ಸೋಮವಾರ, ಫೆಬ್ರವರಿ 24, 2020
19 °C
ಡಿ.19ರ ಮಂಗಳೂರು ಗೋಲಿಬಾರ್‌ ಪ್ರಕರಣ

ಎಸ್‌ಎಚ್‌ಆರ್‌ಸಿ ವಿಚಾರಣೆಗೆ ಎನ್‌ಎಚ್‌ಆರ್‌ಸಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಡಿಸೆಂಬರ್‌ 19ರಂದು ನಗರದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದ ವಿಚಾರಣೆಯನ್ನು ಸ್ಥಗಿತಗೊಳಿಸಿ, ಕಡತಗಳನ್ನು ತನಗೆ ವರ್ಗಾಯಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.

ಗೋಲಿಬಾರ್‌ನಲ್ಲಿ ಇಬ್ಬರ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಬಂಟ್ವಾಳ ಪುರಸಭೆಯ ಸದಸ್ಯರಾದ ಲುಕ್ಮಾನ್‌, ಮೂನಿಶ್‌ ಅಲಿ ಅಹ್ಮದ್, ಕಾಂಗ್ರೆಸ್‌ ಮುಖಂಡ ರಕ್ಷಿತ್‌ ಶಿವರಾಂ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕಿ ಲಾವಣ್ಯಾ ಬಲ್ಲಾಳ್‌ ಎಸ್‌ಎಚ್‌ಆರ್‌ಸಿಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಬೇಕಿತ್ತು.

ಮೃತ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಕುದ್ರೋಳಿ ಕುಟುಂಬದ ಸದಸ್ಯರು ಹಾಗೂ ಅರ್ಜಿದಾರರು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಮಾನವ ಹಕ್ಕುಗಳ ಆಯೋಗದ ಪೂರ್ಣಪೀಠದ ವಿಚಾರಣೆಗಾಗಿ ಹಾಜರಾಗಿದ್ದರು. ಘಟನೆಗೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನೂ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು.

ಸಿಎಎ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಎಲ್ಲ ಗೋಲಿಬಾರ್‌ ಪ್ರಕರಣಗಳನ್ನೂ ತನಗೆ ವರ್ಗಾಯಿಸುವಂತೆ ಎನ್‌ಎಚ್‌ಆರ್‌ಸಿ ನಿರ್ದೇಶನ ನೀಡಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿಯೂ ಪ್ರಕಟಿಸಿದರು.

‘ನಾವು ಹೊಸ ಸಾಕ್ಷ್ಯಗಳನ್ನು ಎಸ್‌ಎಚ್‌ಆರ್‌ಸಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ವಿವಿಧ ರಾಜ್ಯಗಳಲ್ಲಿ ನಡೆದಿರುವ ಗೋಲಿಬಾರ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಮಾನವ ಹಕ್ಕುಗಳ ಆಯೋಗದಲ್ಲಿ ವಿಚಾರಣೆ ನಡೆಸದಂತೆ ಎನ್‌ಎಚ್‌ಆರ್‌ಸಿ ನಿರ್ದೇಶನ ನೀಡಿದೆ. ಈ ಸಂಬಂಧ ಪತ್ರ ಬಂದಿರುವುದನ್ನು ತಿಳಿಸಿದ ಆಯೋಗದ ಅಧ್ಯಕ್ಷರು, ವಿಚಾರಣೆಯನ್ನು ಸ್ಥಗಿತಗೊಳಿಸಿದರು. ಪ್ರಕರಣದ ಕಡತವನ್ನು ಎನ್‌ಎಚ್‌ಆರ್‌ಸಿಗೆ ವರ್ಗಾಯಿಸಲಾಗುವುದು ಎಂಬುದನ್ನು ಪ್ರಕಟಿಸಿದರು’ ಎಂದು ಅರ್ಜಿದಾರರಾಗಿರುವ ರಕ್ಷಿತ್‌ ಶಿವರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು