ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾರಾಧನೆ ಉತ್ಸವ: ಬಾದಾಮಿಗೆ ‌₹ 3 ಸಾವಿರ, ಗೇರುಬೀಜಕ್ಕೆ ₹ 2,500

Last Updated 5 ಡಿಸೆಂಬರ್ 2018, 10:11 IST
ಅಕ್ಷರ ಗಾತ್ರ

ಮಂಗಳೂರು: ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿಯ ವತಿಯಿಂದ ಶರವು ಮಹಾಗಣಪತಿ ದೇವರ 149ನೇ ವರ್ಷದ ದೀಪಾರಾಧನೆ ಉತ್ಸವ ಮಣ್ಣಗುಡ್ಡೆಯಲ್ಲಿ ಮಂಗಳವಾರ ಮಧ್ಯರಾತ್ರಿ ವಿಜೃಂಭಣೆಯಿಂದ ನಡೆಯಿತು.

ಬಳಿಕ ನಡೆದ ಹಣ್ಣು–ತರಕಾರಿಗಳ ಏಲಂನಲ್ಲಿ ಸಾಕಷ್ಟು ಮಂದಿ ಭಕ್ತರು ಉತ್ತಮ ಬೆಲೆಗೆ ದೇವರ ಪ್ರಸಾದ ಖರೀದಿಸಿದರು.

ದೇವರ ಸಮ್ಮುಖದಲ್ಲಿ ಅರ್ಚಕರ ಉಪಸ್ಥಿತಿಯಲ್ಲಿ ನಡೆದ ಏಲಂಲ್ಲಿ 250 ಗ್ರಾಂನ ಬಾದಾಮಿಯನ್ನು ಚಾರ್ಟರ್ಡ್‌ ಅಕೌಂಟೆಂಟ್‌ ಶ್ರೀರಾಮ್‌ ಅವರು ₹ 3 ಸಾವಿರಕ್ಕೆ ಪಡೆದುಕೊಂಡರು. 200 ಗ್ರಾಂ ಗೇರುಬೀಜವನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ ₹ 2,500ಕ್ಕೆ ಪಡೆದುಕೊಂಡರು.

ದೇವರ ದೀಪಾರಾಧನೆ ಬಳಿಕ ಮಧ್ಯರಾತ್ರಿ 1.30ರಿಂದ 3 ಗಂಟೆಯವರೆಗೆ ಏಲಂ ನಡೆಯಿತು. ಚೇತನಾ ಅವರು 1 ತೋತಾಪುರಿ ಮಾವಿನ ಹಣ್ಣನ್ನು ₹ 120ಕ್ಕೆ ಪಡೆದುಕೊಂಡರು. ಅನಿಲ್‌ ರಾವ್ ಅವರು 5 ಮಾವಿನಕಾಯಿಯನ್ನು ₹ 200 ಕೊಟ್ಟು ಪಡೆದುಕೊಂಡರು. ಕಿರಣ್‌ ಪ್ರಸಾದ್ ಶೆಟ್ಟಿ ಅವರು 200 ಗ್ರಾಂ ದ್ರಾಕ್ಷಿಯನ್ನು ₹ 180ಕ್ಕೆ ಪಡೆದರೆ, ಸುಧೀರ್ ಪೈ ಅವರು ತಾಳಿಪ್ಪಾಡಿ ಮಾವನ್ನು ₹ 400ಕ್ಕೆ ಪಡೆದುಕೊಂಡರು.

ಸುಧೀರ್‌ ಕಿಣಿ ಅವರು ನೇಂದ್ರ ಬಾಳೆಗೊನೆಯನ್ನು ₹ 500ಕ್ಕೆ ಪಡೆದುಕೊಂಡರೆ, ಶಶಿಕಾಂತ್‌ ಅವರು 10 ಗೆಂದಾಳಿ ಬೊಂಡದ ಗೊಂಚಲನ್ನು ₹ 300 ನೀಡಿ ಪಡೆದುಕೊಂಡರು. ಇನ್ನಷ್ಟು ಗೆಂದಾಳಿ ಬೊಂಡದ ಗೊಂಚಲು ಬಹುತೇಕ ₹ 300ಕ್ಕೆ ಮಾರಾಟವಾದವು. ಅಂಜೂರ ಹಣ್ಣಿಗೆ ₹ 180, ಕೆಂಪು, ಕಪ್ಪು ದ್ರಾಕ್ಷಿಗೆ ₹ 180ರಂತೆ ದುಡ್ಡು ಕೊಟ್ಟು ಖರೀದಿಸಲಾಯಿತು.

ಏಲಂನ ನಂತರವೂ ಸಾಕಷ್ಟು ಪ್ರಮಾಣದಲ್ಲಿ ತರಕಾರಿ, ಹಣ್ಣು ಉಳಿದಿದ್ದವು. ಅವುಗಳನ್ನು ಮಂಗಳಾದೇವಿ, ಉರ್ವ ಮಾರಿಗುಡಿ, ರಥಬೀದಿಯ ಮುಖ್ಯಪ್ರಾಣ ದೇವಸ್ಥಾನಗಳಿಗೆ ನೀಡಲಾಯಿತು.

ಸಂಜೆ ಭಜನಾ ಕಾರ್ಯಕ್ರಮವನ್ನು ಪ್ರಸೂತಿ ತಜ್ಞೆ ಡಾ.ಆರ್‌.ರತಿದೇವಿ ಉದ್ಘಾಟಿಸಿದರು. ಉದ್ಯಮಿ ಆರೂರು ಪ್ರಸಾದ್ ರಾವ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಅನುಶ್ರೀ ಮತ್ತು ಸ್ವಾತಿ ರಾವ್‌ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ ಉರ್ವದ ಯಕ್ಷಾರಾಧನಾ ಕಲಾಕೇಂದ್ರದ ಸುಮಂಗಲಾ ರತ್ನಾಕರ ರಾವ್‌ ಮತ್ತು ಬಳಗದವರಿಂದ ‘ಶಿವಭಕ್ತ ವೀರಮಣಿ’ ಯಕ್ಷಗಾನ ಪ್ರದರ್ಶನಗೊಂಡಿತು.

ಮಣ್ಣಗುಡ್ಡೆ ಸೇವಾ ಸಮಿತಿ ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಶರವು ರಾಘವೇಂದ್ರ ಶಾಸ್ತ್ರಿ, ವೈ.ರಮೇಶ್‌ ಭಟ್‌, ಅಧ್ಯಕ್ಷ ಬಿ.ವಾಸುದೇವ ರಾವ್‌, ಉಪಾಧ್ಯಕ್ಷರಾದ ಪಿ.ವೆಂಕಟೇಶ್‌ ರಾವ್, ರಮಾನಂದ ಪಾಂಗಳ್‌, ಕಾರ್ಯದರ್ಶಿ ಪಿ.ಭಾರ್ಗವ ತಂತ್ರಿ, ಜಂಟಿ ಕಾರ್ಯದರ್ಶಿ ಗುರುಚರಣ್‌ ಎಚ್‌.ಆರ್.ಖಜಾಂಚಿ ಪಿ.ರಾಮಮೂರ್ತಿ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT