ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಸೆಂಟ್ರಲ್ ಪಿಟ್ ಲೈನ್ ಶೀಘ್ರ: ತ್ರಿಲೋಕ್ ಕೊಠಾರಿ

ರೈಲು ಸಪ್ತಾಹದಲ್ಲಿ ಪಾಲ್ಘಾಟ್ ವಿಭಾಗೀಯ ಪ್ರಬಂಧಕ ತ್ರಿಲೋಕ್‌ ಕೊಠಾರಿ
Last Updated 11 ಮೇ 2022, 16:18 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ನಿರ್ಮಿಸುತ್ತಿರುವ ಪಿಟ್ ಲೈನ್‌ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆ ಆಗಲಿದೆ ಎಂದು ದಕ್ಷಿಣ ರೈಲ್ವೆ ಪಾಲ್ಘಾಟ್ ವಿಭಾಗೀಯ ಮಹಾಪ್ರಬಂಧಕ ತ್ರಿಲೋಕ್ ಕೊಠಾರಿ ಹೇಳಿದರು.

ಪಾಲ್ಘಾಟ್‌ನಲ್ಲಿ ಬುಧವಾರ ನಡೆದ 67 ನೇ ರೈಲು ಸಪ್ತಾಹದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ರೈಲು ಬೋಗಿಗಳ ನಿಲುಗಡೆ ಆರಂಭವಾಗಲಿದೆ. 24 ಬೋಗಿ ಸಾಮರ್ಥ್ಯದ ಹೊಸ ಪಿಟ್‌ ಲೈನ್‌ನಿಂದ ಸೆಂಟ್ರಲ್‌ ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್‌ಫಾರಂಗಳ ನಿರ್ಮಾಣಕ್ಕೆ ಅನುಕೂಲ ಆಗಲಿದೆ ಎಂದರು.

ಪಾಲ್ಘಾಟ್‌ ನಿಲ್ದಾಣದಲ್ಲಿ ಸದ್ಯಕ್ಕಿರುವ 8 ಬೋಗಿ ಸಾಮರ್ಥ್ಯದ ಪಿಟ್‌ ಲೈನ್‌ ಅನ್ನು 12 ಬೋಗಿಯ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತಿದೆ. ಇದರ ಜೊತೆಗೆ 8 ಬೋಗಿಯ ಮತ್ತೊಂದು ಪಿಟ್‌ ಲೈನ್‌ ನಿರ್ಮಾಣ ಮಾಡಲಾಗುವುದು. ಇದರಿಂದ ಮೆಮು ಬೋಗಿಗಳ ನಿರ್ವಹಣೆಗೆ ಅಗತ್ಯ ಸೌಕರ್ಯ ಕಲ್ಪಿಸಿದಂತಾಗಲಿದೆ. ಈ ಮೂಲಕ ಕಡಿಮೆ ಅಂತರದ ಪ್ಯಾಸೆಂಜರ್‌ ರೈಲುಗಳಿಗೆ ಮೆಮು ಬೋಗಿಗಳನ್ನು ಅಳವಡಿಸಲು ಸಾಧ್ಯವಾಗಲಿದ್ದು, ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳ ಮೂಲಕ ಆಹ್ಲಾದಕರ ಪ್ರಯಾಣದ ಅನುಭವ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮಾವೇಲಿ ಎಕ್ಸ್‌ಪ್ರೆಸ್‌ಗೆ ಪ್ರಶಸ್ತಿ:

‌ಮಂಗಳೂರಿನ ಕೋಚ್‌ ಡಿಪೋದಲ್ಲಿ ನಿರ್ವಹಣೆ ಮಾಡಲಾಗುತ್ತಿರುವ ಮಂಗಳೂರು– ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್‌ ರೈಲು, ದಕ್ಷಿಣ ರೈಲ್ವೆ ವಲಯದಲ್ಲಿ ಅತ್ಯುತ್ತಮ ನಿರ್ವಹಣೆ ಹೊಂದಿದ ರೈಲು ಪ್ರಶಸ್ತಿಗೆ ಭಾಜನವಾಗಿದೆ. ಬೋಗಿಗಳ ಸ್ವಚ್ಛತೆ, ಸುರಕ್ಷತೆಗೆ ಹೆಚ್ಚಿನ ಆದ್ಯತೆ, ಪ್ರಯಾಣಿಕರ ಸೌಕರ್ಯಗಳಲ್ಲಿ ಉತ್ತಮ ಗುಣಮಟ್ಟವನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಲಾಗಿದೆ ಎಂದು ಕೊಠಾರಿ ತಿಳಿಸಿದರು.

ಒಟ್ಟುಪಾಲಂ ನಿಲ್ದಾಣದಲ್ಲಿ ಲಿಫ್ಟ್ ಅಳವಡಿಸಲಾಗಿದ್ದು, ಪ್ರಯಾಣಿಕರ ಉಪಯೋಗಕ್ಕೆ ಮುಕ್ತವಾಗಿವೆ. ಪಾಲ್ಘಾಟ್‌ ಜಂಕ್ಷನ್‌ ನಿಲ್ದಾಣದಲ್ಲಿ 3 ಲಿಫ್ಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ತಿರೂರ್‌, ಕ್ವಿಲಾಂಡಿ ನಿಲ್ದಾಣಗಳಲ್ಲಿ ತಲಾ ಎರಡು ಹಾಗೂ ಕಣ್ಣೂರು ನಿಲ್ದಾಣದಲ್ಲಿ ಒಂದು ಲಿಫ್ಟ್‌ ಅಳವಡಿಕೆ ಕಾರ್ಯ ಈ ವರ್ಷ ಪೂರ್ಣವಾಗಲಿದೆ. ಕೋಯಿಕ್ಕೋಡ್‌ ಮತ್ತು ಕಣ್ಣೂರು ನಿಲ್ದಾಣಗಳಲ್ಲಿ ಎರಡು ಎಸ್ಕಲೇಟರ್‌ಗಳ ಅಳವಡಿಕೆ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪಾಲ್ಘಾಟ್‌ ವಿಭಾಗದ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 206 ವೈಯಕ್ತಿ ಹಾಗೂ 12 ಸಮೂಹ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.

ಹೆಚ್ಚುವರಿ ವಿಭಾಗೀಯ ಪ್ರಬಂಧಕರಾದ ಆರ್. ರಘುರಾಮನ್‌, ಸಕ್ಕೀರ್ ಹುಸೇನ್‌, ದಕ್ಷಿಣ ರೈಲ್ವೆ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆ ದಿಯಾದೇವಿ ಕೊಠಾರಿ, ವಿಭಾಗದ ಹಿರಿಯ ಸಿಬ್ಬಂದಿ ಅಧಿಕಾರಿ ಎಂ.ಪಿ. ಲಿಪಿನ್‌ ರಾಜ್‌, ವಿವಿಧ ವಿಭಾಗಗಳ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿ, ವಿವಿಧ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಗುರಿ ಮೀರಿದ ಆದಾಯ ಗಳಿಕೆ

ಪಾಲ್ಘಾಟ್ ವಿಭಾಗವು ಕಳೆದ ಆರ್ಥಿಕ ವರ್ಷದಲ್ಲಿ ಗುರಿ ಮೀರಿದ ಆದಾಯ ಗಳಿಸಿದೆ. ಒಟ್ಟು ₹687.78 ಕೋಟಿ ಗುರಿ ಇದ್ದು, ವಿಭಾಗವು ₹926.91 ಕೋಟಿ ಆದಾಯ ಗಳಿಸಿದೆ ಎಂದು ತ್ರಿಲೋಕ ಕೊಠಾರಿ ತಿಳಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ 2.35 ಕೋಟಿ ಪ್ರಯಾಣಿಕರ ನಿರ್ವಹಣೆ ಮಾಡಲಾಗಿದೆ. ಇದು ಗುರಿಗಿಂತ ಶೇ 114 ರಷ್ಟು ಹೆಚ್ಚಾಗಿದೆ. ಟಿಕೆಟ್‌ ತಪಾಸಣೆಯ ಮೂಲಕ ಒಟ್ಟು ₹16.58 ಕೋಟಿ ಆದಾಯ ಗಳಿಸಿದ್ದು, ಇದು ಗುರಿಗಿಂತ ಶೇ 65ರಷ್ಟು ಹೆಚ್ಚಾಗಿದೆ. ಮಾರ್ಚ್ ಒಂದರಲ್ಲಿಯೇ ಒಟ್ಟು ₹2.16 ಕೋಟಿ ಆದಾಯ ಬಂದಿದೆ ಎಂದು ಹೇಳಿದರು.

ಕಲ್ಲಿದ್ದಲು ಸಾಗಣೆಗೆ ಕಳೆದ ವರ್ಷ 18.69 ಲಕ್ಷ ಟನ್ ಗುರಿ ಇದ್ದು, 19.24 ಲಕ್ಷ ಟನ್ ಕಲ್ಲಿದ್ದಲು ಸಾಗಣೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT