ಬುಧವಾರ, ಡಿಸೆಂಬರ್ 1, 2021
20 °C

ವಿಜಯಪುರ–ಮಂಗಳೂರು ರೈಲು ನ.1 ರಿಂದ ಪುನರಾರಂಭ: ಮೊದಲಿನ ವೇಳಾಪಟ್ಟಿಯಲ್ಲೇ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಜಯಪುರ–ಮಂಗಳೂರು ಜಂಕ್ಷನ್‌ ದೈನಂದಿನ ರೈಲು ಸಂಚಾರ ನವೆಂಬರ್ 1 ರಿಂದ ಪುನರಾರಂಭ ಆಗಲಿದೆ. ಆದರೆ, ಮೊದಲಿನ ವೇಳಾಪಟ್ಟಿಯಲ್ಲಿ ಈ ರೈಲು ಸಂಚರಿಸಲಿದೆ. ಈ ರೈಲು ಸಂಚಾರದ ಸಮಯದಲ್ಲಿ ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಹೆಚ್ಚಿನ ರೈಲು ದಟ್ಟಣೆ ಇರುವುದರಿಂದ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ.

ರೈಲು ಬಳಕೆದಾರರ ಸಂಘ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್‌ ಅವರು, ರೈಲ್ವೆ ಸಚಿವರನ್ನು ಭೇಟಿ ಮಾಡಿ, ವಿಜಯಪುರ–ಮಂಗಳೂರು ಜಂಕ್ಷನ್‌ ರೈಲು ಸಂಜೆ 4.30 ರ ಬದಲು ಸಂಜೆ 5.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡುವಂತೆ ಮನವಿ ಮಾಡಿದ್ದರು. ಜೊತೆಗೆ ಮಧ್ಯಾಹ್ನ 12.40 ರ ಬದಲು ಬೆಳಿಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್‌ ನಿಲ್ದಾಣ ತಲುಪುವಂತೆ ಒತ್ತಾಯಿಸಿದ್ದರು.

ಈ ರೈಲು ಮಧ್ಯಾಹ್ನ ಮಂಗಳೂರಿಗೆ ಬರುತ್ತಿದ್ದು, ಇದರಿಂದ ಕಚೇರಿಗೆ ಕೆಲಸಗಳಿಗೆ ಹೋಗುವ ಹಾಗೂ ಇನ್ನಿತರ ಕೆಲಸಗಳಿಗೆ ತೆರಳುವ ಜನರಿಗೆ ತೊಂದರೆ ಆಗುತ್ತಿದೆ. ಜೊತೆಗೆ ಸಂಜೆ 5.30ಕ್ಕೆ ಮಂಗಳೂರಿನಿಂದ ಹೊರಟರೆ, ಜನರು ಆ ದಿನದ ಕೆಲಸ ಕಾರ್ಯಗಳನ್ನು ಮುಗಿಸಲು ಅನುಕೂಲ ಆಗಲಿದೆ ಎಂದು ತಿಳಿಸಿದ್ದರು.

ಆದರೆ, ಈ ವೇಳಾಪಟ್ಟಿಯಲ್ಲಿ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಮೊದಲಿನ ವೇಳಾಪಟ್ಟಿಯಲ್ಲಿಯೇ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ವಿಜಯಪುರ–ಮಂಗಳೂರು ಜಂಕ್ಷನ್‌ (ರೈ.ಸಂ. 07327) ರೈಲು ಸಂಜೆ 6 ಗಂಟೆಗೆ ವಿಜಯಪುರದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಬರಲಿದೆ. ಸಂಜೆ 7.40ಕ್ಕೆ ಬಾಗಲಕೋಟೆ, ರಾತ್ರಿ 8.30ಕ್ಕೆ ಗದಗ, 11.45ಕ್ಕೆ ಹುಬ್ಬಳ್ಳಿ, ಮಧ್ಯರಾತ್ರಿ 1.20ಕ್ಕೆ ಕರ್ಜಗಿ, ಬೆಳಿಗ್ಗೆ 7.30ಕ್ಕೆ ಸಕಲೇಶಪುರ, ಬೆಳಿಗ್ಗೆ 10.25ಕ್ಕೆ ಸುಬ್ರಹ್ಮಣ್ಯ ರೋಡ್‌, 11.12ಕ್ಕೆ ಕಬಕ ಪುತ್ತೂರು, 11.42ಕ್ಕೆ ಬಂಟ್ವಾಳ ನಿಲ್ದಾಣಗಳಿಗೆ ಬರಲಿದೆ.

ಮಂಗಳೂರು ಜಂಕ್ಷನ್– ವಿಜಯಪುರ (ರೈ.ಸಂ. 07328) ರೈಲು ನವೆಂಬರ್‌ 2 ರಿಂದ ನಿತ್ಯ ಸಂಜೆ 4.30ಕ್ಕೆ ಮಂಗಳೂರು ಜಂಕ್ಷನ್‌ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 11.45ಕ್ಕೆ ವಿಜಯಪುರ ತಲುಪಲಿದೆ.

ಒಂದು 3 ಟಯರ್ ಎಸಿ, ಆರು ಸೆಕೆಂಡ್ ಕ್ಲಾಸ್ ಸ್ಲೀಪರ್, ಐದು ಜನರಲ್‌ ಸೆಕೆಂಡ್ ಕ್ಲಾಸ್‌, 2 ಲಗೇಜ್‌ ಸೇರಿದಂತೆ 14 ಬೋಗಿಗಳನ್ನು ಈ ರೈಲು ಹೊಂದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು