ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಇಮೇಲ್‌ನಲ್ಲಿ ಬೆದರಿಕೆ ಸಂದೇಶ

Published 4 ಮೇ 2024, 10:05 IST
Last Updated 4 ಮೇ 2024, 10:05 IST
ಅಕ್ಷರ ಗಾತ್ರ

ಮಂಗಳೂರು: ‘ವಿಮಾನ ನಿಲ್ದಾಣದಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಲಾಗಿದೆ. ಅವುಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುತ್ತೇವೆ’ ಎಂಬುದಾಗಿ ಬಜಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇ–ಮೇಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಸಂದೇಶ ಕಳುಹಿಸಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘2024ರ ಏಪ್ರಿಲ್‌ 29ರಂದು ಬೆಳಿಗ್ಗೆ 9.37ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇ–ಮೇಲ್‌ಗೆ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶಾ ಕೆ.ಜಿ ಅವರು ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 507ರನ್ವಯ (ಬೆದರಿಕೆ ಸಂದೇಶ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಇಲ್ಲಿನ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಮಂಗಳೂರು ವಿಮಾನ ನಿಲ್ದಾಣದ ಜೊತೆಗೆ ದೇಶದ ಸುಮಾರು 25 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡು ಬಂದಿದೆ. ಆರೋಪಿಯನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಅಪರಿಚಿತ ವ್ಯಕ್ತಿಯು ವಿಮಾನ ನಿಲ್ದಾಣಗಳ ಇ–ಮೇಲ್‌ಗಳು ಹಾಗೂ ವಿಮಾನ ನಿಲ್ದಾಣಗಳ ಭದ್ರತಾ ಏಜೆನ್ಸಿಯಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಸಂಬಂಧಿಸಿದ ಇ–ಮೇಲ್‌ಗಳೂ ಸೇರಿದಂತೆ 90ಕ್ಕೂ ಹೆಚ್ಚು ಇ–ಮೇಲ್‌ ವಿಳಾಸಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ’ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT