ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ. ಪರೀಕ್ಷೆ 10ರ ತನಕ ಮುಂದೂಡಿಕೆ

ಸೆಮಿಸ್ಟರ್ ಮುಂದೂಡದಂತೆ ಕಾಲೇಜುಗಳ ಪ್ರಾಧ್ಯಾಪಕರ ಮನವಿ
Last Updated 7 ಏಪ್ರಿಲ್ 2021, 14:27 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಏ.10ರ ತನಕ ಮುಂದೂಡಲಾಗಿದೆ.

‘ರಾಜ್ಯ ರಸ್ತೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಏ.8,9 ಮತ್ತು 10ರಂದು ನಡೆಯಲಿರುವ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ಪ್ರಜಾವಾಣಿ’ಗೆ ತಿಳಿಸಿದರು.

ಏ.10ರಂದು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದೆ. ಆ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.

ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ:

ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಕೋವಿಡ್–19 ಪ್ರಕರಣಗಳು ವರದಿಯಾದ ಕಾರಣ ತರಗತಿಗಳಿಗೆ ಎರಡು ವಾರಗಳ ಕಾಲ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಏ.15ರಿಂದ ನಡೆಸಲು ಉದ್ದೇಶಿಸಲಾಗಿದ್ದ ಸ್ನಾತಕೋತ್ತರ ತರಗತಿಗಳ ಪರೀಕ್ಷೆಯನ್ನು ಏ.27ರಿಂದ ನಡೆಸುವ ಸಾಧ್ಯತೆ ಇದೆ.

‘ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕೋವಿಡ್–19 ಪ್ರಕರಣಗಳು ಪತ್ತೆಯಾಗಿದ್ದು, ಎರಡು ವಾರಗಳ ತರಗತಿಗಳು ರದ್ದುಗೊಂಡಿದ್ದವು. ‌ಬಾಕಿ ಉಳಿದ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಸಲುವಾಗಿ ಎರಡು ವಾರಗಳ ಕಾಲ ತರಗತಿಗಳನ್ನು ನಡೆಸಲಾಗುವುದು. ಆ ಬಳಿಕ ಸ್ನಾತಕೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ವಿವರಿಸಿದರು.

‘ಇತರ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ತರಗತಿಗಳು ಯಥಾವತ್ತಾಗಿ ನಡೆದಿದ್ದರೆ, ಮಕ್ಕಳಿಗೆ ‘ಪಠ್ಯ ಪುನರಾವರ್ತನೆ ರಜೆ’ಯನ್ನು ನೀಡಬಹುದು. ಪಠ್ಯಕ್ರಮ ಪೂರ್ಣಗೊಳಿಸಿದ ಕಾಲೇಜುಗಳು (ಸ್ನಾತಕೋತ್ತರ ತರಗತಿ) ಈ ಬಗ್ಗೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮಾಹಿತಿ ನೀಡಿ, ಒಪ್ಪಿಗೆ ಪಡೆದುಕೊಳ್ಳಬೇಕು. ನಿಗದಿತ ಪಠ್ಯಕ್ರಮ, ಸಂಬಂಧಿತ ಪೂರ್ವಭಾವಿ ಪರೀಕ್ಷೆ ಹಾಗೂ ಇತರ ಪ್ರಕ್ರಿಯೆಗಳನ್ನು ನಡೆಸಿರುವ ಬಗ್ಗೆ ಕಾಲೇಜುಗಳು ವರದಿಯಲ್ಲಿ ಉಲ್ಲೇಖಿಸಬೇಕು’ ಎಂದೂ ಅವರು ತಿಳಿಸಿದರು.

ಮನವಿ:

ವಿಶ್ವವಿದ್ಯಾಲಯ ಆವರಣದಲ್ಲಿ ಮಾತ್ರ ಸೀಲ್‌ಡೌನ್ ಆಗಿದ್ದು, ಇತರ ಕಾಲೇಜುಗಳಲ್ಲಿ ಸ್ನಾತಕೋತ್ತರ ತರಗತಿಗಳು ಯಥಾವತ್ತಾಗಿ ನಡೆದಿವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಾವಳಿ ಪ್ರಕಾರ ಒಂದು ಸೆಮಿಸ್ಟರ್‌ನಲ್ಲಿ 90 ದಿನಗಳು ಇರಬೇಕು. ರಜೆಗಳು ಬರುವ ಕಾರಣ, ನಾಲ್ಕು ತಿಂಗಳ ಕಾಲ ಸೆಮಿಸ್ಟರ್‌ ಅನ್ನು ನಡೆಸಲಾಗುತ್ತದೆ.

ಈ ಬಾರಿ ಆಗಸ್ಟ್‌ನಿಂದ ನವೆಂಬರ್ 10ರ ತನಕ ಆನ್‌ಲೈನ್ ತರಗತಿಗಳು ನಡೆದಿದ್ದರೆ, ನವೆಂಬರ್ 11ರಿಂದ ಏಪ್ರಿಲ್ 9ರ ತನಕ (ಐದು ತಿಂಗಳು) ತರಗತಿಗಳು ನಡೆದಿವೆ. ಪರೀಕ್ಷೆ ಮುಂದೂಡಿಕೆಯು ಸಹಜ ನ್ಯಾಯವಾಗಿದೆ. ಆದರೆ, ಕಾಲೇಜುಗಳಲ್ಲಿನ ಸ್ನಾತಕೋತ್ತರ ತರಗತಿಗಳ ಅವಧಿಯನ್ನು ಮುಂದೂಡಬಾರದು. ಈ ಬಗ್ಗೆ ಗೌರವಾನ್ವಿತ ಕುಲಪತಿಗಳು ಆದೇಶಿಸಬೇಕು ಎಂದು ವಿವಿಧ ಕಾಲೇಜುಗಳು ಪ್ರಾಧ್ಯಾಪಕರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT