ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಾ ಮಹೋತ್ಸವ: ವೈಭವದ ಶೋಭಾಯಾತ್ರೆ

ವಸಂತ ಮಂಟಪದಲ್ಲಿ ನಡೆದ ಧಾರ್ಮಿಕ ಕಾರ್ಯಗಳು; ಸಾಂಸ್ಕ್ರತಿಕ ವೈವಿಧ್ಯದ ರಂಗು; ಹೆಜ್ಜೆ ಹಾಕಿದ ಮಕ್ಕಳು
Last Updated 7 ಅಕ್ಟೋಬರ್ 2022, 5:53 IST
ಅಕ್ಷರ ಗಾತ್ರ

ಮಂಗಳೂರು: ದಸರೆಯ ಸೊಬಗಿಗೆ ಶತಮಾನದ ಸಂಭ್ರಮದ ರಂಗು ತುಂಬಿದ ಮಂಗಳೂರು ಶ್ರೀ ಶಾರದಾ ಮಹೋತ್ಸವದ ಕೊನೆಯ ದಿನವಾದ ಗುರುವಾರ ರಾತ್ರಿ ವೈಭವದ ಶೋಭಾಯಾತ್ರೆ ನಡೆಯಿತು. ಬೆಳಕಿನ ವೈಭವದಲ್ಲಿಹಗಲಿನಂತೆ ಶೋಭಿಸಿದ ಬೀದಿಗಳಲ್ಲಿ ನಡೆದ ಮೆರವಣಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ಆವರಣದಲ್ಲಿ ನಡೆಯುವ ಶಾರದಾ ಮಹೋತ್ಸವ ಜಿಲ್ಲೆಯ ಹೆಸರಾಂತ ಉತ್ಸವಗಳಲ್ಲಿ ಒಂದಾಗಿದ್ದು ಐತಿಹಾಸಿಕವಾಗಿ ಮಹತ್ವ ಗಳಿಸಿದೆ. 100ನೇ ವರ್ಷದ ಕಾರ್ಯಕ್ರಮಗಳು ಈ ಬಾರಿ ಭಕ್ತಿಭಾವದಿಂದ ನಡೆದಿದ್ದವು. ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆಗೂ ಮೊದಲು ಆಚಾರ್ಯ ಮಠದ ನೂತನ ವಸಂತ ಮಂಟಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಳು ನಡೆದವು. ‌

ಸರ್ವಾಭರಣಭೂಷಿತೆಯಾದ ಮತ್ತು ವೀಣೆಯನ್ನು ಕೈಯಲ್ಲಿ ಹಿಡಿದಿರುವ ಶಾರದೆಯ ಮೂರ್ತಿ ಮುಂದೆ ಸಾಗುತ್ತಿದ್ದಂತೆ ಭಕ್ತರು ಕಾಣಿಕೆಯಾಗಿ ನೀಡಿದ ನವಿಲಿನ ಮೂರ್ತಿಯೂ ಇತ್ತು. ಶಾರದಾ ಮಾತಾ, ಅಂಬಾ ಭವಾನಿಗೆ ಜಯಘೋಷ ಮೊಳಗಿತು. ವಾದ್ಯಘೋಷಗಳ ಹಿಮ್ಮೇಳ ದೊಂದಿಗೆ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಆರಂಭಗೊಂಡಾಗ ಭಕ್ತರು ಸಂಭ್ರಮದಲ್ಲಿ ಹೆಜ್ಜೆ ಹಾಕಿದರು. ಪಾಲಕರ ಹೆಗಲ ಮೇಲೆ ನಿಂತ ಪುಟಾಣಿಗಳು ಅಲ್ಲೇ ಕುಣಿದರು. ಮಕ್ಕಳು ಕುಣಿದು ಕುಪ್ಪಳಿಸಿದರು.ಅರ್ಥ ತಾಸಿನ ನಂತರ ಶೋಭಾಯಾತ್ರೆಯು ದೇವಳದ ಆವರಣದಿಂದ ರಥಬೀದಿಗೆ ತಲುಪಿತು. ಅಲ್ಲಿ ತೆರೆದ ವಾಹನದಲ್ಲಿ ದೃಶ್ಯರೂಪಕ ಗಮನ ಸೆಳೆಯಿತು. ಹುಲಿ ಕುಣಿತ ಮತ್ತು ಹುಲಿವೇಷಧಾರಿಗಳ ಕಸರತ್ತು ರೋಮಾಂಚನ ಉಂಟುಮಾಡಿತು. ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ ಮೂಲಕ ಮೆರವಣಿಗೆ ಸಾಗಿತು.

ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಆಚಾರ್ಯಮಠದ ಪಂಡಿತ್ ನರಸಿಂಹ ಆಚಾರ್ಯ, ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಕೆ.ಗಣೇಶ್ ಕಾಮತ್ ಮತ್ತಿತರರು ಇದ್ದರು.

ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ವೈದಿಕರು ಮತ್ತು ಇತರರ ದೂರದರ್ಶಿ ಆಲೋಚನೆಯ ಫಲ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ. ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಹತ್ತು ದಿನ ವಿವಿಧ ಅವತಾರಗಳ ಅಲಂಕಾರಗಳನ್ನು ಮಾಡಲಾಗಿತ್ತು. ಸಹಸ್ರಾರು ಭಕ್ತರು ಕುಂಕುಮಾರ್ಚನೆ, ರಂಗಪೂಜೆ, ಸಹಸ್ರ ಚಂಡಿಕಾ ಮಹಾಯಾಗ, ವಿದ್ಯಾರಂಭ ನೆರವೇರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT