ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುವಿಗೆ ಕುತ್ತು ಬರಲು ಬಿಡಬೇಡಿ: ಪ್ರೊ.ಬಿ.ಎ.ವಿವೇಕ ರೈ

ಕರಾವಳಿ ಜನಪ್ರತಿನಿಧಿಗಳಿಗೆ ರೈ ಕಿವಿಮಾತು
Last Updated 30 ಸೆಪ್ಟೆಂಬರ್ 2020, 12:36 IST
ಅಕ್ಷರ ಗಾತ್ರ

ಮಂಗಳೂರು: ‘ತುಳು ಕಲಿಕೆಗೆ ಭಂಗ ಬಾರದಂತೆ ಕರಾವಳಿಯ ಜನಪ್ರತಿನಿಧಿಗಳು ಅಸ್ಥೆ ವಹಿಸಬೇಕು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚೊಚ್ಚಲ ಅಧ್ಯಕ್ಷರಾದ, ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಆಗ್ರಹಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ತುಳು ಕಲಿಕೆಗೂ ಬಂತು ಕುತ್ತು’ ವರದಿಗೆ ಪ್ರತಿಕ್ರಿಯಿಸಿರುವ ಅವರು, ‘ಉಭಯ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ತುಳುವರೇ. ಈ ಬಗ್ಗೆ ಅವರು ಸ್ಪಂದಿಸಬೇಕು. ತುಳು ಕಲಿಸುವ ಅತಿಥಿ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಜಿಲ್ಲಾ ಪಂಚಾಯಿತಿ ಮೂಲಕ ವೇತನ ಕೊಡಿಸಲು ಕ್ರಮ ಕೈಗೊಳ್ಳಬೇಕು. ಹಾಲಿ ಗೌರವ ಸಂಭಾವನೆ ಮೊತ್ತವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದ್ದಾರೆ.

‘ಅಕಾಡೆಮಿಗೆ ಅನುದಾನ ಕಡಿಮೆ ಇದೆ. ಆದರೆ, ಸಾ.ಶಿ.ಇಲಾಖೆ ಅಥವಾ ಜಿಲ್ಲಾ ಪಂಚಾಯಿತಿಗಳಿಗೆ ಇದು ದೊಡ್ಡ ಮೊತ್ತವಲ್ಲ. ಕರಾವಳಿಯ ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥ ಮೂಲಕ ತುಳು ಉಳಿಸಿ–ಬೆಳೆಸಲು ಕ್ರಮ ವಹಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ರೋಹಿಣಾಕ್ಷ ಶಿರ್ಲಾಲು, ‘ಈ ನಿಟ್ಟಿನಲ್ಲಿ (ತುಳು ಉಳಿಸಿ–ಬೆಳೆಸುವ) ಅಗತ್ಯವಾಗಿ ಸ್ಪಂದಿಸಬೇಕಾಗಿದ್ದು, ಸಂಬಂಧಿತರಿಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನ ಸುದರ್ಶನ್ ಶೆಟ್ಟಿ, ‘ಇದು ತುಳುವಿಗೆ, ತುಳು ಭಾಷಿಕರಿಗೆ ಆಗುತ್ತಿರುವ ಅನ್ಯಾಯ. ತುಳು ಭಾಷಿಕರು @nimmasuresh ರವರಿಗೆ ಕೊಟ್ಟಷ್ಟು ಗೌರವ ಯಾವ ಶಿಕ್ಷಣ ಸಚಿವರಿಗೂ ಸಿಕ್ಕಿಲ್ಲ ಅಂತ ಕಾಣುತ್ತೆ. ಪ್ರತಿ ಬಾರಿಯೂ ತುಳುವರನ್ನ ಕೆಣಕಿಸುವ ಪ್ರಯತ್ನ ಮಾಡಬೇಡಿ @CTRavi_BJP , @BSYBJP ಇದು ನೀವು #NEP2020 ಮಾಡುವ ದ್ರೋಹವಲ್ಲವೇ??’ ಎಂದು ‘ಪ್ರಜಾವಾಣಿ’ ವರದಿಯನ್ನು ಟ್ಯಾಗ್ ಮಾಡಿ ಟ್ವೀಟ್‌ ಮಾಡಿದ್ದಾರೆ.

ತುಳು ಹೋರಾಟಗಾರ ಮಹಿ ಮೂಲ್ಕಿ, ‘ಹಲ್ಲುಕಿತ್ತ ಹಾವುಗಳು, ಬೊಗಳಲು ತಿಳಿಯದ ನಾಯಿಗಳು, ಬೇಟೆ ಬರದ ಹುಲಿ, ಬಿಲ ಸೇರುವ ಇಲಿಗಳಿರುವಾಗ, ತುಳುವಿನ ಪಾಲಿಗೆ ಇಷ್ಟೇ! ತುಳುವರು ಯಾವತ್ತಿದ್ದರೂ ಎರಡನೇ ದರ್ಜೆ ನಾಗರಿಕರು, ನೀವು ಮಾಡಿದ ಪಾಪ ಈಗ ಅನುಭವಿಸಿ!!!... ಮತ್ತೇನನ್ನು ಬಯಸಲು ಸಾಧ್ಯ ಇವರಿಂದ? ಮಲತಾಯಿ ಯಾವತ್ತಿದ್ದರೂ ಮಲತಾಯಿಯೇ..’ ಎಂದು ಟ್ಯಾಗ್ ಮಾಡಿ ಟ್ವೀಟ್‌ ಮಾಡಿದ್ದಾರೆ.

ನವೀನ್‌ ಗೌಡ ಎಚ್.ಸಿ. ‘ಹಿಂದಿ ಉತ್ತೇನಜನಕ್ಕೆ ಬಹುಕೋಟಿ ವ್ಯಯ ಮಾಡುವ ಇವರು, ನಮ್ಮ ನಾಡಿನ ತುಳು ಅಭಿವೃದ್ಧಿಗೆ ಬೇಜವಾಬ್ದಾರಿತನ ಹೊಂದಿದ್ದಾರೆ ತುಳು ಮಾತನಾಡುವ ಭಾಗದ ಸಂಸದರು ಬಿಜೆಪಿಯವರೆ ಇದ್ದೂ, ಸರ್ಕಾರಗಳು ಬಿಜೆಪಿಯದ್ದು, ತುಳು ಭಾಷೆಯನ್ನು ಸಂವಿಧಾನ ಬದ್ಧ ಮಾಡಲು ಒತ್ತಡ ಹಾಕಬೇಕು. ಇದೇ ರೀತಿಯಾದರೆ ತುಳು ಸಾಹಿತ್ಯ ಅಕಾಡೆಮಿಯನ್ನು ನಿಧಾನಕ್ಕೆ ಕುಂಠಿತಗೊಳಿಸುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.

‘ತುಳು ಭಾಷೆಗೆ ಸ್ವ ಇಲಾಖೆ ಅಗತ್ಯ ಇದೆ’ ಎಂದು ಚೇತನ್‌ ಕುಮಾರ್, ‘ತುಳುವಿಗೆ ಕೊರತೆ ಮಾಡಿ, ಕಡ್ಡಾಯ ಹೇರಿಕೆ ನಿಲ್ಲಿಸಿ’ ಎಂದು ಆದರ್ಶ ಎಚ್.ಎಂ.,‘ತುಳು ಅತಿಥಿ ಶಿಕ್ಷಕರನ್ನು ಕಾಯಂ ಮಾಡಿ’ ಎಂದು ಕೃಷಿಕ ಎ.ವಿ., ‘ಹಿಂದಿ ಕಲಿಸೋ ಸರ್ಕಾರ ತುಳು ಕಲಿಸಲ್ಲ ಎಂದರೆ ಎಂಥ ದುರಂತಾ’ ಎಂದು ಜಗನ್ ಕಾರೇಹಳ್ಳಿ, ಸಂದೀಪ್ ಪಾಟೀಲ್, ತುಳುವೆದಿ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT