ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋನ್ ಆ್ಯಪ್; ಆನ್‌ಲೈನ್‌ ವಂಚನೆ– ಇರಲಿ ಎಚ್ಚರ

‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್
Last Updated 20 ಸೆಪ್ಟೆಂಬರ್ 2022, 14:40 IST
ಅಕ್ಷರ ಗಾತ್ರ

ಮಂಗಳೂರು: ಲೋನ್‌ ಆ್ಯಪ್‌ಗಳು ವ್ಯಕ್ತಿಯ ಖಾತೆಗೆ ಒಂದೆರಡು ಸಾವಿರ ರೂಪಾಯಿ ಹಣ ಸಂದಾಯ ಮಾಡಿ, ನಂತರ ಬ್ಲ್ಯಾಕ್‌ಮೇಲ್ ಮಾಡುವ, ನಿರ್ದಿಷ್ಟ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರುವವರಿಗೆ ಅಶ್ಲೀಲ ಚಿತ್ರಗಳನ್ನು ಕಳಿಸುವ ಪ್ರಕರಣಗಳು ದೊಡ್ಡ ಸ್ಕ್ಯಾಮ್ ರೀತಿಯಲ್ಲಿ ನಡೆಯುತ್ತಿವೆ. ತಂತ್ರಜ್ಞಾನ ಬೆಳೆದಂತೆ ಬಳಕೆದಾರರು ಹೆಚ್ಚು ಜಾಗೃತರಾಗಬೇಕು...

ಹೀಗೆ ಎಚ್ಚರಿಕೆ ನೀಡಿದವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಿ, ಉತ್ತರಿಸಿದರು.

ತಂತ್ರಜ್ಞಾನದ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಅದನ್ನು ಬಳಸುವವರು ಅಪ್‌ಡೇಟ್‌ ಆಗುತ್ತಿಲ್ಲ. ಇದರಿಂದಾಗಿ ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ. ಹೊರರಾಜ್ಯ, ಹೊರ ದೇಶಗಳಲ್ಲಿ ಕುಳಿತು ಇಂತಹ ಅಪರಾಧ ಮಾಡುವ ಸಾಧ್ಯತೆಗಳು ಇರುತ್ತವೆ. ನೊಂದ ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣಗಳು ಘಟಿಸಿವೆ. ಜನರು ಯಾವುದೇ ಕಾರಣಕ್ಕೂ ನಕಲಿ ಲೋನ್ ಆ್ಯಪ್‌ಗಳು, ಲಿಂಕ್‌ಗಳಿಂದ ಮೋಸ ಹೋಗಬಾರದು. ಅಚಾತುರ್ಯವಾಗಿ ಹಣ ಕಳೆದುಕೊಂಡರೆ, ಪೊಲೀಸರಿಗೆ ಕೂಡಲೇ ದೂರು ನೀಡಬೇಕು. ಇಂತಹ ಪ್ರಕರಣಗಳ ಪತ್ತೆ ಕೊಂಚ ಜಟಿಲ. ಆದರೂ, ತಕ್ಷಣಕ್ಕೆ ಮಾಹಿತಿ ದೊರೆತರೆ ಪತ್ತೆ ಕಾರ್ಯಕ್ಕೆ ಪ್ರಯತ್ನಿಸಬಹುದು. ಕಾನೂನು ಹೋರಾಟದ ಬಗ್ಗೆ ಯೋಚಿಸಬಹುದು. ಹೀಗೆ ಮೋಸ ಹೋಗಿದ್ದ ನನ್ನ ಪರಿಚಯದ ಹುಡುಗನ ಕಾಂಟೆಕ್ಟ್ ಲಿಸ್ಟ್‌ ಹ್ಯಾಕ್ ಆಗಿ, ಒಮ್ಮೆ ನನಗೂ ಇಂತಹ ಸಂದೇಶ ಬಂದಿರುವ ಅನುಭವ ಇದೆ ಎಂದು ಸಾರ್ವಜನಿಕರೊಬ್ಬರ ಪ್ರಶ್ನೆಗೆ ಅವರು ಉದಾಹರಣೆ ಸಹಿತ ವಿವರಿಸಿದರು.

ಸಾರ್ವಜನಿಕರು ಕೇಳಿದ ಪ್ರಶ್ನೆ ಮತ್ತು ಕಮಿಷನರ್‌ ಅವರ ಉತ್ತರ ಇಲ್ಲಿದೆ.

( ಗಾಂಜಾ ಸೇವನೆ ಪ್ರಕರಣ ಹೆಚ್ಚುತ್ತಿದೆ. ಯಾವ ರೀತಿಯಲ್ಲಿ ಬರುತ್ತಿದೆ, ಕೋರಿಯರ್ ಪಾರ್ಸಲ್ ಮೂಲಕ ಕೂಡ ಬರಬಹುದಾ ಎಂದು ಪರಿಶೀಲಿಸಬೇಕಾಗಿದೆ.

–ಎರಡು ವರ್ಷಗಳಲ್ಲಿ ಕಮಿಷನರೇ‌ಟ್ ವ್ಯಾಪ್ತಿಯಲ್ಲಿ 300ರಷ್ಟು ಪ್ರಕರಣಗಳನ್ನು ದಾಖಲಿಸಿ, 400ಕ್ಕೂ ಹೆಚ್ಚು ಪೆಡ್ಲರ್‌ಗಳು, ಬಳಕೆದಾರರನ್ನು ಬಂಧಿಸಲಾಗಿದೆ. ಅಫೀಮು, ಕೊಕೇನ್, ಹೈಡ್ರೋವಿಡ್‌ನಂತಹ ಸಿಂಥೆಟಿಕ್ ಡ್ರಗ್‌ ಸೇವನೆ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಜಲ, ವಾಯು, ರಸ್ತೆ ಮಾರ್ಗ ಹೀಗೆ ಸುಲಭ ಸಂಪರ್ಕ ಸಾಧ್ಯತೆ, ರಾಜ್ಯದ ಗಡಿ ಪ್ರದೇಶ, ಹೊರ ರಾಜ್ಯಗಳಿಂದ ವಿದ್ಯಾಭ್ಯಾಸ– ಉದ್ಯೋಗಕ್ಕೆ ಬರುವವರು ಹೆಚ್ಚು ಇರುವ ಕಾರಣ ಗಾಂಜಾ ಸಾಗಣೆ ನಿಯಂತ್ರಣಕ್ಕೆ ವಿಶೇಷ ನಿಗಾ ವಹಿಸಲಾಗಿದೆ.

ಸೈಬರ್ ಅಪರಾಧ ಹೆಚ್ಚುತ್ತಿದ್ದು, ಇದಕ್ಕಾಗಿ ಸೆನ್ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಅನಾಮಧೇಯ ಕರೆಗಳು ಬಂದಾಗ ಒಟಿಪಿ, ಪಾಸ್‌ಬುಕ್ ಸಂಖ್ಯೆ ಮೊದಲಾದ ಗೌಪ್ಯ ಮಾಹಿತಿಗಳನ್ನು ನೀಡಿ ಮೋಸ ಹೋಗಬಾರದು.

( ಮಾದಕ ದ್ರವ್ಯಗಳು ಮಕ್ಕಳ ಕೈಗೆ ಸಿಗುತ್ತಿವೆ, ಅವರ ಭವಿಷ್ಯದ ಬಗ್ಗೆ ಆತಂಕವಾಗಿದೆ.

– ಈ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಹಲವಾರು ಪ್ರಕರಣಗಳಲ್ಲಿ ಮಕ್ಕಳು ಕೂಡ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಮಾಹಿತಿ ಬಹಿರಂಗಗೊಳಿಸಿಲ್ಲ. ಈ ಸಂಬಂಧ ಇಲಾಖೆ ಆಂತರಿಕವಾಗಿ ಕೆಲಸ ಮಾಡುತ್ತಿದೆ. ತೆಲಂಗಾಣದಹೈದರಾಬಾದ್‌ ಸೇರಿದಂತೆ ಆ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಬಂದಿದ್ದ ಮಾದಕ ವಸ್ತುಗಳನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿದೆ. ಬೇರೆ ಮಾರ್ಗದಲ್ಲೂ ಬರುತ್ತಿರುವ ಮಾಹಿತಿಗಳಿವೆ. ಗಡಿಭಾಗದಲ್ಲಿ 13–14 ಮಾರ್ಗಗಳು, ಕಾಲುದಾರಿಗಳು ಇದ್ದು, ಇವುಗಳ ಮೇಲೆಯೂ ನಿಗಾವಹಿಸಲಾಗುತ್ತಿದೆ. ಇಲಾಖೆಯ ಫೋನ್ ಇನ್ ಕಾರ್ಯಕ್ರಮ ಪುನರಾರಂಭಕ್ಕೆ ಯೋಚಿಸಲಾಗುವುದು.

( ಪಿಜಿ ವಿದ್ಯಾರ್ಥಿಗಳ ಮೇಲೆ ನಿಗಾವಹಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತಿದೆ, ಪೊಲೀಸ್ ಚೆಕ್‌ಪೋಸ್ಟ್‌ಗಳ ಕಾರ್ಯನಿರ್ವಹಣೆ ಹೇಗೆ?

– ಇಲಾಖೆಯಿಂದ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವೆಡೆ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ. ಕಂಟ್ರೋಲ್‌ ರೂಮ್ ರೀತಿಯಲ್ಲಿ ಒಂದೇ ಕಡೆ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಡಲು ಯೋಚಿಸಲಾಗಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯಂತಹ ಪ್ರಕರಣ ಪತ್ತೆ ಸಾಧ್ಯವಾಗುತ್ತದೆ. ಈ ಹಿಂದೆ ನಡೆದ ಅಪರಾಧ ಪ್ರಕರಣಗಳ ಪತ್ತೆಗೂ ಸಿಸಿಟಿವಿ ಕ್ಯಾಮೆರಾ ಫೂಟೇಜ್ ನೆರವಾಗಿದೆ.

ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಘಟನೆ, ಸಂದರ್ಭ ಆಧರಿಸಿ ಸ್ಥಾಪಿಸಲಾಗುತ್ತದೆ. ವಿದ್ಯಾರ್ಥಿಗಳು ನೆಲೆಸುವ ಪಿಜಿಗಳ ದಾಖಲೆಗಳನ್ನು ಠಾಣೆಗಳಲ್ಲಿ ಕಾಯ್ದಿಡುವಂತೆ ಸೂಚಿಸಲಾಗಿದೆ. ಈ ಹಿಂದೆ ಕೆಲವು ಪಿಜಿಗಳಲ್ಲಿ ಪೋಕ್ಸೊ, ಡ್ರಗ್ಸ್, ಹೊಡೆದಾಟ ಪ್ರಕರಣಗಳು ದಾಖಲಾಗಿರುವ ಕಾರಣ, ಅಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.

( ಬಸ್‌ಗಳ ವೇಗದ ಚಾಲನೆ, ಬಾಗಿಲು ಇಲ್ಲದ ಬಸ್‌ಗಳಿಂದ ಜೀವ ಕಳೆದುಕೊಳ್ಳುವ ಸಂದರ್ಭ ಇದೆ. ಸದ್ಯ ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ಇದರ ಬಗ್ಗೆ ಕ್ರಮ ಏನು?

– ಯಶ್‌ರಾಜ್ ಎಂಬ ಹುಡುಗ ಬಸ್‌ನಿಂದ ಬಿದ್ದು ಗಾಯಗೊಂಡ ಸಂದರ್ಭದಲ್ಲಿ ಬಸ್ ಚಾಲಕ, ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಬಸ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಬಾಗಿಲುಗಳಿಲ್ಲದ ಬಸ್‌ಗಳ ಮಾಹಿತಿ ಸಂಗ್ರಹಿಸಲು ಎಸಿಪಿ ಟ್ರಾಫಿಕ್ ಅವರಿಗೆ ಸೂಚಿಸಲಾಗಿದೆ. ಸದ್ಯದಲ್ಲಿ ನನ್ನ ನೇತೃತ್ವದಲ್ಲಿ ಬಸ್ ಮಾಲೀಕರ ಸಭೆ ಕರೆದು ಸೂಚನೆ ನೀಡಲಾಗುತ್ತದೆ. ಯುವಕರಿಗೆ ಬಾಗಿಲಿನಲ್ಲಿ ನಿಂತುಕೊಳ್ಳುವ ಹುಮ್ಮಸ್ಸು ಇರುತ್ತದೆ. ಪೋಷಕರು ಕೂಡ ಮಕ್ಕಳಿಗೆ ತಿಳಿಹೇಳಬೇಕು. ಯಶ್‌ರಾಜ್ ಸಾವಿನ ನಂತರ ಅಂಗಾಗ ದಾನ ಮಾಡುವ ಮೂಲಕ ನಿಮ್ಮ ಕುಟುಂಬದವರು ಸಾರ್ಥಕತೆ ತೋರಿದ್ದಾರೆ. ವಿದ್ಯಾರ್ಥಿಯ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಇಲಾಖೆ ಮಾಡುತ್ತದೆ.

( ಬಸ್‌ಗಳ ಕರ್ಕಶ ಹಾರ್ನ್‌, ಎರಡೂ ಸೈಡ್‌ಗಳಲ್ಲಿ ಓವರ್‌ಟೇಕ್ ಮಾಡುವ ಪ್ರಕರಣಗಳು, ಗ್ರಾಮೀಣ ಭಾಗದಲ್ಲಿ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವ ಪ್ರಕರಣಗಳು ಕಾಣುತ್ತಿದ್ದು, ಕ್ರಮವಹಿಸಬೇಕು.

– ಖಾಸಗಿ ಬಸ್ ಮಾಲೀಕರ ಸಭೆ ಕರೆದು ನಿರ್ದೇಶನ ನೀಡಲಾಗುವುದು. ಹಾರ್ನ್‌ ಬಗ್ಗೆ ವಿಶೇಷ ಡ್ರೈವ್ ಮಾಡಿ, ಕರ್ಕಶ ಸದ್ದು ಬರುವ ಹಾರ್ನ್‌ಗಳನ್ನು ತೆಗೆಸಲಾಗುವುದು.

( ಕಂಕನಾಡಿಯಿಂದ ಜ್ಯೋತಿವರೆಗೆ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬಸ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಾರೆ.

– ಈ ಬಗ್ಗೆ ಈಗಾಗಲೇ ದೂರು ಬಂದಿದ್ದು, ಪರಿಶೀಲಿಸಲಾಗುವುದು.

( ಪೊಲೀಸ್ ಬೀಟ್ ವ್ಯವಸ್ಥೆ ಹೇಗೆ ನಡೆಯುತ್ತಿದೆ, ಕೆಲವು ಪಬ್‌, ಬಾರ್‌ಗಳು ಸಮಯ ಮೀರಿ ನಡೆಯುತ್ತವೆ.

– ಪ್ರತಿ ಠಾಣೆಗೆ ಹೊಯ್ಸಳ ವಾಹನ ಇದ್ದು, ‘112 ವಾಹನಗಳು’ ಒಟ್ಟು 19ಇವೆ. ಇದು 24X7 ಅವಧಿಯಲ್ಲಿ ಸೇವೆಯಲ್ಲಿರುತ್ತದೆ. ಇದಕ್ಕೆ ಮಾಡಿದ ಪ್ರತಿ ಕರೆಯನ್ನು ದಾಖಲಿಸಲಾಗುತ್ತದೆ. ಹಗಲು– ರಾತ್ರಿ ಬೀಟ್ ಜತೆಗೆ, ಇ– ಬೀಟ್ ವ್ಯವಸ್ಥೆ ಕೂಡ ಜಾರಿಗೊಳಿಸಲಾಗಿದೆ. ಪಬ್, ಬಾರ್, ಕೆಲವು ಹೋಟೆಲ್‌ಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು. ಸಮಯ ಮೀರಿ ಕಾರ್ಯನಿರ್ವಹಿಸಿದರೆ ಪರಿಶೀಲಿಸಲಾಗುವುದು.

( ಹರೇಕಳ, ಕೊಣಾಜೆ, ಉಳ್ಳಾಲ ಭಾಗದಲ್ಲಿ ಗಾಂಜಾ ಮಾರಾಟ ನಡೆಯುವ ದೂರುಗಳು ಇವೆ.

– ನಾನೇ ಈ ಭಾಗಕ್ಕೆ ಬಂದು ಸಭೆ ನಡೆಸುತ್ತೇನೆ. ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಅವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು.

( ಜ್ಯೋತಿ ವೃತ್ತದಿಂದ ಈಚೆಗೆ ಜ್ಯೂಸ್ ಜಂಕ್ಷನ್ ಸುತ್ತಮುತ್ತ ವಾಹನ ನಿಲುಗಡೆಯಿಂದ ಕಿರಿಕಿರಿಯಾಗುತ್ತಿದೆ.

– ಈ ಬಗ್ಗೆ ಕ್ರಮವಹಿಸಲಾಗುವುದು.

( ಮರಳು ಮಾಫಿಯಾ ಜೋರಾಗಿದ್ದು, ನಿಯಂತ್ರಣಕ್ಕೆ ಕ್ರಮವಾಗಬೇಕು.

– ಉಳ್ಳಾಲ, ಕೊಣಾಜೆ ಭಾಗದಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾನೇ ಖುದ್ದಾಗಿ ಇದರ ಬಗ್ಗೆ ಗಮನಹರಿಸುತ್ತೇನೆ.

( ನಗರದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ. ಪಾರ್ಕಿಂಗ್, ಟ್ರಾಫಿಕ್‌ ಸಮಸ್ಯೆ ಸೃಷ್ಟಿಸುತ್ತಿದೆ.

– ಕಾಲುದಾರಿ ಅತಿಕ್ರಮಣ, ಬಸ್‌ಗಳನ್ನು ಎಲ್ಲೆಂದೆರಲ್ಲಿ ನಿಲ್ಲಿಸುವುದು, ರಸ್ತೆ ವಿಸ್ತರಣೆ ಆದಲ್ಲಿ ಕಾರುಗಳನ್ನು ನಿಲ್ಲಿಸುವ ಬಗ್ಗೆ ಕ್ರಮ ವಹಿಸಲಾಗುವುದು. ಮಹಾನಗರ ಪಾಲಿಕೆ ಜತೆ ಸೇರಿ ಕಾಲುದಾರಿ ಅತಿಕ್ರಮಣ ತೆರವು ಸಂಬಂಧ ವಿಶೇಷ ಅಭಿಯಾನ ಮಾಡುತ್ತೇವೆ.

( ಮಂಗಳಮುಖಿಯರ ವೇಷ ಹಾಕಿಕೊಂಡು ಬಂದು ಕೆಲವರು ಭಿಕ್ಷೆ ಬೇಡುತ್ತಾರೆ, ಜನರಿಗೆ ಕಿರಿಕಿರಿ ಮಾಡುತ್ತಾರೆ.

– ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.

( ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳುವುದರಿಂದ ಸಂಚಾರ ಸಮಸ್ಯೆ ಕಿರಿಕಿರಿ ಹುಟ್ಟಿಸುತ್ತಿದೆ.

– ಅಗತ್ಯ ಕ್ರಮ ಕೈಗೊಳ್ಳಲಾಗುವುದು.

( ಮದ್ಯ ಸೇವನೆ ಮಾಡಿದವರನ್ನು ರಸ್ತೆ ಮೇಲೆ ಬರಲು ಬಿಡಬಾರದು, ಬಾರ್‌ಗಳಿಂದ ಹೊರ ಬಂದ ಕೂಡಲೇ ಹಿಡಿದರೆ, ಅಪಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ.

– ಇದನ್ನು ಪರಿಗಣಿಸಲಾಗುವುದು. ಮುಖ್ಯ ರಸ್ತೆಯ ಜಂಕ್ಷನ್‌ಗಳಲ್ಲಿ ಪೊಲೀಸರು ವಾಚ್ ಮಾಡುತ್ತಾರೆ.

ಕರೆ ಮಾಡಿ ಪ್ರಶ್ನೆ ಕೇಳಿದವರು: ಪ್ರಕಾಶ್‌ ಪಡಿಯಾರ್ ಮರವಂತೆ, ಜಯಪ್ರಕಾಶ ಎಕ್ಕೂರು, ನಿರಂಜನ್ ಸುರತ್ಕಲ್, ವಾಸುದೇವ್, ಮನ್ಸೂರ್ ಕಂಕನಾಡಿ, ವಿಕ್ರಾಂತ್ ಕೊಂಚಾಡಿ, ಯಾಕೂಬ್ ಕಲ್ಲಡ್ಕ, ಇಮ್ತಿಯಾಝ್,ಜಿ.ಕೆ.ಭಟ್, ರಮ್ಯಾ ಅತ್ತಾವರ, ಉಸ್ಮಾನ್ ಮರಕಡ, ಅಭಿಷೇಕ್ ತೊಕ್ಕೊಟ್ಟು, ಡಾ. ಸುರೇಶ್, ರಾಜಶೇಖರ ಬೆಳ್ತಂಗಡಿ, ಷರಶ್ಚಂದ್ರ ಮತ್ತಿತರರು.

ಹಿರಿಯ ನಾಗರಿಕರ ಸಭೆ

ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಇರುವ ಹಿರಿಯ ನಾಗರಿಕರನ್ನು ಭೇಟಿ ಮಾಡಿ, ಮನೆಯಲ್ಲಿ ಒಬ್ಬಂಟಿಯಾಗಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಒಂದೆರಡು ವಾರದಲ್ಲಿ ಆಯ್ದ ಹಿರಿಯ ನಾಗರಿಕರನ್ನು ಕರೆದು ಸಭೆ ನಡೆಸಲು ಯೋಚಿಸಲಾಗಿದೆ. ಇಲಾಖೆ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಉಳಿದ ಇಲಾಖೆ ಸಮಸ್ಯೆ ಇದ್ದರೂ ಅವರ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗುವುದು.

ಉದ್ಯೋಗಕ್ಕಾಗಿ ಹೊರದೇಶಗಳಿಗೆ ಹೋದ ಈ ಭಾಗದ ಹಲವರ ಪಾಲಕರು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಾರೆ. ಹಿರಿಯ ನಾಗರಿಕರಿಗೆ ಅಭದ್ರತೆ ಕಾಡಬಾರದು, ಸಮಸ್ಯೆಯಾದರೆ ಇಲಾಖೆಗೆ ಕರೆ ಮಾಡಬೇಕು ಎನ್ನುವ ವಾತಾವರಣ ಸೃಷ್ಟಿಸಲು ಇಲಾಖೆ ಜನಸ್ನೇಹಿ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT