ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ‌ ಅಂಕ ಬಂದ ಕಾರಣಕ್ಕೆ‌ ಊರು ಬಿಟ್ಟ ವಿದ್ಯಾರ್ಥಿನಿಯರು ಚೆನ್ನೈಯಲ್ಲಿ ಪತ್ತೆ

ತಪ್ಪಿಸಿಕೊಂಡಿದ್ದ ವಿದ್ಯಾರ್ಥಿನಿಯರನ್ನು ಮರಳಿ ನಗರಕ್ಕೆ ಕರೆತಂದ ಪೊಲೀಸರು
Last Updated 24 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಮೇರಿಹಿಲ್‌ನಲ್ಲಿರುವ ಕಾಲೇಜಿನ ಹಾಸ್ಟೆಲ್‌ನಿಂದ ಸೆ. 20ರಿಂದ ನಾಪತ್ತೆಯಾಗಿದ್ದ ನಗರದ ಪದವಿ ಪೂರ್ವ ಕಾಲೇಜೊಂದರ‌ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ‌ ಪತ್ತೆಯಾಗಿದ್ದಾರೆ. ಮೊದಲ ಘಟಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಹತಾಶರಾಗಿ ಅವರು ಹಾಸ್ಟೆಲ್‌ನ ಕಿಟಿಕಿ ಸರಳುಗಳನ್ನು ಮುರಿದು ಪರಾರಿಯಾಗಿದ್ದರು’ ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ತಪ್ಪಿಸಿಕೊಂಡ ಬಳಿಕ ಅಭದ್ರತೆಯ ಭಯದಿಂದಾಗಿ ಎಲ್ಲಿಯೂ ಉಳಿದುಕೊಳ್ಳದೇ ಬಸ್ ಹಾಗೂ ರೈಲಿನಲ್ಲಿ ಸತತವಾಗಿ ಪ್ರಯಾಣಿಸಿದ್ದರು. ಅವರಲ್ಲಿ ಒಬ್ಬಾಕೆಯ ಸಂಬಂಧಿಕರು ಚೆನ್ನೈನಲ್ಲಿ ನೆಲೆಸಿದ್ದಾರೆ. ಹಾಗಾಗಿ ವಿದ್ಯಾರ್ಥಿನಿಯರು ಚೆನ್ನೈಗೆ ತೆರಳಲು ನಿರ್ಧರಿಸಿದ್ದರು. ಪ್ರಯಾಣದಲ್ಲಿ ಒಂದು ದಿನ ಕಳೆದ ಬಳಿಕ ಅವರಿಗೆ ತಪ್ಪಿನ ಅರಿವಾಗಿತ್ತು. ಪೋಷಕರನ್ನು ಸಂಪರ್ಕಿಸಲು ಅವರ ಬಳಿ ಮೊಬೈಲ್ ಕೂಡ ಇರಲಿಲ್ಲ. ಯಾವುದಾದರೂ ಪೊಲೀಸ್ ಠಾಣೆಗೆ ತಲುಪಿಸುವಂತೆ ಚೆನ್ನೈನ ಆಟೊರಿಕ್ಷಾ ಚಾಲಕರೊಬ್ಬರ ಬಳಿ ಕೇಳಿಕೊಂಡಿದ್ದರು. ಪೊಲೀಸ್ ಠಾಣೆಗೆ ತಲುಪಿದ ಬಳಿಕ ಪೋಷಕರನ್ನು ಸಂಪರ್ಕಿಸಿದ್ದರು.’

‘ಕಾಲೇಜಿನ ಹಾಸ್ಟೆಲ್‌ ಹಾಗೂ ರೈಲು ನಿಲ್ದಾಣಗಳ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ದಕ್ಷಿಣ ಎಸಿಪಿ ದಿನಕರ‌ ಶೆಟ್ಟಿ ನೇತೃತ್ವದ ಪೊಲೀಸರ ತಂಡಕ್ಕೆ ವಿದ್ಯಾರ್ಥಿನಿಯರು ಚೆನ್ನೈಗೆ ತೆರಳಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಚೆನ್ನೈಗೆ ತೆರಳಿದ್ದ ಪೊಲೀಸರ ತಂಡವು ಅಲ್ಲಿನ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ವಿದ್ಯಾರ್ಥಿಗಳು ಅಲ್ಲೇ ಇರುವುದು ಖಚಿತವಾದ ಬಳಿಕ ಚೆನ್ನೈಗೆ ಪೋಷಕರನ್ನು ಕರೆಸಿಕೊಂಡಿತ್ತು. ತಂಡವು ವಿದ್ಯಾರ್ಥಿನಿಯರನ್ನು ನಗರಕ್ಕೆ ಶುಕ್ರವಾರ ರಾತ್ರಿ ಕರೆತಂದಿದೆ’ ಎಂದರು.

‘ಪಿ.ಯು. ವಿದ್ಯಾರ್ಥಿಗಳ ಮೇಲೆ ಹೆಚ್ಚು ಅಂಕ ಪಡೆಯುವಂತೆ ಬಲವಂತ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಇದರಿಂದ ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ. ನಗರದ ಕೆಲವು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂರು ನಾಲ್ಕು ತಿಂಗಳು ಪೋಷಕರನ್ನು ಭೇಟಿ ಆಗದಂತೆ ನಿರ್ಬಂಧಿಸಲಾಗುತ್ತದೆ ಎಂಬ ದೂರುಗಳಿವೆ. ಇದು ಒಳ್ಳೆಯದಲ್ಲ. ವಿದ್ಯಾರ್ಥಿಗಳು ನಿಯಮಿತವಾಗಿ ಪೋಷಕರನ್ನು ಭೇಟಿಯಾಗಲು ಅವಕಾಶ ಕಲ್ಪಿಸಬೇಕು’ ಎಂದು ಕಮಿಷನರ್‌ ತಿಳಿಸಿದರು.

‘ನನ್ನ ಮಗಳು ಕಲಿಕೆಯಲ್ಲಿ ಚೆನ್ನಾಗಿದ್ದಳು. ಅವಳಿಗೆ ನಾವು ಒತ್ತಡ ಹೇರುತ್ತಿರಲಿಲ್ಲ. ಕಡಿಮೆ ಅಂಕ ಬಂದಿದ್ದರಿಂದ ಆತಂಕಕ್ಕೊಳಗಾಗಿದ್ದಳು. ಆಕೆಗೆ ಆಪ್ತಸಮಾಲೋಚನೆ ಮಾಡಿಸುತ್ತೇವೆ’ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರು, ‘ಎಲ್ಲ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಗಳು ಚೆನ್ನಾಗಿಯೇ ಇವೆ. ಬಹುಶಃ ಮೊದಲ ಘಟಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದನ್ನು ಅವರಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ. ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದ ಅವರು ಈ ಕಾರಣಕ್ಕಾಗಿಯೇ ತಪ್ಪಿಸಿಕೊಂಡು ಹೋಗುವ ಬಗ್ಗೆ ಆಲೋಚಿಸಿರಬಹುದು. ಕಾಲೇಜಿ‌ನಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಆಪ್ತಸಮಾಲೋಚನೆ ಆಯೋಜಿಸುತ್ತೇವೆ. ವಿದ್ಯಾರ್ಥಿಗಳು ಪೋಷಕರನ್ನು ಪ್ರತಿ ತಿಂಗಳೂ ಭೇಟಿಯಾಗಲು ಅವಕಾಶ ಕಲ್ಪಿಸುತ್ತೇವೆ. ಇಂತಹ ಘಟನೆ ಮರುಕಳಿಸಲು ಅವಕಾಶ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT