ಆರ್ಥಿಕ ರಾಜಧಾನಿಯಾಗಿ ಮಂಗಳೂರು ಅಭಿವೃದ್ಧಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

ಆರ್ಥಿಕ ರಾಜಧಾನಿಯಾಗಿ ಮಂಗಳೂರು ಅಭಿವೃದ್ಧಿ

Published:
Updated:
Deccan Herald

ಮಂಗಳೂರು: ರಾಜ್ಯದ ಆರ್ಥಿಕ ರಾಜಧಾನಿಯನ್ನಾಗಿ ಮಂಗಳೂರು ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಈಗಾಗಲೇ ಮೊದಲ ಸುತ್ತಿನ ಸಭೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾಸೋದ್ಯಮ, ಕೈಗಾರಿಕೆಗಳು ಸೇರಿದಂತೆ ಕರಾವಳಿಯಲ್ಲಿ ಸಮಗ್ರವಾಗಿ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದರು.

ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗೆ ಜಮೀನು ಗುರುತಿಸಿದ್ದು, ಪ್ರಕ್ರಿಯೆ ಆರಂಭಕ್ಕೆ ಸೂಚಿಸಲಾಗಿದೆ. ಖಾಸಗಿ ಬಸ್‌ ನಿಲ್ದಾಣ, ಮೇಲು ಸೇತುವೆಗಳು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಬಾಕಿ ಇರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೂ ವೇಗ ನೀಡಲಾಗುವುದು. ಮುಂದಿನ ತಿಂಗಳು ಮತ್ತೊಮ್ಮೆ ಬಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಹೇಳಿದರು.

₹ 238 ಕೋಟಿ ನಷ್ಟ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯ ಶೇಕಡ 128ರಷ್ಟು ಮಳೆಯಾಗಿದೆ. ಅತಿವೃಷ್ಟಿಯಿಂದ ₹ 238 ಕೋಟಿಯಷ್ಟು ಸಾರ್ವಜನಿಕ ಆಸ್ತಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹ 25 ಕೋಟಿ ಲಭ್ಯವಿದ್ದು, ಬಳಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮತ್ತೆ ಅನುದಾನ ಒದಗಿಸಲಾಗುವುದು ಎಂದರು.

ಕೊಳೆರೋಗ ಮತ್ತು ಹಳದಿ ರೋಗದಿಂದ 19,000 ಹೆಕ್ಟೇರ್‌ ವಿಸ್ತೀರ್ಣದ ಅಡಿಕೆ ಬೆಳೆಗೆ ಹಾನಿಯಾಗಿದೆ. ಕರಿಮೆಣಸು ಮತ್ತು ರಬ್ಬರ್‌ ಬೆಳೆಗೂ ಹಾನಿಯಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಜಿಲ್ಲೆಯ ಶಾಸಕರು, ಸಂಸದರು ಒತ್ತಾಯಿಸಿದ್ದಾರೆ. ಡೀಮ್ಡ್‌ ಅರಣ್ಯದಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸದೇ ಇರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಎಲ್ಲ ವಿಷಯಗಳನ್ನೂ ಗಮನದಲ್ಲಿ ಇರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮರಳಿನ ಸಮಸ್ಯೆ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಸಿ, ಪರಿಹಾರ ಒದಗಿಸಲಾಗುವುದು. ವೆನ್ಲಾಕ್‌ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದ ಹಾಸಿಗೆಗಳ ಕೊರತೆ ನೀಗಲು ಕ್ರಮ ಜರುಗಿಸಲಾಗುವುದು. ಮಳೆಯಿಂದ ಮೀನುಗಾರರಿಗೆ ಹೆಚ್ಚಿನ ಹಾನಿಯಾಗಿದೆ. ಮೀನುಗಾರರಿಗೆ ನೆರವು ನೀಡುವ ಕುರಿತು ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಠಿಣ ಕ್ರಮ ನಿಶ್ಚಿತ: ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ. ಹತ್ಯೆಯಲ್ಲಿ ಯಾವುದಾದರೂ ಸಂಘಟನೆಗಳು ಭಾಗಿ ಆಗಿದ್ದಲ್ಲಿ ರಾಜ್ಯ ಸರ್ಕಾರದ ಮಿತಿಯೊಳಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಘಟನೆಗಳ ನಿಷೇಧ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಕ್ರಮ ನಡೆದಿದ್ದರೆ ಕ್ರಮ ಜರುಗಿಸುವುದಾಗಿ ಹೇಳಿರುವುದು ನಿಜ. ಅದಕ್ಕೆ ನಾನು ಈಗಲೂ ಬದ್ಧ. ಆದರೆ, ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ನನ್ನ ಮೊದಲ ಆದ್ಯತೆ. ನಂತರದ ದಿನಗಳಲ್ಲಿ ಅಕ್ರಮದ ಕುರಿತು ಯೋಚಿಸುತ್ತೇನೆ’ ಎಂದರು.

ಸಚಿವೆ ಡಾ.ಜಯಮಾಲಾ, ವಿಧಾನ ಪರಿಷತ್‌ ಸದಸ್ಯರಾದ ಕೆ.ಹರೀಶ್‌ಕುಮಾರ್, ಬಿ.ಎಂ.ಫಾರೂಕ್, ಎಸ್‌.ಎಲ್‌.ಭೋಜೇಗೌಡ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್‌.ರವಿಕಾಂತೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !