ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಮಂಗಳೂರು ದಸರಾ: ಜನಾರ್ದನ ಪೂಜಾರಿ

ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಆಡಳಿತ ಮಂಡಳಿ ನಿರ್ಧಾರ
Last Updated 10 ಸೆಪ್ಟೆಂಬರ್ 2020, 1:35 IST
ಅಕ್ಷರ ಗಾತ್ರ

ಮಂಗಳೂರು: ಮೈಸೂರು ದಸರಾದಂತೆ ಪ್ರಸಿದ್ಧಿಯಾಗಿರುವ ಮಂಗಳೂರು ದಸರಾವನ್ನು ಸರ್ಕಾರ ಮಾರ್ಗಸೂಚಿ ಪಾಲಿಸಿಕೊಂಡು ಈ ಬಾರಿಯೂ ಸಂಪ್ರದಾಯದಂತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಮಂಗಳೂರು ದಸರಾ ಉತ್ಸವದಲ್ಲಿ ಧಾರ್ಮಿಕ ನಂಬಿಕೆಯ ಜೊತೆಗೆ ಕರಾವಳಿಯ ಆರ್ಥಿಕ ಪುನಶ್ಚೇತನ ಅಡಗಿದೆ. ದಸರಾ ಸಂದರ್ಭ ಕೋವಿಡ್‌–19 ನಿಂದ ದೇಶ ಮುಕ್ತಗೊಳ್ಳುವ ನಿಟ್ಟಿನಲ್ಲಿ ವಿಶೇಷ ಪ್ರಾರ್ಥನೆಯೂ ನಡೆಯಲಿದೆ. ಯಾವುದೇ ಕಾರಣಕ್ಕೂ ಮಂಗಳೂರು ದಸರಾ ನಿಲ್ಲಿಸಬಾರದು. ಎಂದಿನಂತೆ ವೈಭವದಿಂದ ನಡೆಸಬೇಕು ಎಂದು ನಿರ್ಧರಿಸಲಾಗಿದೆ. ಇದು ಭಕ್ತರು, ಉದ್ಯಮಿಗಳು, ವ್ಯಾಪಾರಿಗಳು, ಹಿತೈಷಿಗಳ ವಲಯಗಳ ಅಭಿಪ್ರಾಯವೂ ಆಗಿದೆ.

ಈ ಕಾರಣದಿಂದ ಗಂಭೀರವಾಗಿ ಅಲೋಚಿಸಿದ ಆಡಳಿತ ಮಂಡಳಿ ಸರ್ಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕ ದಸರಾ ನಡೆಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ದಸರಾ ಮಹೋತ್ಸವದಲ್ಲಿ ಪ್ರತಿ ವರ್ಷದಂತೆ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸುರಕ್ಷಿತ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಇದಕ್ಕೆ ಭಕ್ತರ ಸಹಕಾರವೂ ಮುಖ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.

ಈ ಬಾರಿಯ ಮಂಗಳೂರು ದಸರಾದಲ್ಲಿ ಟ್ಯಾಬ್ಲೋ, ನವದುರ್ಗೆಯರ ಮೂರ್ತಿಗಳ ಮೆರವಣಿಗೆಯಿಲ್ಲ. ಕ್ಷೇತ್ರವನ್ನು ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು. ನಗರದಲ್ಲಿ ಯಾವುದೇ ಅಲಂಕಾರ ನಡೆಸದಿರಲು ನಿರ್ಧರಿಸಲಾಗಿದೆ.

‘ಮೂರ್ತಿ ರಚನೆ ಆರಂಭ’

ದಸರಾ ಮಹೋತ್ಸವದಲ್ಲಿ ಪೂಜಿಸಲಾಗುವ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಸುಮಾರು 10ಕ್ಕೂ ಅಧಿಕ ಕಲಾವಿದರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.

ನವರಾತ್ರಿ ಆರಂಭದಂದೇ ಗಣಪತಿ, ಶಾರದೆ ಸೇರಿದಂತೆ ಎಲ್ಲ ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ. ಕೊರೊನಾ ಸೋಂಕಿನ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಕ್ಷೇತ್ರದ ಆಡಳಿತ ಮಂಡಳಿಯ ಜತೆ ಭಕ್ತರ ಸಹಕಾರ ದೊಡ್ಡದು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT