ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ಜೊತೆ ಶಿಕ್ಷಣ ಪ್ರಸ್ತುತಗೊಳಿಸಿ: ಸಚಿವ ವಿ. ಮುರಳೀಧರನ್

ಮಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ
Last Updated 29 ಫೆಬ್ರುವರಿ 2020, 6:56 IST
ಅಕ್ಷರ ಗಾತ್ರ

ಮಂಗಳಾ ಗಂಗೋತ್ರಿ (ಮುಡಿಪು): ಪಾರಂಪರಿಕ ಜ್ಞಾನ ಹಾಗೂ ಈಗಿನ ಆದ್ಯತೆ ಮತ್ತು ಸವಾಲುಗಳಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ಕಾಲಕ್ಕೆ ಪ್ರಸ್ತುತಗೊಳಿಸುವ ಅವಶ್ಯಕತೆ ಇದೆ ಎಂದು ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 38ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

‘ಶಿಕ್ಷಣ ಎಂದರೆ ನೀವು ಜೀವನ ಪೂರ್ತಿ ದಂಗೆ ಏಳಲು, ಜೀರ್ಣವಾಗದೇ ಇರಲು ನಿಮ್ಮ ತಲೆಯಲ್ಲಿ ತುಂಬುವ ಮಾಹಿತಿ ಅಲ್ಲ. ಅದು ಬದುಕು ಕಟ್ಟುವ, ಮನುಷ್ಯನನ್ನು ರೂಪಿಸುವ, ವ್ಯಕ್ತಿತ್ವ ನಿರ್ಮಿಸುವ ಯೋಚನೆಗಳು’ ಎಂದು ಸ್ವಾಮಿ ವಿವೇಕಾನಂದ ಮಾತುಗಳನ್ನು ಉಲ್ಲೇಖಿಸಿದರು.

‘ವ್ಯಕ್ತಿತ್ವ ಇಲ್ಲದ ಜ್ಞಾನ, ವಿನಯ ಇಲ್ಲದ ವಿದ್ಯೆಯು ಅಪಾಯಕಾರಿ. ಮೌಲ್ಯಗಳೇ ಬದುಕನ್ನು ಉಜ್ವಲಗೊಳಿಸುತ್ತವೆ. ನೂತನ ಶಿಕ್ಷಣ ಪದ್ಧತಿಯು ಶಿಕ್ಷಣದಲ್ಲಿ ಪ್ರಧಾನ ಮೌಲ್ಯಗಳನ್ನು ನೀಡಲಿವೆ. ಅಲ್ಲದೇ, ಮಾಧ್ಯಮಿಕ ಶಿಕ್ಷಣದ ಬಳಿಕ ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ. ದೇಶದಲ್ಲಿ ಬಹುಶಿಸ್ತೀಯ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ’ ಎಂದರು.

‘ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅನುಭವವನ್ನು ಸೈದ್ಧಾಂತಿಕ, ಪ್ರಯೋಗಾತ್ಮಕವಾಗಿ ಬಳಸಿಕೊಂಡು ಸೃಜನಶೀಲರಾಗಬೇಕು. ಧನಾತ್ಮಕ ಯೋಚನೆ ಹೊಂದಬೇಕು. ನಮಗಿಂತಲೂ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಬೇಕು’ ಎಂದು ಹೇಳಿದರು.

ಉದ್ಯಮಿ ಕೆ.ಸಿ.ನಾಯ್ಕ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸಿ.ಎನ್. ಶಂಕರರಾವ್ ಹಾಗೂ ಶ್ರೀಪತಿ ತಂತ್ರಿ ಅವರಿಗೆ ಡಿ.ಲಿಟ್ ನೀಡಲಾಯಿತು. 105 ಸಂಶೋಧಕರು ಪಿಎಚ್‌.ಡಿ ಪಡೆದರು. 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 120 ಮಂದಿ ನಗದು ಪುರಸ್ಕಾರಕ್ಕೆ ಪಾತ್ರರಾದರು.

ಘಟಿಕೋತ್ಸವದ ವಿಧಿವಿಧಾನಗಳನ್ನು ಕುಲಪತಿ ಪ್ರೊ.ಪಿ.ಎಸ್‌. ಯಡಪಡಿತ್ತಾಯ ನೆರವೇರಿಸಿದರು. ಕುಲಸಚಿವ ಎ.ಎಂ. ಖಾನ್ ವಿಶ್ವವಿದ್ಯಾಲಯದ ಸಾಧನೆಗಳನ್ನು ಮುಂದಿಟ್ಟರು. ಪರೀಕ್ಷಾಂಗ ಕುಲಸಚಿವ ರವೀಂದ್ರಾಚಾರಿ ಹಾಗೂ ನಿಕಾಯಗಳ ಡೀನ್‌ಗಳಾದ ಪ್ರೊ.ಪಿ.ಎಲ್.ಧರ್ಮ (ಕಲಾ),ಡಾ.ಡಿ.ಶಿವಲಿಂಗಯ್ಯ (ವಿಜ್ಞಾನ ಮತ್ತು ತಂತ್ರಜ್ಞಾನ), ಡಾ.ಟಿ.ಎನ್.ಶ್ರೀಧರ್ (ವಾಣಿಜ್ಯ), ಡಾ.ಕಿಶೋರ್ ಕುಮಾರ್‌ ಸಿ.ಕೆ. (ಶಿಕ್ಷಣ), ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಪರಿಷತ್‌ ಸದಸ್ಯರು ಇದ್ದರು.

ಇದಕ್ಕೂ ಮೊದಲ ಮಂಗಳಾ ಸಭಾಂಗಣದ ಆವರಣದಲ್ಲಿ ನಿರ್ಮಿಸಲಾದ ಹುತಾತ್ಮ ಚೌಕವನ್ನು ಸಚಿವ ವಿ. ಮುರಳೀಧರನ್ ಉದ್ಘಾಟಿಸಿದರು. ಕ್ಯಾ. ಶರತ್ ಭಂಡಾರಿ ನೇತೃತ್ವದಲ್ಲಿ ಮಾಜಿ ಸೈನಿಕರು ಚೌಕಕ್ಕೆ ಗೌರವ ಸಲ್ಲಿಸಿದರು. ಈ ಬಾರಿ ಘಟಿಕೋತ್ಸವದ ವಸ್ತ್ರ ವಿನ್ಯಾಸ ಬದಲಾಗಿದ್ದು, ಖಾದಿ ರೇಷ್ಮೆ ಹಾಗೂ ಹೊಸ ಬಣ್ಣದ ವಿನ್ಯಾಸವು ಚೀನಾ, ಕೊರಿಯಾ, ಜಪಾನ್ ಕಲಾತ್ಮಕ ಸಿನಿಮಾಗಳ ವೇಷಭೂಷಣ ನೆನಪಿಸುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT