್ಯಾರ್ಥಿ.

‘ಅಮ್ಮನಿಂದಾಗಿ ನನ್ನ ಈ ಸಾಧನೆ ಸಾಧ್ಯವಾಗಿದೆ. ಡಾ.ಮೋಹನ ಆಳ್ವ ಮತ್ತಿತರರು ನನಗೆ ಪ್ರೋತ್ಸಾಹ ನೀಡಿದರು’ ಎಂದು ಧನ್ಯತೆ ಮೆರೆದರು.

ಗಾಂಬಿಯಾ ವಿದ್ಯಾರ್ಥಿ:‘ನನ್ನದು 18 ಲಕ್ಷ ಜನರಿರುವ ಸಣ್ಣ ದೇಶ. ಅಲ್ಲಿರುವುದು ಒಂದೇ ಸರ್ಕಾರಿ ವಿಶ್ವವಿದ್ಯಾಲಯ. ಹೀಗಾಗಿ, ಭಾರತ ಮತ್ತು ಗಾಂಬಿಯಾದ ಶೈಕ್ಷಣಿಕ ವಿನಿಮಯ ಯೋಜನೆ ಅಡಿಯಲ್ಲಿ ನಾನು ಇಲ್ಲಿ ಪಿಎಚ್‌.ಡಿ ಮಾಡಿದ್ದೇನೆ’ ಎಂದು ಪಶ್ಚಿಮ ಆಫ್ರಿಕಾದ ಗಾಂಬಿಯಾದ ಮೂಸ ಎಲ್ ಫಾಲ್ ಸಂತಸ ಹಂಚಿಕೊಂಡರು. ‘ಇಲ್ಲಿನ ಉತ್ತಮ ಶಿಕ್ಷಣ ಪಡೆದು, ದೇಶದಲ್ಲಿ ಸೇವೆ ಸಲ್ಲಿಸಬೇಕು ಎಂಬುದು ನನ್ನ ಕನಸು’ ಎಂದರು.

ಬಿಎಸ್‍ಡಬ್ಲ್ಯೂನಲ್ಲಿ ಅಂಧರಿಗೆ ಮೂರು ರ್‍ಯಾಂಕ್

ಸಮಾಜ ಕಾರ್ಯ ಪದವಿ (ಬಿಎಸ್‍ಡಬ್ಲ್ಯೂ)ಯಲ್ಲಿ ರ್‍ಯಾಂಕ್ ಪಡೆದ ಮೊದಲ ಮೂವರು ಅಂಧರು. ನಿತ್ಯಾನಂದ ಪೂಜಾರಿ ಪ್ರಥಮ, ಗುರುರಾಜ್ ಬೆಳ್ತಂಗಡಿ ದ್ವಿತೀಯ ಹಾಗೂ ಪ್ರದೀಪ್ ಪುತ್ತೂರು ತೃತೀಯ ರ್‍ಯಾಂಕ್ ಪಡೆದುಕೊಂಡಿದ್ದಾರೆ.

‘ಅಧ್ಯಯನಕ್ಕೆ ಸ್ಕ್ರೀನ್ ರೀಡಿಂಗ್ ಸಾಫ್ಟ್‌ವೇರ್ ಬಳಸಿಕೊಂಡಿದ್ದೇವೆ’ ಎನ್ನುತ್ತಾರೆ ನಿತ್ಯಾನಂದ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT